ಕೊರಟಗೆರೆ : ಭಾರಿ ಮಳೆಯ ಅವಾಂತರಕ್ಕೆ ನೂರಾರು ರೈತರ ಬದುಕು ಮೂರಾಬಟ್ಟೆಯಾಗುತ್ತಿದ್ದು, ಕೆರೆಯ ನೀರು ನುಗ್ಗಿ ನೂರಾರು ಎಕರೆ ಜಮೀನು ಜಲಾವೃತ ಗೊಂಡು ಬೆಳೆ ಹಾಗೂ ಅಡಿಕೆ ತೋಟ ನಾಶವಾಗುವ ಭೀತಿಯಲ್ಲಿ ರೈತರು ಕಂಗಾಲಾಗಿರುವ ಪರಿಸ್ಥಿತಿ ಕೊರಟಗೆರೆ ತಾಲೂಕಿನಲ್ಲಿ ನಿರ್ಮಾಣಗೊಂಡಿದೆ .
ತಾಲೂಕಿನ ದೊಡ್ಡಸಾಗ್ಗೆರೆ ಕೆರೆಯ ತೂಬಿನಿಂದ ಹಾದು ಹೋಗುವ ನೀರು ಸಮರ್ಪಕವಾಗಿ ಹಾದು ಹೋಗಲು ಕಾಲುವೆ ಮುಚ್ಚಿ ಹೋದ ಪರಿಣಾಮ ಅಡಿಕೆ ತೋಟ ಹಾಗೂ ರೈತರ ಬೆಳೆಗೆ ನುಗ್ಗಿ ಬೆಳೆ ನಾಶವಾಗುವುದರ ಜೊತೆಗೆ ಬೆಳೆದು ನಿಂತ ಅಡಿಕೆ ತೋಟ ಕೊಚ್ಚಿ ಹೋಗಿ ನಾಶವಾಗುವ ಭೀತಿಯಲ್ಲಿ ರೈತರು ಆತಂಕ ಪಡುತ್ತಿರುವುದು ಕಂಡು ಬರುತ್ತಿದೆ.
ದೊಡ್ಡ ಸಾಗ್ಗೆರೆ ಹಾಗೂ ಗಜಮುದ್ದನಹಳ್ಳಿ ಮಧ್ಯಭಾಗದಲ್ಲಿ ಬರುವಂತಹ ದೊಡ್ಡಸಾಗ್ಗೆರೆ ಕೆರೆ ಸುತ್ತಮುತ್ತಲಿನ 4-5 ಹಳ್ಳಿಗಳ ಜನರ ಮನೆಗಳಿಗೆ ನುಗ್ಗುವ ಆತಂಕಕ್ಕೆ ಎಡೆ ಮಾಡುವುದರ ಜೊತೆಗೆ ನೂರಾರು ಎಕರೆ ಜಮೀನಿನಲ್ಲಿ ಬೆಳೆದು ನಿಂತ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳು ಕೊಚ್ಚಿ ಹೋಗುವುದರ ಜೊತೆಗೆ ಸತತ ಮಳೆ ನೀರಿನಿಂದ ಬೆಳೆ ನಾಶವಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿ ಸತತ ಮಳೆಯಿಂದ ಅತಿವೃಷ್ಟಿ ಹೆಚ್ಚಾಗಿ ಎಲ್ಲಾ ಕೆರೆಕಟ್ಟೆಗಳು ತುಂಬಿ ನೀರಿನ ಹರಿವು ಹೆಚ್ಚಾಗುತ್ತಿರುವುದರಿಂದ ಈ ಹಿಂದಿನ ರಾಜಗಾಲುವೆಗಳು ಸೇರಿದಂತೆ ಇನ್ನಿತರ ಕಾಲುವೆಗಳು ಮುಚ್ಚಿ ಹೋಗಿರುವ ಪರಿಣಾಮ ಅನಿವಾರ್ಯವಾಗಿ ರೈತರ ಜಮೀನುಗಳ ಮೇಲೆ ನೀರು ನುಗ್ಗುತ್ತಿದ್ದು ಇದರಿಂದ ಬೆಳೆ ನಾಶವಾಗಿ ಸತತ ಬರಗಾಲದಿಂದ 20 – 25 ವರ್ಷ ನೊಂದು- ಬೆಂದು ಹೋದ ರೈತನ ಬಾಳಿಗೆ ಅತಿವೃಷ್ಟಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ 15-20 ವರ್ಷಗಳ ಭೀಕರ ಬರಗಾಲದ ಸಂದರ್ಭದಲ್ಲಿ ಇಲ್ಲಿನ ರೈತರು ಕಾಲುವೆ ಒತ್ತುವರಿ ಮಾಡಿಕೊಂಡಿರುವ ಕಾರಣ ಜೊತೆಗೆ ಇಲ್ಲಿನ ಜನ ಒತ್ತುವರಿಯ ಬಗ್ಗೆ ಈ ಮಟ್ಟದ ನೀರು ಮುಂದೊಂದು ದಿನ ಬರುವ ಅರಿವು ಇಲ್ಲದ ಕಾರಣ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೊತೆಗೆ ಹೊಸದಾಗಿ ನಿರ್ಮಾಣವಾಗಿರುವ ರಸ್ತೆಗೆ ಸೇತುವೆ ನಿರ್ಮಾಣ ಮಾಡದ ಕಾರಣ ನೀರು ಹಾದು ಹೋಗಲು ತಡೆ ಒಡ್ಡಿದ ಪರಿಣಾಮ ಕಾಲುವೆಯಲ್ಲಿ ಹಾದು ಹೋಗುವ ಬದಲು ರೈತರ ಜಮೀನುಗಳಿಗೆ ನೀರು ನುಗ್ಗಿದ ಕಾರಣ ರೈತರ ಬೆಳೆಗಳು ನಾಶವಾಗಿವೆ.
ಈ ಭಾಗದ ನೂರಾರು ರೈತರು ಹಲವು ಬಾರಿ ಜಿಲ್ಲಾ ಪಂಚಾಯತ್ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ, ಯಾವುದೇ ಅಧಿಕಾರಿಗಳು ಸ್ಥಳ ಬಾರದೆ ಈಗಿನ ಪರಿಸ್ಥಿತಿ ನಿರ್ಮಾಣಕ್ಕೆ ಅಧಿಕಾರಿಗಳೇ ನೇರ ಹೊಣೆಗಾರಿಕೆಯಾಗಿದ್ದು, ತ್ವರಿತವಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಜೊತೆಗೆ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.