ಸುರಪುರ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ವಣಕಿಹಾಳ ಹತ್ತಿರದ ಸುಡಗಾಡು ಸಿದ್ದರ ಕಾಲೋನಿಗೆ ಮಳೆ ನೀರು ನುಗ್ಗಿದ್ದು ಸುಮಾರು 50 ರಿಂದ 60 ಮನೆಗಳು ಜಲಾವೃತವಾಗಿವೆ. ತಾಲೂಕಿನ ಕೆಲವೆಡೆ ಸಣ್ಣಪುಟ್ಟ ಸೇತುವೆಗಳು ಕೊಚ್ಚಿಹೋಗಿದ್ದು, ಕೆಲ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ವಣಕಿಹಾಳ ಹತ್ತಿರದ ಸುಡಗಾಡು ಸಿದ್ದರ ಕಾಲೋನಿಯ ಮನೆಗಳಿಗೆ ನೀರು ನುಗ್ಗಿದ್ದು, ದವಸಧಾನ್ಯ, ಗೃಹ ಬಳಕೆ ವಸ್ತುಗಳು ನೀರು ಪಾಲಾಗಿವೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಜಲಾವೃತವಾಗಿದೆ. ಅಲ್ಲಿನ ಸುಮಾರು 200 ಜನರು ಸಮೀಪದ ವಣಕಿಹಾಳ ಗ್ರಾಮದ ಗುಡಿ ಗುಂಡಾರ, ಸಮುದಾಯ ಭವನ ಹತ್ತಿರದ ಎಪಿಎಂಸಿ ಮಾರುಕಟ್ಟೆ ಗೋದಾಮು, ಡಾ| ಬಾಬಾ ಸಾಹೇಬರ ಅಂಬೇಡ್ಕರ್ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ಇತರೆಡೆ ಆಶ್ರಯ ಪಡೆದಿದ್ದಾರೆ. ಈ ಹಿಂದೆ ಸರಕಾರ ಕೆರೆಯಲ್ಲಿಯೇ ಸುಡುಗಾಡ ಸಿದ್ದರಿಗಾಗಿ ಆಶ್ರಯ ಯೋಜನೆಯಡಿ 50 ರಿಂದ 60 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಸಣ್ಣಮಳೆ ಬಂದರೆ ಸಾಕು ನೀರು ಸಂಗ್ರಹವಾಗಿ ಮನೆಗಳಿಗೆ ನೀರು ನುಗ್ಗುತ್ತದೆ. ಮಳೆಗಾಲದಲ್ಲಿ ತಾಲೂಕು ಆಡಳಿತ ಈ ಸಂದರ್ಭದಲ್ಲಿ ಒಂದಷ್ಟು ನೆರವು ನೀಡಿ ಕೈ ತೊಳೆದುಕೊಂಡು ಮರೆತು ಬಿಡುತ್ತಿದೆ. ಆದರೆ, ಶಾಶ್ವತ ಪರಿಹಾರ ಕಲ್ಪಿಸುವ ಗೋಜಿಗೆ ಹೋಗಿಲ್ಲ ಎಂದು ನಿವಾಸಿ ಗೋಪಾಲ ರಾಮಕೊಂಡಡಿ ಈರಪ್ಪ, ಮರೆಪ್ಪ ಸೇರಿದಂತೆ ಅನೇಕರು ದೂರಿದ್ದಾರೆ.
ಸಂಪರ್ಕ ಕಡಿತ: ಈ ಹಿಂದೆ ಕಿತ್ತುಹೋಗಿದ್ದ ಚಿಕನ್ನಳ್ಳಿ ಗ್ರಾಮದ ಸೇತುವೆಗೆ ಪೈಪ್, ಮರಂ ಹಾಕಿ ತಾತ್ಕಾಲಿಕ ದುರಸ್ತಿಗೊಳಿಸಲಾಗಿತ್ತು. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸೇತುವೆ ಪುನಃ ಕಿತ್ತು ಹೋಗಿ ಸಂಪರ್ಕ ಕಡಿತಗೊಂಡಿದೆ. ರತ್ತಾಳ ಹತ್ತಿರದ ರಂಗಂಪೇಟೆ ಹಳ್ಳದ ಸೇತುವೆ ಮತ್ತು 3 ಕಡೆ ರಸ್ತೆ ಕಿತ್ತು ಹೋಗಿದ್ದು, ಗ್ರಾಮದಸಂಪರ್ಕ ಕಡಿತವಾಗಿದೆ. ಗ್ರಾಮಸ್ಥರು ದೇವಿಕೇರಿ ಸುತ್ತುವರಿದು ನಗರಕ್ಕೆ ಬರುತ್ತಿದ್ದಾರೆಸಿದ್ದಾಪುರ ಹತ್ತಿರದ ಸೇತುವೆ ತುಂಬಿ ಹರಿಯುತ್ತಿದ್ದು ಶೆಟ್ಟಿಕೇರಾ ಸೇರಿದಂತೆ ಐದಾರು ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದೆ. ವಣಕಿಹಾಳ ಹತ್ತಿರದ ಸೇತುವೆ ಮೈದುಂಬಿ ಹರಿಯುತ್ತಿದ್ದು ಹೇಮನೂರ, ಹಾಲಗೇರಾ, ಶಖಾಪುರ ಗ್ರಾಮಗಳ Óಂಪರ್ಕ ಸ್ಥಗಿತವಾಗಿದೆ.
ದೇವಿಕೇರಾ ಗ್ರಾಮದ ಸೇತುವೆ ಅಪಾಯ ಮಟ್ಟ ತಲುಪಿದೆ. ನೀರಿನ ರಭಸಕ್ಕೆ ಸೇತುವೆ ಕಾಲಂಗಳು ಬಾಗಿವೆ. ಯಾವುದೇ ಸಂದರ್ಭದಲ್ಲಿ ಬೀಳುವ ಸ್ಥಿತಿಯಲ್ಲಿದೆ. ಹೀಗಾಗಿ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು, ಗ್ರಾಮಸ್ಥರು ಕೃಷ್ಣಾಪುರ ಮಾರ್ಗದಿಂದ ನಗರಕ್ಕೆ ಬರುತ್ತಿದ್ದಾರೆ. ರಂಗಂಪೇಟ-ಸುರಪುರ ಮುಖ್ಯ ರಸ್ತೆ ಪಾದಚಾರಿ ಮತ್ತು ದ್ವಿಚಕ್ರ ಸವಾರರಿಗೆ ಭಯದ ವಾತಾವರಣ ನಿರ್ಮಾಣ ಮಾಡಿದೆ. ರಸ್ತೆ ಪಕ್ಕದ ಗುಡ್ಡದಲ್ಲಿರುವ ದೊಡ್ಡ ದೊಡ್ಡ ಕಲ್ಲು ಬಂಡೆಗಳು ಜಾರಿ ಬೀಳುವ ಸ್ಥಿತಿಯಲಿದ್ದು, ಜನರಲ್ಲಿ ಭಯ ಮೂಡಿಸಿದೆ. ಸಣ್ಣ ಸಣ್ಣ ಕಲ್ಲುಗಳು ರಸ್ತೆಗೆ ಹರಿದುಬಂದಿದ್ದು ದ್ವಿಚಕ್ರ ವಾಹನಗಳು ಚಲಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.
ಕೆರೆಯಂತಾದ ಶಾಲಾ ಆವರಣ: ರಂಗಂಪೇಟೆಯ ಕನ್ಯಾ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಆವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದೆ. ಸಂಗ್ರಹಗೊಂಡಿರುವ ನೀರು ಹೊರ ಹೋಗಲು ಮಾರ್ಗವೇ ಇಲ್ಲ. ಹೀಗಾಗಿ ಶಾಲಾ ಆವರಣ ಕೆರಯಂತಾಗಿದೆ.
ಖಾಸ್ಗೇತೇಶ್ವರ ನೃತ್ಯಾಲಯಕ್ಕೆ ನುಗ್ಗಿದ ನೀರು: ನಗರದ ಬಡಿಗೇರ ಭಾವಿ ಹತ್ತಿರದ ಖಾಸ್ಗೇತೇಶ್ವರ ಸಂಗೀತ ಮತ್ತು ನೃತ್ಯಾಲಯ ಶಾಲೆಗೆ ರಸ್ತೆ ನೀರು ನುಗ್ಗಿದ್ದು ಪೇಟಿ, ತಬಲಾ, ಗಿಟಾರ್, ಏಕತಾರಿ ಸೇರಿದಂತೆ ಸಂಗೀತ ಪರಿಕರಗಳು ಹಾಳಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಸಂಸ್ಥೆ ಮುಖ್ಯಸ್ಥ ಅನಿಲಕುಮಾರ ತಿಳಿಸಿದ್ದಾರೆ.