Advertisement
ಗಾಳಿ, ಮಳೆಗೆ ಹಲವೆಡೆ ಮರಗಳು ಧರೆಗುರುಳಿದ್ದು, ಅಪಾರ ನಷ್ಟ ಉಂಟಾಗಿದೆ. ಇನ್ನೂ ಎರಡು-ಮೂರು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಜಿಲ್ಲಾಧಿಕಾರಿ ಮನೆಯ ಮೇಲೆ ಮರಗಳು ಉರುಳಿ ಬಿದ್ದಿದ್ದು, ಜಿಲ್ಲಾಧಿಕಾರಿ ಕಾವಲು ಸಿಬ್ಬಂದಿಯ ಕೋಣೆ ಸಂಪೂರ್ಣ ಜಖಂಗೊಂಡಿದೆ. ಜಿಲ್ಲಾಧಿಕಾರಿ ನಿವಾಸಕ್ಕೂ ಹಾನಿಯಾಗಿದೆ. ಸಂಗಮದಲ್ಲಿರುವ ಕೇಶಮುಂಡನ ಸ್ಥಳ ಮತ್ತು ಬಟ್ಟೆ ಬದಲಿಸುವ ಕಟ್ಟಡ, ಮೂರ್ನಾಡು ಬಲಮುರಿಯ ಹಳೆಯ ಸೇತುವೆ ಜಲಾವೃತವಾಗಿದೆ. ವಿರಾಜಪೇಟೆ ತಾಲೂಕಿನ ಹಲವೆಡೆ ಗುಡ್ಡ ಕುಸಿತ ಉಂಟಾಗಿದೆ. ಮಳೆ ಹಿನ್ನೆಲೆಯಲ್ಲಿ ಜಿಲ್ಲಾವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.
Related Articles
Advertisement
ಗಾಜನೂರಿನ ಜಲಾಶಯ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ತುಂಗಾ, ಭದ್ರಾ ನದಿಯಲ್ಲಿ ಕೂಡ ನೀರಿನ ಮಟ್ಟ ಏರುತ್ತಿದ್ದು, ನದಿ ಪಾತ್ರದಲ್ಲಿನ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ತುಂಗಾ ಜಲಾಶಯ ಸಮೀಪದ ಮಂಡಗದ್ದೆ ಪಕ್ಷಿಧಾಮದಲ್ಲಿ ವಿದೇಶಿ ಬಾನಾಡಿಗಳು ಅಪಾಯಕ್ಕೆ ಸಿಲುಕಿವೆ. ಶರಾವತಿ ನದಿ ಹರಿವಿನ ಪ್ರಮಾಣದಲ್ಲೂ ಏರಿಕೆಯಾಗಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ 9384 ಕ್ಯೂಸೆಕ್ ಒಳಹರಿವಿದೆ. ಜಲಾಶಯದ ಮಟ್ಟ 1753.05 ಅಡಿಗೆ ತಲುಪಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಶನಿವಾರ ರಾತ್ರಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ಭಾನುವಾರ ಬೆಳಗ್ಗೆವರೆಗೂ ನೂರಾರು ವಾಹನಗಳು ರಸ್ತೆಯಲ್ಲಿಯೇ ನಿಲ್ಲುವಂತಾಯಿತು.
ಉತ್ತರ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದ್ದು, ಕೃಷ್ಣಾ ಹಾಗೂ ಮಲಪ್ರಭಾ ನದಿಯ ಒಡಲು ತುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ನಾರಾಯಣಪುರ ಜಲಾಶಯದ ಹಿನ್ನೀರಿನ ಕೃಷ್ಣಾ ಹಾಗೂ ಮಲಪ್ರಭಾ ನದಿಯಒಡಲು ಸಂಪೂರ್ಣ ತುಂಬಿಕೊಂಡಿದೆ. ಹೀಗಾಗಿ, ಕೂಡಲಸಂಗಮಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ನದಿಯಲ್ಲಿ ಸ್ನಾನ ಮಾಡಿ, ದೇವರ ದರ್ಶನ ಪಡೆದು, ದೋಣಿ ಸಂಚಾರ ಮಾಡುತ್ತಿದ್ದಾರೆ. ಇದೇ ವೇಳೆ, ವಾಡಿ,ಚಿಂಚೋಳಿ, ಚಿತ್ರದುರ್ಗ, ಶಿರಸಿ, ಸಿದ್ದಾಪುರ,ಯಲ್ಲಾಪುರ, ಸಾಗರ ಸೇರಿದಂತೆ ರಾಜ್ಯದ
ಇತರೆಡೆಯೂ ಮಳೆಯಾದ ವರದಿಯಾಗಿದೆ.