ಕಲಬುರಗಿ: ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಕಲಬುರಗಿ ನಗರದ ಅನೇಕ ಬಡಾವಣೆಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದರೆ, ತಾಲೂಕಿನ ಜಂಬಗಾ (ಬಿ) ಗ್ರಾಮದ ರಸ್ತೆ ಮಳೆ ಅಬ್ಬರಕ್ಕೆ ಬಹುತೇಕ ಕೊಚ್ಚಿಕೊಂಡು ಹೋಗಿದೆ.
ಗ್ರಾಮದ ರಸ್ತೆ ಒಡೆದ ಪರಿಣಾಮ ಹೊಲಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಎರಡು ವಾರದ ಹಿಂದೆಯಷ್ಟೇ ರೈತರು ಬಿತ್ತನೆ ಮಾಡಿದ್ದರು. ಈಗ ರೈತರ ಹೊಲಗಳಿಗೆ ನೀರು ನುಗ್ಗಿ ಕೆರೆಯಂತಾಗಿದೆ. ಮೊಳಕೆಯೊಡೆದ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಇತ್ತ, ಉದನೂರ ಹಳ್ಳ ಸಹ ತುಂಬಿ ಹರಿದ ಪರಿಣಾಮ ಉದನೂರ ಮತ್ತು ನಂದಿಕೂರ ಅಕ್ಕ-ಪಕ್ಕದ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ತರಕಾರಿ ತೋಟಗಳಿಗೆ ಹಳ್ಳದ ನೀರು ನುಗ್ಗಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ರಾತ್ರಿ ಜಾಗರಣೆ: ದಿಢೀರನೆ ರಾತ್ರಿ ಒಂದು ಗಂಟೆಗೆ ಶುರುವಾದ ಮಳೆ ಸುಮಾರು ಹೊತ್ತು ಎಡಬಿಡದೆ ಸುರಿಯಿತು. ರಭಸದ ಮಳೆಯಿಂದ ಅನೇಕ ಕಡೆಗಳಲ್ಲಿ ತಗ್ಗು ಪ್ರದೇಶದ ಮನೆಗೆಗಳಿಗೆ ನೀರು ನುಗ್ಗಿತ್ತು. ಹೀಗಾಗಿ ಜನರು ರಾತ್ರಿಯಿಡೀ ಜಾಗರಣೆ ಮಾಡುವ ಪರಿಸ್ಥಿತಿ ಉಂಟಾಯಿತು.
ಜೆ.ಆರ್.ನಗರ, ಕೈಲಾಸ ನಗರ, ಜನತಾ ಲೇಔಟ್, ಬ್ರಹ್ಮಪುರ ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿ ಸಾಮಗ್ರಿಗಳು ಮತ್ತು ವಸ್ತುಗಳ ತೊಯ್ದು ತೊಪ್ಪೆಯಾಗಿವೆ. ಅಲ್ಲದೆ, ಲಾಲ್ ಗೇರಿ ಕ್ರಾಸ್, ಬಸ್ ನಿಲ್ದಾಣ ಮುಂಭಾಗದ ಕೆಎಚ್ ಬಿ ಕಾಂಪ್ಲೆಕ್ಸ್, ಜೇವರ್ಗಿ ಕ್ರಾಸ್ ಸೆಂಚೂರಿ ಕಾಂಪ್ಲೆಕ್ಸ್, ಸೇಡಂ ರಸ್ತೆಯ ಖರ್ಗೆ ಬಂಕ್ ಮುಂಭಾಗದ ನೆಲ ಮಳಿಗೆಗಳ ಅಂಗಡಿಗಳಿಗೂ ಮಳೆ ನೀರು ಹರಿದಿದೆ.
ಲಾಲ್ಗೇರಿ ಕ್ರಾಸ್ ನಲ್ಲಿ ರಸ್ತೆ ಮೇಲೆ ಅಪಾರ ಪ್ರಮಾಣದ ಮಳೆ ನೀರು ಹರಿಯುತ್ತಿದೆ. ತುಂಬಿ ಹರಿಯುತ್ತಿರುವ ಚರಂಡಿ ಮಿಶ್ರಿತ ನೀರಿನ ಮಧ್ಯೆ ಸಿಲುಕಿ ವಾಹನ ಸವಾರರು ಪರದಾಡುವಂತಾಗಿದೆ. ಅನಿವಾರ್ಯವಾಗಿ ಇದೇ ನೀರಿನಲ್ಲಿ ಸಾರ್ವಜನಿಕರು ಸಂಚರಿಸುತ್ತಿದ್ದಾರೆ.