ಪುಣೆ/ಹೈದರಾಬಾದ್: ರೌದ್ರಾವತಾರ ಎತ್ತಿರುವ ವರುಣ ಮಹಾ ರಾಷ್ಟ್ರದಲ್ಲೂ ಮರಣ ಮೃದಂಗ ಬಾರಿಸಿದ್ದಾನೆ. ಮಳೆಯ ಧಾರಾಕಾರ ಆರ್ಭಟದಿಂದಾಗಿ 3 ಜಿಲ್ಲೆಗಳಲ್ಲಿ 27 ಮಂದಿ ಸಾವನ್ನಪ್ಪಿದ್ದಾರೆ.
ಪಶ್ಚಿಮ ಮಹಾರಾಷ್ಟ್ರದ ಸೊಲ್ಲಾಪುರ, ಸಾಂಗ್ಲಿ ಮತ್ತು ಪುಣೆ ಜಿಲ್ಲೆಗಳಲ್ಲಿ ಸಾಕಷ್ಟು ಸಾವು-ನೋವು ಸಂಭವಿಸಿದೆ. ಸುಮಾರು 20 ಸಾವಿರ ಮಂ ಯನ್ನು ಗುರುವಾರ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸ ಲಾಗಿದೆ. ಸಾಂಗ್ಲಿಯಲ್ಲಿ 9, ಪುಣೆ ಜಿಲ್ಲೆಯಲ್ಲಿ 4 ಸಾವುಗಳಾಗಿವೆ.
ಸೊಲ್ಲಾಪುರ ತತ್ತರ: ಸೊಲ್ಲಾ ಪುರವೊಂದರಲ್ಲೇ 14 ಮಂದಿ ಪ್ರಾಣಬಿಟ್ಟಿದ್ದಾರೆ. 8 ಸಾವಿರ ಮಂದಿಯ ಸ್ಥಳಾಂತರ ಪ್ರಕ್ರಿಯೆ ಯಶಸ್ವಿಯಾಗಿದೆ. ಉಜಾನಿ ಅಣೆಕಟ್ಟೆಯ ನೀರನ್ನು ನೈರಾ ಮತ್ತು ಭೀಮಾ ನದಿಗಳಿಗೆ ಬಿಟ್ಟ ಪರಿಣಾಮ ನದಿ ಪಾತ್ರದಲ್ಲಿ ಭಾರೀ ಪ್ರವಾಹ ಸೃಷ್ಟಿಯಾಗಿದೆ. ಡ್ಯಾಂನಿಂದ 2.3 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದ್ದು, ಭೀಮಾ ತೀರದ ಜನತೆಗೆ ಜಾಗ್ರತೆ ವಹಿಸಲು ಸೂಚಿಸಲಾಗಿದೆ. ಸೊಲ್ಲಾಪುರದಲ್ಲಿ ಕಳೆದ 24 ಗಂಟೆಗಳಲ್ಲಿ 56 ಸೆಂ.ಮೀ. ಮಳೆ ಬಿದ್ದಿದೆ. ಪ್ರವಾಹದಿಂದ ಮುಳುಗಡೆಯಾದ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (ಎನ್‌ಡಿಆರ್‌ಆಫ್) ರಕ್ಷಣ ಕಾರ್ಯ ತೀವ್ರಗೊಳಿಸಿದೆ.
ಮುಂಬಯಿಯಲ್ಲೂ ಮಳೆ: ಅರಬಿ ಸಮುದ್ರದಲ್ಲೂ ವಾಯುಭಾರ ಕುಸಿತ ಉಂಟಾಗಿದ್ದು ಮುಂದಿನ 48 ಗಂಟೆಗಳಲ್ಲಿ ಮುಂಬಯಿ ಸೇರಿದಂತೆ ದಕ್ಷಿಣ ಕೊಂಕಣ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರ, ಕೊಂಕಣ ತೀರ, ದ. ಗುಜರಾತ್ ತೀರಗಳಿಗೆ ಸೈಕ್ಲೋನ್ ಅಪ್ಪಳಿಸಲಿದೆ.
ತೆಲಂಗಾಣದಲ್ಲಿ 50 ಪ್ರಾಣಹಾನಿ
ವರುಣನ ಅಟ್ಟಹಾಸದಿಂದಾಗಿ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆ ಎಂದು ತೆಲಂಗಾಣ ಸರಕಾರ ತಿಳಿಸಿದೆ. “5 ಸಾವಿರ ಕೋಟಿ ರೂ. ಆಸ್ತಿಪಾಸ್ತಿಗೆ ರಣಮಳೆ ಹಾನಿ ಮಾಡಿದೆ. ಕೇಂದ್ರ ಸರಕಾರದಿಂದ ಕೂಡಲೇ 1350 ಕೋಟಿ ತುರ್ತು ಪರಿಹಾರವನ್ನು ಘೋಷಿಸಬೇಕು’ ಎಂದು ಕೋರಿ ಸಿಎಂ ಕೆ. ಚಂದ್ರಶೇಖರ ರಾವ್, ಪ್ರಧಾನಿಗೆ ಪತ್ರ ಬರೆದಿದ್ದಾರೆ.