ಮೈಸೂರು: ಜಿಲ್ಲೆಯಲ್ಲಿ ವರ್ಷಧಾರೆ ಚುರುಕುಗೊಂಡಿದ್ದು, ಕಳೆದ 4 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ, ಜಿಲ್ಲೆಯ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ನದಿ ಬಯಲು ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಕಬಿನಿ, ಸರಗೂರು ತಾಲೂಕಿನ ನುಗು, ತಾರಕ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ಒಳಹರಿವು ಹೆಚ್ಚಿರುವ ಪರಿಣಾಮ ಡ್ಯಾಂನಿಂದ ನದಿಗೆ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದೆ. ಕೇರಳ ವೈನಾಡು ಭಾಗದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆ ಮೈದುಂಬಿರುವ ಕಪಿಲಾ ನದಿ, ನೆರೆ ಭೀತಿ ಸೃಷ್ಟಿಸಿದೆ. ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದ್ದು ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಹರಿಯುವ ಕಾವೇರಿ, ಕಪಿಲಾ, ಲಕ್ಷ್ಮಣತೀರ್ಥ ನದಿಗಳು ಈಗಾಗಲೇ ಮೈದುಂಬಿ ಹರಿಯುತ್ತಿದ್ದು, ಕಳೆದ ವರ್ಷದಂತೆ ಈ ಬಾರಿಯೂ ಅನೇಕ ಜನವಸತಿ ಪ್ರದೇಶ ಮುಳುಗಡೆ ಆತಂಕ ಎದುರಾಗಿದೆ. ಈಗಾಲೇ ಕೊಡಗಿನ ಹಾರಂಗಿ ಜಲಾಶಯ ಭರ್ತಿಯಾಗಿದ್ದು, 13400 ಕ್ಯೂಸೆಕ್ ನೀರಿನ್ನು ಬಿಟ್ಟಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. ಪಿರಿಯಾಪಟ್ಟಣ ತಾಲೂಕಿನ ಆವರ್ತಿ, ಕೊಪ್ಪ, ಕಣಗಾಲ್ ಹಾಗೂ ಕೆ.ಆರ್.ನಗರ ತಾಲೂಕಿನ ಹಲವು ಭಾಗಗಳಿಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕಾವೇರಿ ಕೊಳ್ಳದಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದೆ. ಪ್ರವಾಹವುಂಟಾಗಿದ್ದು ಹುಣಸೂರು ತಾಲೂಕು ಹನಗೋಡು, ಶಿಂಡೇನಹಳ್ಳಿ ವ್ಯಾಪ್ತಿಯಲ್ಲಿ ರೈತರಿಗೆ ಸಂಕಷ್ಟ ಎದುರಾಗಿದೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಜತೆಗೆ ಹುಣಸೂರು ಪಟ್ಟಣದ ಕೆಲ ಬಡಾವಣೆಗಳಿಗೂ ನೀರು ಆವರಿಸುವ ಮುನ್ಸೂಚನೆ ಇದ್ದು, ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ನಾಲೆ ಅಂಚು ಕುಸಿತ: ಮಳೆ ರಭಸಕ್ಕೆ ಎಚ್.ಡಿ.ಕೋಟೆ ತಾಲೂಕಿನ ತಾರಕ ಜಲಾಶಯ ಭರ್ತಿಯಾಗಿದ್ದು, ನಾಲೆಗೆ ನೀರು ಹರಿಬಿಡಲಾಗಿದೆ. ಬಲದಂಡೆಯ ನಾಲೆಯಲ್ಲಿ ಕಲೆವೆಡೆ ನೀರಿನ ರಭಸಕ್ಕೆ ಅಂಚುಗಳು ಕುಸಿತಗೊಂಡಿದೆ. ರೆಡ್ ಅಲರ್ಟ್ ಘೋಷಣೆ: ಜಿಲ್ಲೆಯ ನದಿ ಬಯಲು ಪ್ರದೇಶಗಳಲ್ಲಿ ಜಿಲ್ಲಾಡಳಿತ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ತಗ್ಗು ಪ್ರದೇಶಗಳ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ಬಾರಿ ಇದೇ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಗೆ ಪಿರಿಯಾಪಟ್ಟಣ, ಹುಣಸೂರು, ನಂಜನಗೂಡು, ಎಚ್.ಡಿ.ಕೋಟೆ, ತಿ.ನರಸೀಪುರ ತಾಲೂಕಿನ ಹಲವು ಪ್ರದೇಶ ಮತ್ತು ಬಡಾವಣೆ ಮನೆಗಳು ಜಲಾವೃತಗೊಂಡಿದ್ದವು. ನೂರಕ್ಕೂ ಹೆಚ್ಚು ಮನೆ ಹಾನಿಯೊಳಗಾಗಿದ್ದವು. ಕೋಟ್ಯಂತರ ರೂ. ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಈ ವೇಳೆ ಹಲವೆಡೆ ಗಂಜಿ ಕೇಂದ್ರ ತೆರೆಯಲಾಗಿತ್ತು. ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದ್ದು ಆತಂಕ ಮನೆಮಾಡಿದೆ.
ಗಾಯದ ಮೇಲೆ ಬರೆ ಎಳೆದ ವರುಣ: ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ತರಕಾರಿ, ಹೂ ಹಾಗೂ ಹಣ್ಣು ಬೆಳೆಯುವ ರೈತರು ಕಳೆದ 4-5 ತಿಂಗಳಿಂದ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಲಭ್ಯವಾಗದೇ ನಷ್ಟ ಅನುಭವಿಸಿ, ಇನ್ನೂ ಚೇತರಿಸಿಕೊಳ್ಳುವ ಮುನ್ನವೇ ನದಿಗಳು ತುಂಬಿ ಹರಿಯುತ್ತಿದ್ದು ಬೆಳೆ ಹೊಲ ದಲ್ಲಿಯೇ ಹಾಳುಗುತ್ತಿದೆ. ಅಲ್ಲದೇ, ತಗ್ಗು ಪ್ರದೇಶದ ಮನೆಗಳು ಜಲಾವೃತ ಅಪಾಯ ಎದುರಾಗಿದೆ.
ನಂಜನಗೂಡು ತಾಲೂಕಿನಲ್ಲಿ ನೆರೆ : ಕಬಿನಿ ಜಲಾಶಯ ತುಂಬಿದ್ದು, ಭಾರಿ ಪ್ರಮಾಣದ ನೀರು ಹೊರಬರುತ್ತಿರುವುದರಿಂದ ಕಪಿಲಾ ನದಿ ತಟದಲ್ಲಿಯೂ ಜನವಸತಿ ಪ್ರದೇಶ ಮುಳುಗಡೆ ಸಾಧ್ಯತೆ ಇದೆ. ಈಗಾಗಲೇ ಎಚ್.ಡಿ.ಕೋಟೆ- ಎನ್.ಬೇಗೂರು ಸಂಪರ್ಕದಲ್ಲಿ ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸುತ್ತೂರು ಸೇತುವೆ ಜಲಾವೃತಗೊಂಡಿದೆ. ಜತೆಗೆ ನಂಜನಗೂಡಿನ ಪರಶುರಾಮ ದೇಗುಲ, 16 ಕಾಲು ಮಂಟಪ, ಸ್ನಾನದ ಘಟ್ಟ ಸಂಪೂರ್ಣ ಮುಳುಗಡೆಯಾಗಿದ್ದರೆ ಹಳ್ಳದಕೇರಿ, ಒಕ್ಕಲಗೇರಿ, ದೇವಸ್ಥಾನ ಅಕ್ಕಪಕ್ಕದ ಬಡಾವಣೆಗಳು ಜಲಾವೃತಗೊಂಡಿವೆ.
-ಸತೀಶ್ ದೇಪುರ