Advertisement

Heavy Rain; ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭೂಕುಸಿತ ಭೀತಿ

12:15 AM Jul 31, 2024 | Team Udayavani |

ಶಿವಮೊಗ್ಗ/ಚಿಕ್ಕಮಗಳೂರು: ಇನ್ನೇನು ಮಳೆ ಕಡಿಮೆಯಾಯ್ತು ಎಂದು ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಮತ್ತೆ ಆಘಾತ ಎದುರಾಗಿದೆ. ಮಲೆನಾಡು ಭಾಗದಲ್ಲಿ ದಿಢೀರ್‌ ಭಾರೀ ಮಳೆಯಾಗುತ್ತಿದ್ದು ಹಲವೆಡೆ ಭೂ ಕುಸಿತ ಸಂಭವಿಸಿದೆ. ತುಂಗಾ, ಭದ್ರಾ, ಹೇಮಾವತಿ ತೀರದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇದರಿಂದ ಸೇತುವೆಗಳು ಮುಳುಗಡೆಯಾಗಿದ್ದು ನೂರಾರು ಗ್ರಾಮಗಳ ಸಂಪರ್ಕ ಕಳೆದುಕೊಂಡಿವೆ.

Advertisement

ಪ್ರಮುಖವಾಗಿ ಶಿರಾಡಿ ಘಾಟಿ, ಚಾರ್ಮಾಡಿ ಘಾಟಿ ಪ್ರದೇಶಲ್ಲಿ ಭೂ ಕುಸಿತ ಸಂಭವಿಸಿದ್ದು ಶಿರಾಡಿಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಚಾರ್ಮಾಡಿಯಲ್ಲಿ ಸಂಚಾರ ಪುನರಾರಂಭಿಸಲಾಗಿದೆ. ಇದೇ ರೀತಿ ಸಕಲೇಶಪುರ, ಮೂಡಿಗೆರೆ, ಕಳಸ, ಶೃಂಗೇರಿ, ನರಸಿಂಹರಾಜಪುರ ತಾಲೂಕಿನ ಹಲವೆಡೆ ಧರೆ, ಗುಡ್ಡ ಕುಸಿತ ಉಂಟಾಗಿದ್ದು ಆತಂಕ ಮನೆ ಮಾಡಿದೆ.

ತುಂಗಾ ನದಿ ಒಳಹರಿವು ಮಂಗಳವಾರ ಬೆಳಗ್ಗೆ 50 ಸಾವಿರ ಕ್ಯುಸೆಕ್‌ಗೆ ಏರಿಕೆಯಾಗಿದೆ. ಮಧ್ಯಾಹ್ನ 2 ಗಂಟೆ ಹೊತ್ತಿಗೆ 77 ಸಾವಿರ ಕ್ಯುಸೆಕ್‌ಗೆ ದಾಟಿದ್ದು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ನೆರೆ ಭೀತಿ ಆವರಿಸಿದೆ. ತೀರ್ಥಹಳ್ಳಿಯ ರಾಮಮಂಟಪ ಮತ್ತೆ ಮುಳುಗಿದ್ದು ಪ್ರವಾಹದ ಮನ್ಸೂಚನೆ ತೋರಿಸಿದೆ.

ಚಿಕ್ಕಮಗಳೂರಿನಲ್ಲೂ ಮಳೆ ಮತ್ತೆ ಆರಂಭವಾಗಿದ್ದು ತೀರ ಪ್ರದೇಶದ ಗ್ರಾಮಗಳಿಗೆ ನೀರು ನುಗ್ಗಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಹೆಬ್ಟಾಳೆ ಸೇತುವೆ ಭದ್ರಾನದಿಯಲ್ಲಿ ಮತ್ತೆ ಮುಳುಗಿದೆ. ಚಿಕ್ಕಮಗಳೂರು- ಉಡುಪಿ-ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ರಸ್ತೆಗೆ ಅಡ್ಡಲಾಗಿ ಮರಬಿದ್ದು ಸಂಚಾರಕ್ಕೆ ಅಡ್ಡಿಯಾ ಗಿತ್ತು. ಘಾಟಿ ಪ್ರದೇಶದಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಮಳೆ ಹೀಗೆ ಮುಂದು ವರಿದರೆ ಘಾಟಿ ಪ್ರದೇಶದಲ್ಲಿ ಕುಸಿ ಯುವ ಭೀತಿಯೂ ಎದುರಾಗಿದೆ.

ತುಂಗಾ ನದಿ ಪ್ರವಾಹ ಸೃಷ್ಟಿಷ್ಟಿಸಿದ್ದು ಶೃಂಗೇರಿ ಶಾರದಾ ದೇವಸ್ಥಾನದ ಸಮೀಪದಲ್ಲಿರುವ ಕಪ್ಪೆ ಶಂಕರ ಮುಳುಗಿದೆ. ಬಾಳೆಹೊನ್ನೂರು ಸಮೀಪದ ಮಹಲ್ಗೊàಡು, ಭೈರೇಗುಡ್ಡ ಗ್ರಾಮಗಳಿಗೆ ಭದ್ರಾನದಿ ನೀರು ನುಗ್ಗಿದ್ದು ಹಲವು ಮನೆಗಳು ಜಲಾವೃತಗೊಂಡಿವೆ. ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಾಳೆಹೊನ್ನೂರು ಪಟ್ಟಣ ಸಮೀಪದಲ್ಲಿ ಭದ್ರಾನದಿ ಉಕ್ಕಿ ಹರಿದಿದ್ದು ಸಂತೆ ಮೈದಾನ ಜಲಾವೃತಗೊಂಡಿದೆ.

Advertisement

ರಸ್ತೆ ಬದಿಗಳಲ್ಲಿ ಬರೆ ಕುಸಿತ ಉಂಟಾಗಿದೆ. ರಸ್ತೆಗಳಿಗೆ ನದಿನೀರು ಆವರಿಸಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಕೆರೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ನಿಂತಿದ್ದು ಲಾರಿ ಚಾಲಕ ಇದರಲ್ಲೇ ಹೋಗಿ ಹುಚ್ಚಾಟ ಮೆರೆದಿದ್ದಾನೆ.

ನರಸಿಂಹರಾಜಪುರ ತಾಲೂಕಿನ ದೊಂಬಿಹಳ್ಳ ಪ್ರವಾಹ ಉಂಟಾಗಿದ್ದು ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದು, ಶಾಲೆ, ಮದರಸ, ಸಂತೆ ಮೈದಾನ ಮನೆಗಳು ಜಲಾವೃತಗೊಂಡಿತ್ತು. ಬೋಟ್‌ ಬಳಸಿ ನೆರೆಯಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಬುಧವಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲೂಕಿನ ಅಂಗನವಾಡಿ, ಶಾಲಾ- ಕಾಲೇಜಿಗೆ ರಜೆ ನೀಡಲಾಗಿದೆ.

ಎಲ್ಲೆಲ್ಲಿ ಸೇತುವೆ ಮುಳುಗಡೆ, ಸಂಪರ್ಕ ಕಡಿತ?
- ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿ ಮೂಗಲಿ-ಹೆಬ್ಬನಹಳ್ಳಿ ಸಂಪರ್ಕಿಸುವ ರಸ್ತೆ ಸೇತುವೆ, ನಾರ್ವೆ- ಬಿರಡಹಳ್ಳಿ ಸಂಪರ್ಕಿಸುವ ರಸ್ತೆ, ಸೇತುವೆ ಮುಳುಗಡೆ
- ಹೊರನಾಡು-ಕಳಸ ಸಂಪರ್ಕದ ಹೆಬ್ಟಾಳೆ ಸೇತುವೆ ಮತ್ತೆ ಮುಳುಗಡೆ
- ಗೊರೂರು-ಹೊಳೆನರಸೀಪುರ ನಡುವಿನ ರಸ್ತೆ ಸಂಚಾರ ಕಡಿತ
- ಅರಕಲಗೂಡು ತಾಲೂಕು ಗೊರೂರು-ಹೊಳೆನರಸೀಪುರ ನಡುವಿನ ರಸ್ತೆ ಸಂಚಾರ ಕಡಿತ
- ಬಾಳೆಹೊನ್ನೂರು ಸಮೀಪದ ಮಹಲ್ಗೊàಡು, ಭೈರೇಗುಡ್ಡ ಗ್ರಾಮಗಳು ಜಲಾವೃತ
- ಬಾಳೆಹೊನ್ನೂರು, ಮಾಗುಂಡಿ, ಕೊಟ್ಟಿಗೆಹಾರ ಸಂಪರ್ಕ ಕಡಿತ
- ಕುದುರೆಮುಖ- ಕಳಸ ರಸ್ತೆ ಮೇಲೆ ನೀರು
- ಕಳಸ- ಕಳಕೋಡು ಸಂಪರ್ಕದ ಕೋಟೆಹೊಳೆ ಸೇತುವೆ ಮುಳುಗುವ ಹಂತದಲ್ಲಿ
- ಕೊಪ್ಪ ತಾಲೂಕಿನ ಕೊಗ್ರೆ, ಜಯಪುರ, ಶೃಂಗೇರಿ ಸಂಪರ್ಕ ಕಡಿತ
- ಹೊರನಾಡು ಸಂಪರ್ಕಿಸುವ ರಸ್ತೆ ಮೇಲೆ ಬೃಹತ್‌ ಗಾತ್ರದ ಮರ ಬಿದ್ದು ರಸ್ತೆ ಸಂಪರ್ಕ ಕಡಿತ
- ಹೇಮಾವತಿ ನದಿ ಪಾತ್ರದ ಮರಡಿ, ಹೊನ್ನೆಗೌಡನಹಳ್ಳಿ, ಅತ್ನಿ, ಹೆಬ್ಟಾಲೆ, ಬಸವನಹಳ್ಳಿ,ಅಣಿಗನಹಳ್ಳಿ ಗ್ರಾಮಗಳ ಬಳಿ ಪ್ರವಾಹದ ಭೀತಿ.

ಎಲ್ಲೆಲ್ಲಿ ಭೂಕುಸಿತ?
- ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಪ್ರದೇಶದಲ್ಲಿ ಗುಡ್ಡ ಕುಸಿತ
- ಹಾಸನ ರಾಜ್ಯ ಹೆದ್ದಾರಿ 107ರ ಬಾಗರವಳ್ಳಿ ಗ್ರಾಮ ಸಮೀಪ ಭೂಕುಸಿತ
- ಹೆತ್ತೂರು ಸಮೀಪ ಮತ್ತೆ ಭೂಮಿ ಕುಸಿದಿದ್ದು ರಾಜ್ಯ ಹೆದ್ದಾರಿ ಅಪಾಯದ ಸ್ಥಿತಿ
- ಚಾರ್ಮಾಡಿ ಘಾಟಿ 9ನೇ ತಿರುವಿನಲ್ಲಿ ಭೂಕುಸಿತವಾಗಿದ್ದು ಅನಂತರ ಸಂಚಾರಕ್ಕೆ ಅವಕಾಶ
- ಕಳಸ-ಹೊರನಾಡು-ಶೃಂಗೇರಿ ಸಂಪರ್ಕ ರಸ್ತೆಯ ಅಬ್ಬಿಕಲ್ಲು ಎಂಬಲ್ಲಿ ರಸ್ತೆ ಬಳಿ ಭೂಕುಸಿತ
- ನೇಡಂಗಿಯಲ್ಲಿ ಭೂಮಿ ಕುಸಿದು ಶೃಂಗೇರಿ- ಮೆಣಸಿನಹಾಡ್ಯ-ಹೊರನಾಡು ಸಂಪರ್ಕ ಕಡಿತ

Advertisement

Udayavani is now on Telegram. Click here to join our channel and stay updated with the latest news.

Next