Advertisement
ಮುಂಬಯಿನ ಕೊಲಾಬಾದಲ್ಲಿ 46 ವರ್ಷಗಳಲ್ಲೇ ದಾಖಲೆಯ ಮಳೆಯಾಗಿದೆ. ಬುಧವಾರದಿಂದ ಗುರುವಾರ ಬೆಳಗ್ಗಿನವರೆಗೆ 24 ಗಂಟೆಗಳ ಅವಧಿಯಲ್ಲಿ 331.8 ಮಿ.ಮೀ. ಮಳೆಯಾಗಿದ್ದು, ಆಗಸ್ಟ್ ತಿಂಗಳಲ್ಲಿ ದಕ್ಷಿಣ ಮುಂಬಯಿ ಪ್ರದೇಶದಲ್ಲಿ ಇಷ್ಟೊಂದು ಮಳೆಯಾಗಿರುವುದು 46 ವರ್ಷಗಳಲ್ಲೇ ಮೊದಲು. ಬುಧವಾರ ಮುಂಬಯಿ, ಥಾಣೆ, ಪಾಲ್ಗರ್ ಜಿಲ್ಲೆಗಳಲ್ಲಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆಯಾಗಿದ್ದು, ರಸ್ತೆ ಹಾಗೂ ರೈಲು ಸಂಚಾರಗಳೆಲ್ಲ ವ್ಯತ್ಯಯವಾಗಿದ್ದವು. ಮುಂಬಯಿ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಶುಕ್ರವಾರವೂ ಮಧ್ಯಮ ಪ್ರಮಾಣದಿಂದ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಬುಧವಾರಕ್ಕೆ ಹೋಲಿಸಿದರೆ ಗುರುವಾರ ವರುಣನ ಅಬ್ಬರ ಸ್ವಲ್ಪಮಟ್ಟಿಗೆ ತಗ್ಗಿದೆ. ಹೀಗಾಗಿ, ನಿಧಾನ ವಾಗಿ ರೈಲು ಮತ್ತು ರಸ್ತೆ ಸಾರಿಗೆ ಸೇವೆಗಳು ಆರಂಭವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ದಕ್ಷಿಣ ಮುಂಬಯಿನ ಕೆಲವು ಪ್ರದೇಶಗಳು ಜಲಾವೃತವಾಗಿದ್ದು, ಅಲ್ಲಿನ ಪರಿಸ್ಥಿತಿ ಸುಧಾರಣೆಯಾಗಿಲ್ಲ.ಪಾಲ್ಗರ್ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಸುಮಾರು 4 ಗಂಟೆಗಳ ಕಾಲ ಮರದ ಮೇಲೆ ನಿಂತಿದ್ದ 5 ವರ್ಷದ ಬಾಲಕಿ ಸೇರಿದಂತೆ 22 ಮಂದಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಈ ರಕ್ಷಣಾ ಕಾರ್ಯ ಕೈಗೊಂಡ ಪಾಲ್ಗರ್ ಪೊಲೀಸ್ ಸೂಪರಿಂಟೆಂಡೆಂಟ್ ದತ್ತಾತ್ರೇಯ ಶಿಂಧೆ ಹಾಗೂ ತಂಡದ ಕಾರ್ಯಕ್ಕೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Related Articles
ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಪಂಚ ಗಂಗಾ ನದಿ ಗುರುವಾರ ಅಪಾಯದ ಮಟ್ಟಕ್ಕೆ ತಲು ಪಿದ್ದು, ನದಿ ತಟದ ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶ ಗಳಿಗೆ ಸ್ಥಳಾಂತರಿಸಲಾಗಿದೆ. ಭಾರೀ ಮಳೆ ಯಿಂದಾಗಿ ಸಂಜೆ 4 ಗಂಟೆ ವೇಳೆಗೆ ನದಿಯ ನೀರಿನ ಮಟ್ಟ 43 ಅಡಿಗೇರಿದೆ ಎಂದು ವಿಪತ್ತು ನಿರ್ವಹಣಾ ತಂಡ ಹೇಳಿದೆ. ಇದೇ ವೇಳೆ, ರಾಧಾನಗರಿ ಅಣೆಕಟ್ಟು ಶೇ.95ರಷ್ಟು ಭರ್ತಿಯಾಗಿದೆ. ಜಿಲ್ಲೆಯಲ್ಲಿ 9 ರಾಜ್ಯ ಹೆದ್ದಾರಿಗಳು ಮತ್ತು 25 ಇತರೆ ರಸ್ತೆಗಳಿಗೆ ಹಾನಿಯಾಗಿವೆ ಎಂದು ಲೋಕೋ ಪಯೋಗಿ ಇಲಾಖೆ ತಿಳಿಸಿದೆ.
Advertisement
ಕೇರಳದಲ್ಲೂ ಭಾರೀ ಮಳೆಯಾಗುತ್ತಿದ್ದು, ಇಡುಕ್ಕಿ ಹಾಗೂ ವಯನಾಡ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಲಿಯಾರ್ ನದಿಯು ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದ್ದು, ನೀಲಂಬೂರ್ ಪಟ್ಟಣವು ಭಾಗಶಃ ಮುಳುಗಡೆಯಾಗಿದೆ. ಶುಕ್ರವಾರ ಮಲಪ್ಪುರಂ ಜಿಲ್ಲೆಗೆ ರೆಡ್ ಅಲರ್ಟ್, ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಕಾಸರಗೋಡು ಸೇರಿದಂತೆ 9 ಜಿಲ್ಲೆಗಳಿಗೆ ಆರೆಂಟ್ ಅಲರ್ಟ್ ಘೋಷಿಸ ಲಾಗಿದೆ. ಗಾಳಿ ಸಹಿತ ಮಳೆಯಿಂದಾಗಿ ಕಲ್ಲಿಕೋಟೆ, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಹಾನಿ ಯಾಗಿದೆ. ಈ ವರ್ಷದ ಮುಂಗಾರಲ್ಲಿ ಮಳೆ, ಭೂಕುಸಿತ, ಮರಗಳು ಧರೆಗುರುಳಿದ ಘಟನೆಗಳಿಂದ ಈವರೆಗೆ ಕೇರಳದಲ್ಲಿ 31 ಮಂದಿ ಸಾವಿಗೀಡಾಗಿದ್ದಾರೆ. ಮ್ಯಾಂಗ್ರೋವ್‌ಗಳ ನಾಶವೇ ಪ್ರವಾಹಕ್ಕೆ ಕಾರಣ
ಪ್ರತಿ ವರ್ಷ ಮಳೆಗಾಲದಲ್ಲೂ ಮುಂಬಯಿನಲ್ಲಿ ಪ್ರವಾಹ ತಲೆದೋರಲು ಮ್ಯಾಂಗ್ರೋವ್‌ಗಳ ನಾಶ ಹಾಗೂ ಅವ್ಯವಸ್ಥಿತ ನಿರ್ಮಾಣಗಳೇ ಕಾರಣ ಎಂದು ಪರಿಸರ ಹೋರಾಟಗಾರರು ಹಾಗೂ ನಗರ ಯೋಜನಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಮ್ಯಾಂಗ್ರೋವ್‌ಗಳು ಹೆಚ್ಚುವರಿ ನೀರನ್ನು ಹೀರಿಕೊಳ್ಳುತ್ತವೆ. ಆದರೆ, ಮುಂಬಯಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹೆಸರಲ್ಲಿ ಅವು ಗಳನ್ನು ನಾಶ ಮಾಡಲಾಗಿದೆ. ಮ್ಯಾಂಗ್ರೋವ್‌ಗಳಿದ್ದ ಪ್ರದೇಶಗಳನ್ನು ಅತಿಕ್ರಮಿಸಿಕೊಳ್ಳಲಾಗಿದ್ದು, ಈಗ ಮಳೆ ನೀರು ಸಮುದ್ರಕ್ಕೆ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಮ್ಯಾಂಗ್ರೋವ್‌ಗಳಿಗೆ ಪ್ರವಾಹದ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವೂ ತಗ್ಗಿದೆ. ಈ ಎಲ್ಲ ಕಾರಣಗಳಿಂದಾಗಿ ಪ್ರವಾಹದ ಸಮಸ್ಯೆ ಹೆಚ್ಚಳವಾಗಿದೆ ಎಂದು ಪರಿಸರ ಹೋರಾಟಗಾರರು ಹೇಳಿದ್ದಾರೆ. ವೈರಲ್ ಆದ ತೆಂಗಿನ ಮರದ ಓಲಾಟ!
ಮುಂಬಯಿನಲ್ಲಿ ಗಂಟೆಗೆ 107 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ, ಧಾರಾಕಾರ ಮಳೆ, ಸಿಡಿಲಿನ ಅಬ್ಬರವು ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯ ವಿಷಯವಾಗಿತ್ತು. ಗಾಳಿಯ ರಭಸಕ್ಕೆ ತೆಂಗಿನ ಮರ ಅತ್ತಿಂದಿತ್ತ ಓಲಾಡುತ್ತಿದ್ದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉದ್ಯಮಿ ಆನಂದ್ ಮಹೀಂದ್ರಾ ಅವರೂ ಟ್ವಿಟರ್‌ನಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಿದ್ದು, ಮುಂಬಯಿ ಮಳೆಯ ಎಲ್ಲ ವೀಡಿಯೋಗಳ ಪೈಕಿ ಇದು ಕೌತುಕ ಮೂಡಿಸಿದ ದೃಶ್ಯ ಎಂದು ಬರೆದುಕೊಂಡಿದ್ದಾರೆ. ಇದಲ್ಲದೆ, ತಾತ್ಕಾಲಿಕ ತೆಪ್ಪವೊಂದರಲ್ಲಿ ಇಬ್ಬರು ಮಲಗಿಕೊಂಡು ತೆರಳುತ್ತಿದ್ದ ವಿಡಿಯೋ, ಪ್ರವಾಹದಲ್ಲಿ ಅತಂತ್ರವಾಗಿದ್ದ ಬೆಕ್ಕನ್ನು ತನ್ನ ಬೈಕಿನಲ್ಲಿ ಕರೆದೊಯ್ಯುತ್ತಿದ್ದ ವ್ಯಕ್ತಿಯ ವಿಡಿಯೋ ಸೇರಿದಂತೆ ಅನೇಕ ದೃಶ್ಯಗಳು ವೈರಲ್ ಆಗಿವೆ.