ತಿರುವನಂತಪುರಂ: ಕೇರಳದಾದ್ಯಂತ ಮಂಗಳವಾರ ಸುರಿದ ಮುಸಲಧಾರೆಯಿಂದ ಹಲವೆಡೆ ಭೂಕುಸಿತಗಳು ಸಂಭವಿಸಿದ್ದು, ನದಿಗಳ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದೆ. ಮಳೆ ಸಂಬಂಧಿ ಘಟನೆಗಳಿಗೆ ಒಂದೇ ದಿನ 6 ಮಂದಿ ಬಲಿಯಾಗಿದ್ದು, 3 ಮಂದಿ ನಾಪತ್ತೆಯಾಗಿದ್ದಾರೆ. ನಿರಂತರ ಮಳೆ ಸುರಿಯುತ್ತಿದ್ದು, ಬುಧವಾರವೂ ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ, ಕಾಸರಗೋಡು ಸೇರಿದಂತೆ 10 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ, ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಆ.5ರವರೆಗೆ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ವರುಣನ ಅಬ್ಬರ, ದಿಢೀರ್ ಪ್ರವಾಹ, ಭೂಕುಸಿತದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 95 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ಜು.31ರಿಂದ ಆ.2ರವರೆಗೆ ಅಂದರೆ 3 ದಿನಗಳಲ್ಲಿ ಒಟ್ಟು 12 ಮಂದಿ ಸಾವಿಗೀಡಾಗಿದ್ದು, 126 ಮನೆಗಳಿಗೆ ಹಾನಿಯಾಗಿವೆ. 27 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್: ಉದ್ದಜಿಗಿತ: ಮುರಳಿ ಶ್ರೀಶಂಕರ್, ಯಾಹಿಯ ಫೈನಲ್‌ಗೆ
ನೀರಿನ ಹರಿವಿನಲ್ಲಿ ಸಿಲುಕಿದ ಆನೆ: ವಿಡಿಯೋ ವೈರಲ್
ರಾತ್ರಿಪೂರ್ತಿ ಮಳೆಯಾದ ಕಾರಣ ತ್ರಿಶೂರ್ ಜಿಲ್ಲೆಯ ಚಾಲಕುಡಿ ನದಿಯ ನೀರಿನ ಮಟ್ಟ 5 ಅಡಿ ಏರಿಕೆಯಾಗಿದೆ. ಮಂಗಳವಾರ ಬೆಳಗ್ಗೆ ನದಿ ದಾಟುವ ಪ್ರಯತ್ನದಲ್ಲಿದ್ದ ಆನೆಯೊಂದು ನೀರಿನ ಹರಿವಿನಲ್ಲಿ ಸಿಲುಕಿ ಬಹಳ ಹೊತ್ತು ಒದ್ದಾಡಿದ ದೃಶ್ಯಗಳು ವೈರಲ್ ಆಗಿವೆ. ನೀರಿನಲ್ಲಿ ಕೊಚ್ಚಿಹೋದ ಆನೆ ಕೊನೆಗೆ ಒಂದು ಮರದಡಿ ಆಶ್ರಯ ಪಡೆದು, ಹರಸಾಹಸ ಪಟ್ಟು ದಡ ಸೇರಿ ಬಚಾವಾಗಿದೆ.