Advertisement

ಮಳೆ ಅನಾಹುತ : ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ 17 ಮಂದಿ ಸಾವು

08:25 PM Aug 03, 2021 | Team Udayavani |

ನವ ದೆಹಲಿ: ಉತ್ತರದಲ್ಲಿ ವರುಣ ಅಬ್ಬರಿಸುತ್ತಿದ್ದು, ಪ.ಬಂಗಾಳ ಹಾಗೂ ರಾಜಸ್ಥಾನಗಳಲ್ಲಿ 17 ಮಂದಿ ಮಳೆ ಸಂಬಂಧಿ ಘಟನೆಗಳಿಂದ ಸಾವಿಗೀಡಾಗಿದ್ದಾರೆ.

Advertisement

ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಗೋಡೆ ಕುಸಿತ ಮತ್ತು ವಿದ್ಯುತ್‌ ಆಘಾತ ಪ್ರಕರಣಗಳಿಂದ 14 ಮಂದಿ ಅಸುನೀಗಿದ್ದಾರೆ. ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ದಾಮೋದರ್‌ ವ್ಯಾಲಿ ಕಾರ್ಪೊರೇಷನ್‌ ಅಣೆಕಟ್ಟಿನಿಂದ ನೀರು ಹೊರಬಿಡಲಾಗಿದ್ದು, ಪರಿಣಾಮ 6 ಜಿಲ್ಲೆಗಳ ಎರಡೂವರೆ ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ. ಇವರಿಗೆ ರಾಜ್ಯ ಸರ್ಕಾರವು ಆಶ್ರಯ ಒದಗಿಸಿದ್ದು, ಪರಿಹಾರ ಕಾರ್ಯಾಚರಣೆಯೂ ಚುರುಕುಗೊಂಡಿದೆ. ಹಲವು ಜಿಲ್ಲೆಗಳು ಜಲಾವೃತಗೊಂಡು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

3 ಮಕ್ಕಳು ಸಾವು:
ರಾಜಸ್ಥಾನದ ಸವಾಯಿ ಮಾಧೋಪುರ್‌ ಮತ್ತು ಟೋಂಕ್‌ ನಲ್ಲಿ ಧಾರಾಕಾರ ಮಳೆಯಿಂದಾಗಿ ಕಾರೊಂದು ಕೊಚ್ಚಿಹೋದ ಪರಿಣಾಮ, ಅದರಲ್ಲಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೂವರನ್ನು ರಕ್ಷಿಸಲಾಗಿದೆ. ಟೋಂಕ್‌ ನಲ್ಲಿ ಮಹಿಳೆಯೊಬ್ಬರ ಮೃತದೇಹವನ್ನು ಒಯ್ಯುತ್ತಿದ್ದ ಆ್ಯಂಬುಲೆನ್ಸ್‌ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅದರಲ್ಲಿದ್ದ ಮಹಿಳೆಯ 12 ವರ್ಷದ ಮಗ ಸಾವಿಗೀಡಾಗಿದ್ದಾನೆ. ಮಹಿಳೆಯ ಪತಿಯೂ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ :ಜೀವನ ಪರ್ಯಂತ ಪಶ್ಚಾತ್ತಾಪ ಪಡುವೆ: ಅಪಘಾತದಲ್ಲಿ ಸ್ನೇಹಿತೆ ಸಾವಿಗೆ ನಟಿ ಯಶಿಕಾ ಕಣ‍್ಣೀರು

ಮಧ್ಯಪ್ರದೇಶದಲ್ಲಿ ಮಳೆ-ಪ್ರವಾಹದಿಂದಾಗಿ 1,171 ಗ್ರಾಮಗಳು ಸಂಕಷ್ಟಕ್ಕೀಡಾಗಿವೆ. ಪ್ರವಾಹದಿಂದ ರಕ್ಷಿಸಿಕೊಳ್ಳಲು 24 ಗಂಟೆಗಳ ಕಾಲ ಮರದ ಮೇಲೆ ಕುಳಿತಿದ್ದ ಮೂವರನ್ನು ಮತ್ತು ಇತರೆ ಐವರನ್ನು ಮಂಗಳವಾರ ಸೇನೆ ರಕ್ಷಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next