Advertisement

ಹಲವೆಡೆ ಮಳೆ: ಕೊಲ್ಲೂರಿನಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ

06:15 AM Jun 28, 2018 | |

ಕೋಟೇಶ್ವರ: ಗೋಪಾಡಿಯ ಕಡಲ ಕಿನಾರೆಯ ಪಡುಹೆಬ್ರಿಮನೆ ಪರಿಸರದ ನಿವಾಸಿ ಸುರೇಂದ್ರ ಪೂಜಾರಿ, ಚಂದು ಪೂಜಾರಿ ಸೀತಾ ಪೂಜಾರಿ ಅವರ ವಾಸ್ತವ್ಯದ ಮನೆಗಳು ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಜಲಾವೃತಗೊಂಡಿವೆ.

Advertisement

ಕಳೆದ 1 ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಈ ಪ್ರದೇಶದ ಜನಜೀವನ ಅಸ್ತವ್ಯಸ್ತಗೊಂಡಿದೆ. ಶಾಲೆಗೆ ತೆರಳುವ ಮಕ್ಕಳನ್ನು ಹಿರಿಯರು ಹೆಗಲ ಮೇಲೆ ಹೊತ್ತು ಸಾಗಿಸಬೇಕಾದ ಪರಿಸ್ಥಿತಿಯಿದ್ದು, ಮಹಿಳೆಯರು ಹಾಗೂ ವಯೋವೃದ್ಧರು ಪೇಟೆಗೆ ತೆರಳಲು ಹರಸಾಹಸ ಪಡಬೇಕಾಗಿದೆ.

ಜನಪ್ರತಿನಿಧಿಗಳ ಭರವಸೆ
ಗೋಪಾಡಿ ಗ್ರಾ.ಪಂ. ಅಧ್ಯಕ್ಷ ಸರಸ್ವತಿ ಪುತ್ರನ್‌, ಪಿಡಿಒ ಗಣೇಶ್‌ ಸ್ಥಳಕ್ಕೆ ಭೇಟಿ ಇತ್ತು ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಕೋರಲಾಗುವುದು ಎಂದವರು ತಿಳಿಸಿದ್ದಾರೆ.

ಕಡಲು ಪ್ರಕ್ಷುಬ್ಧ, ಕಡಲ್ಕೊರೆತದ ಭೀತಿ
ಕೋಟೇಶ್ವರ
: ಕರಾವಳಿಯ ಉದ್ದಾನುದ್ದಕ್ಕೂ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಇದೇ ರೀತಿ ಮಳೆ ಮುಂದುವರಿದಲ್ಲಿ ಈ ಕಡಲ್ಕೊರೆತದ ಭೀತಿ ಸಮುದ್ರ ತೀರ ನಿವಾಸಿಗಳನ್ನು ಕಾಡಿದೆ.


ಹಳೆಅಳಿವೆ, ಬೀಜಾಡಿ, ಗೋಪಾಡಿಯ ಕಡಲ ಕಿನಾರೆಯಲ್ಲಿ ಸಮುದ್ರದ ಅಲೆಗಳು ದಿನದಿಂದ ದಿನಕ್ಕೆ  ರೌದ್ರರೂಪದಲ್ಲಿ ಕಲ್ಲಿನ ತಡೆಗೋಡೆಯನ್ನು ಬಡಿಯುತ್ತಿದ್ದು ಇದೇ ರೀತಿಯ ಗಾಳಿ ಮಳೆ ಮುಂದುವರಿದಲ್ಲಿ ಕಡಲ ತಡಿಯ ನಿವಾಸಿಗಳ ಗುಡಿಸಲು ನೀರು ಪಾಲಾಗುವ ಸಂಭವ ಕಂಡುಬರುತ್ತಿದೆ.

ಮಳೆಗೆ ತುಂಬಿ ಹರಿದ ಗದ್ದೆಗಳು
ಬಸ್ರೂರು:
ಬಳ್ಕೂರು, ಬಸ್ರೂರು, ಕಂದಾವರ ಮುಂತಾದಡೆ ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ನಾಟಿಯಾಗದ ಗದ್ದೆಗಳಲ್ಲಿ ನೀರು ತುಂಬಿ ಕೃಷಿಕರ ನಾಟಿ ಕಾರ್ಯಕ್ಕೆ ತೊಂದರೆಯಾಗಿದೆ.


ವಾರಾಹಿ ನೀರಿನ ಮಟ್ಟ ಏರಿರುವುದರಿಂದ ತೋಡು-ಸಾಲುಗಳಲ್ಲಿ ನೀರು ಹರಿದು ಹೋಗದೆ ಗದ್ದೆಗಳು ಜಲಾವೃತಗೊಂಡಿವೆ. ಇದರಿಂದ ರೈತರು ಭತ್ತದ ಸಸಿಯನ್ನು ನಾಟಿ ಮಾಡಲು ಸಾಧ್ಯವಾಗದೆ ಅತಂತ್ರರಾಗಿದ್ದಾರೆ. 

Advertisement

ಕೊಲ್ಲೂರಿನಲ್ಲಿ  ಉಕ್ಕಿ ಹರಿದ ಸೌಪರ್ಣಿಕಾ ನದಿ
ಕೊಲ್ಲೂರು:
ಕೊಲ್ಲೂರಿನ ಚರಿತ್ರೆಯಲ್ಲೇ ಪ್ರಥಮ ಎಂಬಂತೆ ಬುಧವಾರ ಬೆಳಗ್ಗಿನಿಂದ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿಯುತ್ತಿದ್ದು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.


ಕ್ಷೇತ್ರಕ್ಕೆ ಆಗಮಿಸುವ ಭಕ್ತರು ತೊಯ್ದ ಬಟ್ಟೆಯಲ್ಲೇ  ಶ್ರೀ ದೇವಿಯ ದರ್ಶನ ಪಡೆಯಬೇಕಾಯಿತು. ಜಡ್ಕಲ್‌, ಮುದೂರು, ಹಾಲ್ಕಲ್‌, ಸಳ್ಕೊàಡು, ಇಡೂರು, ವಂಡ್ಸೆ ಸಹಿತ ಕೆರಾಡಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಕೃಷಿಭೂಮಿ ಜಲಾವೃತಗೊಂಡಿದೆ. ಕೊಲ್ಲೂರಿನ ಸೌಪರ್ಣಿಕ ಹಾಗೂ ಕಾಶೀ ಹೊಳೆ ಉಕ್ಕಿ ಹರಿಯುತ್ತಿದ್ದು ಕಾಶೀ ಹೊಳೆಯ ಮುಖ್ಯರಸ್ತೆಯ ಸಂಪರ್ಕ ಕಡಿತದ ಭೀತಿ ಇದೆ.

ಕೊಲ್ಲೂರಿಗೆ ಸಾಗುವ ಮಾರ್ಗದ ಮಧ್ಯೆ ಇರುವ ಜಾಡಿ ಎಂಬಲ್ಲಿ ನೀರಿನ ಮಟ್ಟ ಏರಿದ್ದು ಆ ಭಾಗದ ಬಹುತೇಕ ಕೃಷಿ ಭೂಮಿಯು ಜಲಾವೃತಗೊಂಡು ಕೃಷಿ ನಾಶವಾಗಿದೆ. ಇಲ್ಲಿ ಅವೈಜ್ಞಾನಿಕ ಮಾದರಿಯಲ್ಲಿ ನಿರ್ಮಿಸಲಾದ ಕಿರು ಸೇತುವೆಯ ಒಳಚರಂಡಿಯ ನೀರು ಈ ಭಾಗದ ಗದ್ದೆಗೆ ಹರಿದು ಬರುತ್ತಿರುವುದರಿಂದ ಕೃಷಿ ಭೂಮಿ ಜಲಾವೃತಗೊಳ್ಳುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next