ಮುಂಬೈ: ಧಾರಾಕಾರ ಮಳೆಗೆ(Heavy Rain) ವಾಣಿಜ್ಯ ನಗರಿ ಮುಂಬೈ(Mumbai) ನಲುಗಿ ಹೋಗಿದ್ದು, ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಟ್ರಾಫಿಕ್ ಜಾಮ್ ನಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಭಾರೀ ಮಳೆಯ ಪರಿಣಾಮ ಗುರುವಾರ (ಸೆ.26) ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ವಿಮಾನ ನಿಲ್ದಾಣಗಳು ಜಲಾವೃತಗೊಂಡಿದ್ದರಿಂದ ಸ್ಪೈಸ್ ಜೆಟ್, ಇಂಡಿಗೋ ಹಾಗೂ ವಿಸ್ತಾರ ವಿಮಾನಗಳು ಬೇರೆಡೆ ಮಾರ್ಗ ಬದಲಾಯಿಸಿರುವುದಾಗಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿವೆ. ಹಲವೆಡೆ ರೈಲು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ ಎಂದು ವರದಿ ವಿವರಿಸಿದೆ.
ಮುಂಬೈನಲ್ಲಿ ಪ್ರತಿಕೂಲ ಹವಾಮಾನದ ವಾತಾವರಣದ ಹಿನ್ನೆಲೆಯಲ್ಲಿ ಹೈದರಾಬಾದ್ ನಿಂದ ಮುಂಬೈಗೆ ತೆರಳುತ್ತಿದ್ದ ವಿಸ್ತಾರ UK534 ವಿಮಾನ ಹೈದರಾಬಾದ್ ಗೆ ಮರಳಿದೆ. ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ ಮತ್ತೊಂದು ವಿಸ್ತಾರ ವಿಮಾನ ಕೂಡಾ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿರುವುದಾಗಿ ವರದಿ ತಿಳಿಸಿದೆ.
ಭಾರೀ ಮಳೆಯಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ವಿಮಾನ ಪ್ರಯಾಣದ ಸ್ಟೇಟಸ್ ಅನ್ನು ಪರಿಶೀಲಿಸುತ್ತಿರಬೇಕು ಎಂದು ಸ್ಪೈಸ್ ಜೆಟ್ ಎಕ್ಸ್ ಖಾತೆಯಲ್ಲಿ ಮನವಿ ಮಾಡಿಕೊಂಡಿದೆ.
ಮುಲುಂಡು ಸುತ್ತಮುತ್ತ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಅಂಧೇರಿಯಲ್ಲಿ ಮಹಿಳೆಯೊಬ್ಬರು ತೆರೆದ ಒಳಚರಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಆಕೆಯ ಶವ ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.