Advertisement

ಮಳೆಯಿಂದ ಜನಜೀವನ ಅಸ್ತವ್ಯಸ್ತ; ಯಳಂದೂರು ತಾಲೂಕಿನಲ್ಲಿ ಕಳೆದ 3ದಿನಗಳಿಂದ ನಿರಂತರ ಮಳೆ

11:20 AM Aug 06, 2020 | mahesh |

ಯಳಂದೂರು: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದಲೂ ನಿರಂತರ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತಿನಿತ್ಯ ಮೋಡಕವಿದ ವಾತಾವರಣವಿದ್ದು, ಕೆಲವೊಮ್ಮೆ ತುಂತುರು ಹಾಗೂ ಜೋರು ಗಾಳಿ, ಮಳೆ ಸುರಿಯುತ್ತಿದ್ದು ವಾತಾವರಣ ತಂಪಾಗಿದೆ. ಬೀದಿ ಬದಿ ವ್ಯಾಪಾರಿಗಳು, ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ವಿವಿಧ ಕೆಲಸಗಳಿಗೆ ಬರುವ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಸಂತೆಯಲ್ಲೂ ಕಾಡಿದ ಮಳೆ: ಜಿಲ್ಲೆಯಲ್ಲಿ ಸಂತೆ ನಡೆಸಲು ಅನುಮತಿ ನೀಡಲಾಗಿದ್ದು, ಮಂಗಳವಾರ ಸಂತೆಮರಹಳ್ಳಿಯಲ್ಲಿ ನಡೆದ ಸಂತೆಗೂ ಮಳೆ ಕಾಟ
ಕೊಟ್ಟಿತು. ವ್ಯಾಪಾರಿ ಹಾಗೂ ಗ್ರಾಹಕರು ಬಹುದಿನಗಳ ನಂತರ ಸಂತೆಯಲ್ಲಿ ವ್ಯವಹರಿಸಲು ಬಂದಿದ್ದರು. ಸಂಖ್ಯೆ ಕಡಿಮೆ ಇದ್ದರೂ ವ್ಯಾಪಾರಿಗಳಿಗೆ ಮಳೆಯಿಂದ
ತೊಂದರೆಯಾಯಿತು. ಮೈಸೂರು ರಸ್ತೆ ಕಾಮಗಾರಿ ಇನ್ನೂ ಆರಂಭವಾಗದ ಕಾರಣ ಈ ರಸ್ತೆಯಲ್ಲಿರುವ ಹಳ್ಳಗಳಲ್ಲಿ ನೀರು, ಕೆಸರು ತುಂಬಿ ವಾಹನ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯ ಶ್ರೀನಿವಾಸ್‌ ದೂರಿದರು.

ಪ್ರವಾಸಿಗರು ಹೆಚ್ಚಳ: ಪ್ರಸಿದ್ಧ ಪ್ರವಾಸಿ ತಾಣವಾಗಿರು ಬಿಳಿಗಿರಿರಂಗನ ಬೆಟ್ಟದಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಇಲ್ಲಿಗೆ ಇದ್ದ ಪ್ರವೇಶ ನಿರ್ಬಂಧ ತೆರವುಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹಸಿರು ಹೊದ್ದು ಮಲಗಿರುವ ಗಿರಿ ಸಾಲುಗಳು, ಮಳೆಯ ಆನಂದ ಹಾಗೂ ಮಳೆ ನಿಂತಾಗ
ಚಿಣ್ಣಾಟ ಆಡುವ ಮೋಡಗಳ ಸಾಲು, ಮಂಜಿನ ಅನುಭವವನ್ನು ಪ್ರವಾಸಿಗರು ಅನುಭವಿಸಲು ಗುಂಪು ಗುಂಪಾಗಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದು, ಪ್ರಕೃತಿಯ
ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next