ಚೆನ್ನೈ : ಬಂಗಾಲ ಕೊಲ್ಲಿಯಲ್ಲಿ ವಾಯು ಭಾರ ನಿಮ್ನತೆ ಉಂಟಾಗಿ ಅದು ಚಂಡಮಾರುತವಾಗಿ ಪರಿಣಮಿಸುವ ಸಾಧ್ಯತೆ ಇರುವಂತೆಯೇ ತಮಿಳು ನಾಡು ಇಂದು ಗುರುವಾರ ಭಾರೀ ಮಳೆ, ಬಿರುಗಾಳಿಗೆ ತತ್ತರಿಸುತ್ತಿದೆ.
ತೂತುಕುಡಿ, ತಿರುನೆಲ್ವೇಲಿ, ಕನ್ಯಾಕುಮಾರಿ, ವಿರೂಧ್‌ನಗರ್ ಸೇರಿದಂತೆ ಒಟ್ಟು ಏಳು ಜಿಲ್ಲೆಗಳಲ್ಲಿ ಮಳೆ-ಗಾಳಿಯ ಪ್ರತಾಪದಿಂದಾಗಿ ಶಾಲೆಗಳನ್ನು ಮುಚ್ಚಲಾಗಿದೆ.
ತೂತುಕುಡಿಯಲ್ಲಿ ಬಲವಾದ ಗಾಳಿ ಬೀಸುತ್ತಿರುವ ಕಾರಣ ಹಲವೆಡೆ ಮರಗಳು ಧರಾಶಾಯಿಯಾಗಿವೆ. ವಿದ್ಯುತ್ ಸಂಪರ್ಕ ವ್ಯಾಪಕವಾಗಿ ಕಡಿದು ಹೋಗಿದೆ. ಸಮುದ್ರಕ್ಕೆ ಹತ್ತಿರದಲ್ಲಿರುವ ವಾಸ ಸ್ಥಳಗಳು ತೀವ್ರವಾಗಿ ಹಾನಿಗೀಡಾಗಿವೆ.
ವಾಯು ಭಾರ ನಿಮ್ಮತೆಯು ಈಗ ಕನ್ಯಾಕುಮಾರಿಯಿಂದ 170 ಕಿ.ಮೀ. ಆಗ್ನೇಯದಲ್ಲಿ ಕೇಂದ್ರೀಕೃತವಾಗಿದೆ. ಇದು ಚಂಡಮಾರುತವಾಗಿ ಪರಿವರ್ತನೆಗೊಂಡು ತನ್ನೆಲ್ಲ ತೀವ್ರತೆಯೊಂದಿಗೆ ಉತ್ತರ ಚೆನ್ನೈಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂಧು ಹವಾಮಾನ ಇಲಾಖೆ ಎಚ್ಚರಿಸಿದೆ.
ಮುಂದಿನ 24 ತಾಸುಗಳಲ್ಲಿ ತಮಿಳು ನಾಡಿನ ಆದ್ಯಂತ ಜಡಿ ಮಳೆ ಉಂಟಾಗುವ ಸಾಧ್ಯತೆ ಇದ್ದು ಬಲವಾದ ಗಾಳಿ ಬೀಸುವ ಅಪಾಯವೂ ಇದೆ. ಚಂಡಮಾರುತಕ್ಕೆ ಓಖೀ ಎಂದು ನಾಮಕರಣ ಮಾಡಲಾಗಿದೆ. ಅರಬ್ಬೀ ಸಮುದ್ರದಲ್ಲಿ ಈ ಋತುವಿನಲ್ಲಿ ರೂಪುಗೊಳ್ಳುತ್ತಿರುವ ಮೊದಲ ಚಂಡಮಾರುತವೂ ಇದಾಗಿದೆ.