Advertisement

ರಾಜ್ಯ ಕರಾವಳಿಗೆ ಇಂದು ಮುಂಗಾರು ಪ್ರವೇಶ ಸಾಧ್ಯತೆ: ಭಾರೀ ಗಾಳಿ-ಮಳೆ ಮುನ್ಸೂಚನೆ

10:04 AM Jun 03, 2020 | sudhir |

ಮಂಗಳೂರು: ರಾಜ್ಯ ಕರಾವಳಿ ತೀರಕ್ಕೆ ಬುಧವಾರ ಮುಂಗಾರು ಅಪ್ಪಳಿಸಲಿದ್ದು, ಈ ಬಾರಿ ವಾಡಿಕೆಯಂತೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಕೇರಳ ರಾಜ್ಯಕ್ಕೆ ಮುಂಗಾರು ಮಾರುತ ಅಪ್ಪಳಿಸಿದ್ದು, ಜೂ. 3ರಂದು ರಾಜ್ಯಕ್ಕೆ ಪ್ರವೇಶ ಪಡೆಯಲಿದೆ. ಈ ವೇಳೆ ಕರಾವಳಿ ಭಾಗದಲ್ಲಿ ಭಾರೀ ಗಾಳಿ-ಮಳೆಯಾಗಲಿದ್ದು, ಸಮುದ್ರದ ಅಬ್ಬರ ಕೂಡ ಹೆಚ್ಚಾಗಿರಲಿದೆ. ರಾಜ್ಯ ಕರಾವಳಿ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಈ ಬಾರಿಯೂ ವಾಡಿಕೆಯಂತೆ ಮಳೆಯಾಗಬಹುದು ಎಂಬ ನಿರೀಕ್ಷೆ ಇದೆ. ಮುಂಗಾರು ಋತುವಿನ ಜೂನ್‌ನಿಂದ ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಒಟ್ಟು 3,019 ಮಿ. ಮೀ.ನಷ್ಟು ವಾಡಿಕೆ ಮಳೆಯಾಗಬೇಕು.

Advertisement

ಕಳೆದ ಬಾರಿ ರಾಜ್ಯ ಕರಾವಳಿಗೆ ವಾಡಿಕೆ ಗಿಂತ ತಡವಾಗಿ ಮುಂಗಾರು ಅಪ್ಪಳಿಸಿದ್ದು, 2019ರಲ್ಲಿ ಜೂ. 14ರಂದು ಮುಂಗಾರು ಪ್ರವೇಶ ಪಡೆದಿತ್ತು. ಜೂನ್‌-ಸೆಪ್ಟಂಬರ್‌ವರೆಗೆ ಮುಂಗಾರು ಋತುವಿನಲ್ಲಿ ದ.ಕ. ಜಿಲ್ಲೆಯಲ್ಲಿ ಶೇ. 5, ಉಡುಪಿ ಜಿಲ್ಲೆಯಲ್ಲಿ ಶೇ. 21 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 33ರಷ್ಟು ಮಳೆಯಾಗಿತ್ತು. ಒಟ್ಟು ಕರಾವಳಿ ಭಾಗದಲ್ಲಿ ಶೇ. 22ರಷ್ಟು ಮಳೆ ಪ್ರಮಾಣ ಹೆಚ್ಚಾಗಿತ್ತು.

ಕಳೆದ ತಿಂಗಳು ಬಂಗಾಲಕೊಲ್ಲಿಯಲ್ಲಿ ಸೃಷ್ಟಿಯಾದ “ಅಂಫಾನ್‌’ ಚಂಡಮಾರುತ ಕರಾವಳಿ ಭಾಗಕ್ಕೂ ಪರಿಣಾಮ ಬೀರಿತ್ತು. ಇದೀಗ ಅರಬಿ ಸಮುದ್ರದಲ್ಲಿ “ನಿಸರ್ಗ’ ಚಂಡಮಾರುತ ಸೃಷ್ಟಿಯಾಗಿದ್ದು, ಇದರ ಪರಿಣಾಮ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಭಾಗ ದಲ್ಲಿ ಈ ಬಾರಿ ಗರಿಷ್ಠ ತಾಪಮಾನ 39 ಡಿ.ಸೆ.ವರೆಗೂ ಏರಿಕೆಯಾ ಗಿತ್ತು. ಇದು ಕೂಡ ಮುಂಗಾರು ಪ್ರಬಲಗೊಳ್ಳಲು ಸಹಕಾರಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಬಿರುಸು ಪಡೆದ ಮಳೆ
ಅರಬಿ ಸಮುದ್ರದಲ್ಲಿ ಉಂಟಾದ “ನಿಸರ್ಗ’ ಚಂಡಮಾರುತ ಮತ್ತು ಕೇರಳ ಭಾಗಕ್ಕೆ ಮುಂಗಾರು ಪ್ರವೇಶಿಸಿದ ಹಿನ್ನೆಲೆ ರಾಜ್ಯ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಮಂಗಳವಾರ ಕೂಡ ದ.ಕ. ಜಿಲ್ಲೆಯಲ್ಲಿ ಗಾಳಿ-ಮಳೆಯಾಗಿದೆ. ಮಂಗಳೂರು ನಗರದಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ಮಳೆ ಆರಂಭಗೊಂಡು ರಾತ್ರಿ ಕೂಡ ಮುಂದುವರಿದಿತ್ತು.

ಕರಾವಳಿಯಲ್ಲಿ “ಆರೆಂಜ್‌ ಅಲರ್ಟ್‌’
ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಭಾಗದಲ್ಲಿ ಜೂ. 3ರಂದು “ಆರೆಂಜ್‌ ಅಲರ್ಟ್‌’ ಘೋಷಣೆ ಮಾಡಿದೆ. ಈ ವೇಳೆ ಕರಾವಳಿ ಭಾಗದಲ್ಲಿ 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಗುಡುಗು, ಗಾಳಿ ಮತ್ತು ಸಮುದ್ರದ ಅಬ್ಬರ ಕೂಡ ಹೆಚ್ಚಾಗಿರಲಿದೆ ಎಂದು ತಿಳಿಸಿದೆ.

Advertisement

ಕಾಸರಗೋಡು: ಆರೆಂಜ್‌ ಅಲರ್ಟ್‌
ಕಾಸರಗೋಡು: ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಜಿಲ್ಲೆಗಳಲ್ಲಿ ಜೂ. 3ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ಸೋಮವಾರ ಕೇರಳ ರಾಜ್ಯದ  ರಾವಳಿ ತೀರಕ್ಕೆ ಮುಂಗಾರು
ಅಪ್ಪಳಿಸಿದೆ. ಬುಧವಾರ ರಾಜ್ಯ ಕರಾವಳಿ ತೀರಕ್ಕೆ ಮುಂಗಾರು ಪ್ರವೇಶ ಪಡೆಯಲಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
– ಸುನಿಲ್‌ ಗವಾಸ್ಕರ್‌, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next