Advertisement

ಮುಂಬೈಗೆ ಮತ್ತೆ ಮುಳುಗುವ ಭೀತಿ : ರೆಡ್‌ ಅಲರ್ಟ್‌ ಘೋಷಿಸಿದ ಐಎಂಡಿ

01:34 AM Jul 22, 2021 | Team Udayavani |

ನವದೆಹಲಿ/ಮುಂಬೈ/ಬೀಜಿಂಗ್‌: ದೇಶದ ವಾಣಿಜ್ಯ ರಾಜಧಾನಿ ಮುಂಬೈಗೆ ಮತ್ತೆ ಮಳೆಯ ಅಬ್ಬರದ ಅನುಭವ ಉಂಟಾಗುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಅನ್ನೂ ಘೋಷಿಸಿದೆ. ಬುಧವಾರ ಬೆಳಗ್ಗೆ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಅನ್ನು ಘೋಷಿಸಿತ್ತು. ಆದರೆ, ಸಂಜೆಯ ವೇಳೆಗೆ ಪರಿಸ್ಥಿತಿಯಲ್ಲಿ ಬದಲಾವಣೆಯಾದ್ದರಿಂದ ಮಳೆ ಮುನ್ನೆಚ್ಚರಿಕೆ ವರದಿಯಲ್ಲೂ ಬದಲಾವಣೆಯಾಯಿತು ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕಿ ಡಾ. ಜಯಂತ್‌ ಸರ್ಕಾರ್‌ ಹೇಳಿದ್ದಾರೆ.

Advertisement

ಕರಾವಳಿ ಕರ್ನಾಟಕ, ದಕ್ಷಿಣ ಗುಜರಾತ್‌ ಪ್ರದೇಶಗಳಲ್ಲಿಯೂ ಕೂಡ ಟ್ರಫ್ (ಕಡಿಮೆ ಒತ್ತಡ ತಗ್ಗು) ಉಂಟಾಗಿದ್ದರಿಂದ ಧಾರಾಕಾರವಾಗಿ ಮಳೆಯಾಗಲಿದೆ. ಮಹಾರಾಷ್ಟ್ರದ ಕೊಂಕಣ ಪ್ರದೇಶ, ರಾಯ್‌ಗಡ, ಪುಣೆ, ನಾಸಿಕ್‌, ಕೊಲ್ಹಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಲಿದೆ. ಮರಾಠವಾಡ ಪ್ರದೇಶದಲ್ಲಿ ಗುರುವಾರದ ವರೆಗೆ ಮಳೆಯಾಗಲಿದೆ. ಉತ್ತರ ಪ್ರದೇಶ, ಪಂಜಾಬ್‌, ಹರ್ಯಾಣ ಹೆಚ್ಚಿನ ಪ್ರದೇಶಗಳಲ್ಲಿ ಮಳೆಯಾಗಿದೆ.

ಮಳೆ ಮುಂದುವರಿಕೆ:
ದೇಶದ ಪಶ್ಚಿಮ ಕರಾವಳಿಯಲ್ಲಿ ಮುಂದಿನ ಮೂರರಿಂದ ನಾಲ್ಕು ದಿನಗಳ ವರೆಗೆ ಧಾರಾಕಾರ ಮಳೆಯಾಗಲಿದೆ. ಉತ್ತರ ಭಾರತದಲ್ಲಿ ಮುಂಗಾರು ಮಳೆಯ ಪ್ರಭಾವ ತಗ್ಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

150 ಮಂದಿ ಅಪಾಯದಲ್ಲಿ
ಉತ್ತರಾಖಂಡದಲ್ಲಿ ಕೂಡ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ಚಂಪಾವತ್‌ ಜಿಲ್ಲೆಯಲ್ಲಿ ಪ್ರವಾಸಕ್ಕಾಗಿ ಬಂದಿದ್ದ 150 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ತನಕ್‌ಪುರ ಘಾಟ್‌ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಹೀಗಾಗಿದೆ. ಇದರಿಂದಾಗಿ ವಿಶ್ರಾಮ್‌ಘಾಟ್‌ ಎಂಬಲ್ಲಿಗೆ ತೆರಳಲು ಅನನುಕೂಲವಾಗಿದೆ. ಇದರಿಂದಾಗಿ ಉತ್ತರಕಾಶಿ ಜಿಲ್ಲಾಡಳಿತ ಸಿಕ್ಕಿ ಹಾಕಿಕೊಂಡವರಿಗಾಗಿ ವಸತಿ, ಆಹಾರದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ.

ಮುಳುಗಿದ ಚೀನಾದ ಐಫೋನ್‌ ಸಿಟಿ
ಚೀನಾದಲ್ಲಿ ಐಫೋನ್‌ಗಳು ತಯಾರಾಗುವ ಪ್ರಾಂತ್ಯ ಹೆನಾನ್‌ ಮುಳುಗಿದೆ. ಹೆನಾನ್‌ ರಾಜಧಾನಿ ಝೆಂಗೌjನಲ್ಲಿ ಒಂದು ವರ್ಷದಲ್ಲಿ ಬೀಳುವ ಸರಾಸರಿ ಮಳೆ ಕೇವಲ ಮೂರು ದಿನಗಳಲ್ಲಿ ಸುರಿದಿದೆ. ತೈವಾನ್‌ನ ಹ್ಯಾನ್‌ ಹೈಪ್ರಿಸಿಷನ್‌ ಕಂಪನಿಯ ಒಡೆತನದಲ್ಲಿರುವ ಐಫೋನ್‌ ಕಯಾರಿಕಾ ಘಟಕ ಇತ್ತೀಚೆಗಷ್ಟೇ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿತ್ತು. ಅಲ್ಲಿಗೂ ನೀರು ನುಗ್ಗಿ ಸಮಸ್ಯೆಯಾಗಿದೆ.

Advertisement

ಮಳೆಯಿಂದಾಗಿ 12 ಮಂದಿ ಅಸುನೀಗಿದ್ದಾರೆ ಮತ್ತು 2 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ. ರಸ್ತೆಗಳೇ ನದಿಯಂತಾಗಿದ್ದು, ಪ್ರವಾಹದ ನೀರು ಹರಿಯುತ್ತಿದೆ. ಪ್ರಾಂತ್ಯದ ಹಲವಾರು ಅಣೆಕಟ್ಟುಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರು ಸಂಗ್ರಹವಾಗಿದೆ. ಹೀಗಾಗಿ, ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದು ಪ್ರವಾಹ ಪರಿಸ್ಥಿತಿಗೂ ಕಾರಣವಾಗಿದ್ದು, ಹಲವಾರು ಪಟ್ಟಣಗಳು ಜಲಾವೃತವಾಗಿವೆ.

ಹೆನಾನ್‌ ಪ್ರಾಂತ್ಯಕ್ಕೆ ತೆರಳುವ ಮತ್ತು ಅಲ್ಲಿಂದ ಹೊರಡುವ ರೈಲು ಮತ್ತು ವಿಮಾನ ಯಾನಗಳನ್ನು ರದ್ದುಗೊಳಿಸಲಾಗಿದೆ. ಇದೇ ವೇಳೆ, ಕೇಂದ್ರ ಚೀನಾದ ಬಾಲಮಂದಿರವೊಂದಕ್ಕೆ ನೀರು ನುಗ್ಗಿದ್ದರಿಂದ ಅಲ್ಲಿಗೆ ತೆರಳಿದ್ದ ಚಿಣ್ಣರು ನೀರು ಪಾಲಾಗುವುದರಲ್ಲಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ರಕ್ಷಣಾ ಪಡೆಗಳು ಅವರನ್ನು ಪಾರು ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next