ಸಾಗರ: ಸಾಧಾರಣ ಮಟ್ಟದಲ್ಲಿ ಸುರಿಯುತ್ತಿದ್ದ ಮಳೆ ಭಾನುವಾರ ಸಂಜೆಯಿಂದ ತೀವ್ರ ಸ್ವರೂಪ ಪಡೆಯುತ್ತಿದ್ದು ಪ್ರವಾಹದ ರೀತಿ ಮಳೆ ನೀರು ಮನೆಗೆ ನುಗ್ಗಿದ ಘಟನೆ, ಮನೆ ಮೇಲೆ ಮರ ಉರುಳಿರುವ ಘಟನೆಗಳು ನಡೆದಿವೆ. ಈ ನಡುವೆ ಸೋಮವಾರವಿಡೀ ಸುರಿದಿರುವ ಮಳೆ ಕಡಿಮೆಯಾಗುವ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ಇನ್ನಷ್ಟು ಅಪಾಯದ ಆತಂಕ ವ್ಯಕ್ತವಾಗಿದೆ.
ಸಾಗರ ನಗರಸಭೆ ವ್ಯಾಪ್ತಿಯ ಗಾಂಧಿನಗರದ ಬಾಪಟ್ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ನೀರು ಸರಾಗವಾಗಿ ಹರಿಯುವ ಚರಂಡಿ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಮುಳುಗಡೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಿಗೆ ನೀರು ನುಗ್ಗುತ್ತಿದ್ದು, ರಸ್ತೆ ಕೂಡ ನೀರಿನಿಂಧ ಆವರಿಸಿ ಸಂಚಾರ ದುರ್ಗಮವಾಗಿದೆ. ನಿವೇಶನಗಳನ್ನು ಮಾಡಿದ ಜಾಗಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯೇ ಇಲ್ಲದ ಕಾರಣ ಕೆರೆಯ ಸ್ವರೂಪ ನಿರ್ಮಾಣವಾಗಿದೆ. ಈ ನಡುವೆ ನುಗ್ಗಿರುವ ನೀರು ಬಾವಿಗಳಿಗೆ ಇಳಿದಿದ್ದು ಕುಡಿಯುವ ನೀರಿಗೆ ತತ್ವಾರ ಎಂಬ ಸನ್ನಿವೇಶವೂ ಈ ಭಾಗದ ನಾಗರಿಕರಿಗೆ ಉಂಟಾಗಿದೆ. ಯಾವ ವ್ಯವಸ್ಥೆ ಇಲ್ಲದೆ ಲೇಔಟ್‌ಗಳನ್ನು ಮಾಡಿರುವುದಕ್ಕೆ ಮನ್ನಣೆ ನೀಡಿರುವ ಎಸಿ, ಡಿಸಿಯವರಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಗ್ರಾಮೀಣ ಭಾಗದಿಂದಲೂ ಮನೆ ಹಾನಿ ವಿವರಗಳು ಲಭ್ಯವಾಗುತ್ತಿದ್ದು, ಭಾನುವಾರ ಮಧ್ಯಾಹ್ನ ಮರ ಬಿದ್ದು ನಾಗವಳ್ಳಿ ಗ್ರಾಮ ತಾಲೂಕಿನ ನಾಗವಳ್ಳಿ ಗ್ರಾಮದ ಜೂಜೆ ಫರ್ನಾಂಡಿಸ್ ಅವರ ಮನೆ ಸಂಪೂರ್ಣವಾಗಿ ಹಾನಿಯಾಗಿದೆ. ಕೆಜಿ ಕೊಪ್ಪ ಗ್ರಾಮದ ಹಾರೆಗೊಪ್ಪದ ಗಣಪತಿ ಜಟ್ಟಗೌಡ ಅವರ ಮನೆ ಸುರಿದ ಮಳೆಗೆ ಕುಸಿದಿದೆ. ಪದೇ ಪದೆ ಮರಗಳು ಬೀಳುತ್ತಿರುವುದರಿಂದ ತಾಲೂಕಿನಾದ್ಯಂತ ಲೈನ್ ಕಂಬಗಳು ಮುರಿದು ವಿದ್ಯುತ್ ವ್ಯತ್ಯಯ ಸಾಮಾನ್ಯ ಎನ್ನುವಂತಾಗಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಕಾರ್ಯಗಳು ಮಂದಗತಿಯಲ್ಲಿ ಸಾಗಿವೆ. ಈ ನಡುವೆ ಕೊಳೆ ಭೀತಿಯ ಹೊರತಾಗಿಯೂ ಸೋಮವಾರ ಮಳೆಯ ಕಾರಣ ಬೋರ್ಡೋ ಸಿಂಪಡನೆಗೆ ಅಘೋಷಿತ ರಜೆ ಚಾಲ್ತಿಯಲ್ಲಿತ್ತು.
ಸೋಮವಾರ ಶಾಲೆಗಳಿಗೆ ರಜೆ ಕೊಡದಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ರಮದ ಬಗ್ಗೆ ಪೋಷಕ ವರ್ಗದವರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ತಾಲೂಕಿನಲ್ಲಿ ಮಳೆ ಹೆಚ್ಚಾಗುವ ಅಲರ್ಟ್‌ನ್ನು ಕೊಟ್ಟಾಗ ತಾಲೂಕು ಆಡಳಿತ ನಿರ್ಲಕ್ಷ್ಯ ತೋರಬಾರದು. ಶಾಲೆ ಆರಂಭಕ್ಕೆ ಮುನ್ನವೇ ರಜೆ ಘೋಷಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ಒತ್ತಾಯಿಸುತ್ತಿದ್ದುದು ಕಂಡುಬಂದಿತು. ಕೆಲವು ಶಾಲೆಗಳು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸಿದ್ದವು.
ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ: ತಹಶೀಲ್ದಾರ್‌ರ ಸೂಚನೆ ಮೇರೆಗೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜುಲೈ 16ರಂದು ತಾಲೂಕಿನ ಅಂಗನವಾಡಿ ಸೇರಿದಂತೆ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಸಾಗರ ತಹಶಿಲ್ದಾರ್ ಚಂದ್ರಶೇಖರ್ ನಾಯಕ್ ಪ್ರಕಟಣೆ ಹೊರಡಿಸಿದ್ದಾರೆ. ಅಲ್ಲದೆ ಈ ದಿನದ ಪಾಠಗಳನ್ನು ಮುಂದಿನ ದಿನಗಳಲ್ಲಿ ಸರಿದೂಗಿಸುವುದು. ಶಿಕ್ಷಕರ ತರಬೇತಿ, ಸಭೆಗಳು ಮುಂದುವರೆಯುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.