ಹಾಪುರ: ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶನಿವಾರ ಸಂಜೆ 4ರ ಸುಮಾರಿಗೆ ಧಾರಾಕಾರ ಮಳೆ ಸುರಿದಿದ್ದು, ಅಲ್ಲಲ್ಲಿ ನೀರು ನಿಂತ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ಮಾರುತಿ ರಸ್ತೆ, ಬಸವೇಶ್ವರ ವೃತ್ತ ಸೇರಿದಂತೆ ಮೋಚಿಗಡ್ಡದಿಂದ ಗಂಗಾನಗರಕ್ಕೆ ತೆರಳುವ ರಸ್ತೆ ಮಳೆ ನೀರಿನಿಂದ ತುಂಬಿ ಹರಿಯಿತು. ಇದರಿಂದ ಸಂಚಾರಕ್ಕೆ ತೊಂದರೆ ಉಂಟಾಯಿತು. ಸಂಜೆ ಹೊತ್ತಿಗೆ ಮಳೆಯಾಗಿದ್ದರಿಂದ ಶಾಲಾ ಮಕ್ಕಳು, ವಾಹನ ಸವಾರರು ಸಾಕಷ್ಟು ಪರದಾಡುವಂತಾಯಿತು. ರಸ್ತೆ ಮೇಲೆ ಒಂದು
ಅಡಿ ಎತ್ತರ ನೀರು ಹರಿದಿದ್ದರಿಂದ ವಾಹನ ಸಂಚಾರ ಸೇರಿದಂತೆ ನಾಗರಿಕರ ಸಂಚಾರಕ್ಕೆ ತೊಂದರೆಯಾಯಿತು.
ನಗರದ ಪ್ರಮುಖ ರಸ್ತೆ ಬದಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಮೇಲೆ ಹೊಲಸು ತ್ಯಾಜ್ಯ ಹರಿಯಿತು. ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಿಗಳು ಧಾರಾಕಾರ ಮಳೆಗೆ ಪರದಾಡಿದರು. ಹಣ್ಣು, ಹೂ, ತರಕಾರಿ ಮಳೆಗೆ ನೆನೆದ ಪರಿಣಾಮ ವ್ಯಾಪಾರಸ್ಥರು ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸುವಂತಾಯಿತು. ತರಕಾರಿ ಮಾರ್ಕೆಟ್‌ನಲ್ಲಿ ಹೊಲಸು ತ್ಯಾಜ್ಯದ ನೀರು ಸಂಗ್ರಹಗೊಂಡಿದ್ದು, ಖರೀದಿಸಿಲು ಗ್ರಾಹಕರು ಹಿಂದೇಟು ಹಾಕಿದರು. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದವು. ಅಂಗಡಿದಾರರು ತಮ್ಮ ಪರಿಕರಗಳನ್ನು ಮಳೆ ನೀರಿನಿಂದ ರಕ್ಷಿಸಿಕೊಳ್ಳಲು ಪರದಾಡಿದರು.