ಮಂಗಳೂರು: “ದಾದೆ ಅಣ್ಣಾ.. ಒಲ್ಪ ತೂಂಡಲಾ ನೀರ್.. ಪುಲ್ಯ ಕಾಂಡೇನೆ ಇಲ್ಲದ ಉಲಾಯಿ ಬರ್ಸ ದ ನೀರ್ ಬೈದುಂಡ್…” ( ಏನಣ್ಣಾ.. ಎಲ್ಲಿ ನೋಡಿದರೂ ನೀರು. ಬೆಳಗ್ಗೆಯೇ ಮನೆಯೊಳಗೆ ಮಳೆ ನೀರು ಬಂದಿದೆ) ಇದು ಮಂಗಳೂರು ಜನರ ಪರಿಸ್ಥಿತಿ. ಶನಿವಾರ ಮುಂಜಾನೆ ಗುಡುಗು ಸಹಿತವಾಗಿ ಸುಮಾರು ಮೂರು ಗಂಟೆಗಳ ಕಾಲ ಸುರಿದ ಮಳೆಗೆ ಮಂಗಳೂರು ಅಕ್ಷರಶಃ ನಲುಗಿದೆ.
ಬೆಳಗ್ಗೆ ಬಿಡದೆ ಸುರಿದ ಬಿರುಸಿನ ಮಳೆಯ ಕಾರಣದಿಂದ ಪಂಪ್ ವೆಲ್ ಸೇತುವೆ ಕೆಳಗೆ ನಾಲ್ಕು ಭಾಗದಲ್ಲೂ ನೀರು ತುಂಬಿ ಕೆರೆಯಂತಾಗಿದೆ. ಬೆಳಗ್ಗೆ ಬೇಗ ಬೆಂಗಳೂರು ಸೇರಿದಂತೆ ಹಲವು ದಿಕ್ಕಿನಿಂದ ಬರುವ ವಾಹನಗಳ ಸಂಚಾರಕ್ಕೆ ತೊಡಕಾಯಿತು.
ಸೆಂಟ್ರಲ್ ರೈಲ್ವೇ ನಿಲ್ದಾಣ, ಕೊಟ್ಟಾರ ಚೌಖಿ, ಕೊಡಿಯಾಲ್ ಗುತ್ತು, ದೇರೆಬೈಲು ಸೇರಿ ನಗರದ ಬಹುಭಾಗದಲ್ಲಿ ನೆರೆ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದೆ. ಪಡೀಲ್ – ಕಣ್ಣೂರು ಹೆದ್ದಾರಿ ಮತ್ತೊಮ್ಮೆ ಜಲಾವೃತವಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿ ವಾಹನಗಳು ಸಂಚಾರ ನಡೆಸಿದೆ.
ಹಲವೆಡೆ ರಸ್ತೆ ಬದಿ ಪಾರ್ಕ್ ಮಾಡಿದ್ದ ವಾಹಗಳು ಮುಳುಗಿದೆ. ಪಾಂಡೇಶ್ವರ ಶಿವನಗರ ವ್ಯಾಪ್ತಿಯಲ್ಲಿ ನೆರೆ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಹಲವರು ಪರದಾಟ ನಡೆಸುವಂತಾಯಿತು. ಹಲವು ಮನೆಗಳ ಇಲೆಕ್ಟ್ರಾನಿಕ್ ಸಾಮಾಗ್ರಿಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
ರಜೆ ಘೋಷಣೆ: ರಸ್ತೆಯಲ್ಲಿ ನೆರೆ ನೀರು ಹರಿದು ಹೋಗುತ್ತಿರುವ ಪರಿಣಾಮ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಲೇಜಿಗಳಿಗೂ ರಜೆ ಘೋಷಣೆ ಮಾಡಲಾಗಿದೆ.