Advertisement

ಮುಂಬೈನಲ್ಲಿ ವರುಣನ ಆರ್ಭಟ

07:35 AM Dec 06, 2017 | Harsha Rao |

ಮುಂಬೈ/ಅಹಮದಾಬಾದ್‌: ಕೇರಳ, ತಮಿಳು ನಾಡು, ಲಕ್ಷದ್ವೀಪದಲ್ಲಿ ಜನಜೀವನವನ್ನು ಅಸ್ತವ್ಯಸ್ತ ಗೊಳಿಸಿದ ಒಖೀ ಚಂಡಮಾರುತವು ಮಂಗಳವಾರ ಮುಂಬೈ ಮತ್ತು ಗುಜರಾತ್‌ನಲ್ಲಿ ಅಬ್ಬರಿಸಿದೆ. ಚಂಡ ಮಾರುತದ ಪರಿಣಾಮವಾಗಿ ದೇಶದ ವಾಣಿಜ್ಯ ನಗರಿಯಲ್ಲಿ ಸೋಮವಾರ ರಾತ್ರಿ ಶುರುವಾದ ಮಳೆಯ ಆರ್ಭಟ ಮಂಗಳವಾರ ಸಂಜೆಯವರೆಗೂ ಮುಂದುವರಿದಿದ್ದು, ಬುಧವಾರವೂ ಮಳೆಯಾ ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಅದೃಷ್ಟವಶಾತ್‌ ಇಲ್ಲಿ ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಉಂಟಾಗಿಲ್ಲ.
ಮುಂಬೈ, ಸಿಂಧುದುರ್ಗ, ಠಾಣೆ, ರಾಯಗಡ ಮತ್ತು ಪಾಲ್‌ಘಾಟ್‌ ಜಿಲ್ಲೆಗಳಲ್ಲಿ ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಪೂರ್ವ ಮತ್ತು ಪಶ್ಚಿಮ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಟ್ರಾಫಿಕ್‌ ಸಮಸ್ಯೆ ಎದುರಾಯಿತು. ದಟ್ಟ ಅಲೆಗಳು ಏಳುತ್ತಿರುವ ಕಾರಣ, ಯಾರೂ ಸಮುದ್ರತಟಕ್ಕೆ ಹೋಗದಂತೆ ಬಿಎಂಸಿ ಆದೇಶ ಹೊರಡಿಸಿತ್ತು. 
 ಇದೇ ವೇಳೆ, ಗುಜರಾತ್‌ನಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವಂತೆ ಸ್ವತಃ ಪ್ರಧಾನಿ ಮೋದಿಯವರೇ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಚಂಡಮಾರುತವು ಮಂಗಳವಾರ ಮಧ್ಯರಾತ್ರಿ ಸೂರತ್‌ ಕರಾವಳಿ ಪ್ರವೇಶಿಸಿದೆ. ಇನ್ನೊಂದೆಡೆ, ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಇನ್ನೂ 3 ದಿನಗಳ ಕಾಲ ಸಮುದ್ರ ಕ್ಕಿಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

Advertisement

ರ್ಯಾಲಿಗಳು ರದ್ದು: ಭಾರೀ ಮಳೆಯಾಗುತ್ತಿದ್ದ ಕಾರಣ ಗುಜರಾತ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಚುನಾವಣಾ ಪ್ರಚಾರ ರ್ಯಾಲಿಗಳನ್ನು ರದ್ದುಗೊಳಿಸಿವೆ. 

ಮೃತರ ಸಂಖ್ಯೆ 39
ತಮಿಳುನಾಡು, ಕೇರಳದಲ್ಲಿ ಒಖೀ ಪ್ರಭಾವದಿಂದಾಗಿ ಒಟ್ಟಾರೆ 39 ಮಂದಿ ಮೃತಪಟ್ಟಿದ್ದು, 167 ಮಂದಿ ಮೀನುಗಾರರು ಇನ್ನೂ ಪತ್ತೆಯಾಗಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ.

ಗೋವಾ ಬೀಚ್‌ಗಳಲ್ಲಿ ಪ್ರವಾಸಿಗರೇ ಇಲ್ಲ !
ಒಖೀ ಭೀತಿ ಹಿನ್ನೆಲೆಯಲ್ಲಿ ಗೋವಾದ ಹಲವು ಬೀಚ್‌ಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನು ತ್ತಿವೆ. ಬೀಚ್‌ಗಳಲ್ಲಿ ಕೇವಲ ಪ್ರವಾಸಿ ಸೀಜನ್‌ನಲ್ಲಿ ಬಾರ್‌, ರೆಸ್ಟೋರೆಂಟ್‌ ಸ್ಥಾಪಿಸಲು ಸುಮಾರು 2 ಲಕ್ಷ ರೂ.ಗಳನ್ನು ವಿವಿಧ ಇಲಾಖೆಗಳಿಗೆ ಶುಲ್ಕ ಭರಿಸಬೇಕಾಗುತ್ತದೆ. ಆದರೆ ಇದೀಗ ನೈಸರ್ಗಿಕ ವಿಕೋಪದಿಂದ ಈ ಬಾರ್‌, ರೆಸ್ಟೋರೆಂಟ್‌ಗಳಿಗೆ ಹಾನಿಯುಂಟಾಗಿದ್ದು, ಬಹುತೇಕ ಮಗುಚಿ ಬಿದ್ದಿವೆ. ಇನ್ನು ಭಾರಿ ಅಲೆಗಳು ಏಳುತ್ತಿರುವ ಕಾರಣ, ಪ್ರವಾಸಿಗರಿಗೆ ನೀರಿಗಿಳಿಯದಂತೆ ಲೈಫ್‌ಗಾರ್ಡ್‌ಗಳು ಎಚ್ಚರಿಕೆ ನೀಡುತ್ತಿದ್ದಾರೆ. ಬೀಚ್‌ಗಳಲ್ಲಿ ಆತಂಕದ ವಾತಾವರಣವಿದ್ದು, ಸದಾ ಗರ್ದಿಯಿಂದ ಕೂಡಿರುತ್ತಿದ್ದ ಬೀಚ್‌ಗಳಲ್ಲಿ ಪ್ರವಾಸಿಗರೇ ಕಾಣುತ್ತಿಲ್ಲ. ಇದೇ ವೇಳೆ, ಹಲವು ಬೀಚ್‌ಗಳು ಚಂಡಮಾರುತದಿಂದ ಹಾನಿ ಗೀಡಾಗಿವೆ ಎಂದು ಸರ್ಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next