Advertisement
ಶಿರ್ವ: ಮನೆಗೆ ಸಿಡಿಲು ಬಡಿದು ಹಾನಿಶಿರ್ವ: ಇಲ್ಲಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬಳಿಯ ಗಾಂದೊಟ್ಯ ನಿವಾಸಿ ಗುಲಾಬಿ ಶೇರಿಗಾರ್ತಿ ಅವರ ಮನೆಗೆ ಬುಧವಾರ ರಾತ್ರಿ 11ರ ವೇಳೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಸಿಡಿಲಿನ ರಭಸಕ್ಕೆ ಬಚ್ಚಲು ಮನೆಯ ಮಾಡಿನ ತಗಡು ಶೀಟುಗಳು ಒಡೆದು ಹೋಗಿದ್ದು, ವಿದ್ಯುತ್ ಮೀಟರ್ ಪುಡಿಪುಡಿಯಾಗಿದೆ. ಮನೆಯ ಫ್ಯಾನ್, ಸರ್ವಿಸ್ ವಯರ್ ಹಾಗೂ ವಿದ್ಯುತ್ ಪಂಪ್ ಸುಟ್ಟು ಹೋಗಿದೆ. ವಿದ್ಯುತ್ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು ವಿದ್ಯುತ್ ಉಪಕರಣ ಗಳು ಚೆಲ್ಲಾಪಿಲ್ಲಿಯಾಗಿ ಸುಮಾರು 1ಲಕ್ಷ ರೂ. ನಷ್ಟ ಸಂಭವಿಸಿದೆ. ಮನೆಯಲ್ಲಿರುವವರು ಚಾವಡಿಯಲ್ಲಿ ಕುಳಿತಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ತಾಲೂಕಿನ ಮೂರು ಕಡೆ ಸಿಡಿಲು ಬಡಿದು ಇಬ್ಬರು ಗಾಯಗೊಂಡಿದ್ದಾರೆ. ಎರಡು ತೆಂಗಿನ ಮರಗಳು ಹೊತ್ತಿ ಉರಿದಿವೆ.ಕಕ್ಕಿಂಜೆ ಗಾಂಧಿನಗರ ಬಳಿ ಮನೆಯೊಂದಕ್ಕೆ ಶುಕ್ರವಾರ ಸಂಜೆ 7.20ರ ಸುಮಾರಿಗೆ ಸಿಡಿಲು ಬಡಿದು ಮನೆಯಲ್ಲಿದ್ದ ನೆಬಿಸಾ ಹಾಗೂ ಆಸಿಫ್ ಅವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತತ್ ಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ನೆರಿಯ ಬಳಿಯ ಅಣಿಯೂರಿನಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡಿದೆ. ಗೋಪಾಲ ಗೌಡ ಅವರ ಮನೆ ಸಮೀಪವೇ ತೆಂಗಿನ ಮರವಿದ್ದು, ಉರಿದಿದೆ. ಘಟನೆ ವೇಳೆ ಮನೆಯಲ್ಲಿ ಗೋಪಾಲ ಗೌಡ, ಅವರ ಪತ್ನಿ, ಪುತ್ರನಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಮನೆಯ ವಯರಿಂಗ್ ಸುಟ್ಟುಹೋಗಿದೆ.
Related Articles
ವೀಡಿಯೋ ವೈರಲ್
ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ವೀಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು ವೈರಲ್ ಆಗಿದೆ. ಗುರುವಾರ ರಾತ್ರಿ ತಾಲೂಕಿನಾದ್ಯಂತ ಸಿಡಿಲಿನ ಆರ್ಭಟ ಜೋರಾಗಿದ್ದು, ಜನತೆ ಭಯಪಡುವಂತಾಯಿತು.
ಇನ್ನೊಂದು ಘಟನೆಯಲ್ಲಿ ಸುರ್ಯ ಬಳಿಯ ಶಿವರಾಮ್ ಪಡ್ವೆಟ್ನಾಯ ಮನೆ ಸಮೀಪದ ತೆಂಗಿನ ಮರಕ್ಕೆ ರಾತ್ರಿ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದೆ.
Advertisement
ಧಾರವಾಡದಲ್ಲಿ 7 ಸೆಂ.ಮೀ. ಮಳೆಶುಕ್ರವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಉತ್ತರ ಒಳನಾಡಿನ ಹಲವೆಡೆ ಮತ್ತು ಕರಾವಳಿಯ ಕೆಲವೆಡೆ ಸಾಧಾರಣ ಮಳೆಯಾಯಿತು. ಧಾರವಾಡದಲ್ಲಿ ಅಧಿಕವೆನಿಸಿದ 7 ಸೆಂ.ಮೀ. ಮಳೆ ಸುರಿಯಿತು. ಉತ್ತರ ಒಳನಾಡಿನ ಹಲವೆಡೆ ಮತ್ತು ಕರಾವಳಿಯ ಕೆಲವೆಡೆ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಾಗಿತ್ತು. ಇನ್ನು ದಕ್ಷಿಣ ಒಳನಾಡಿನಲ್ಲಿ ಹೆಚ್ಚೇನೂ ಬದಲಾವಣೆ ಕಂಡುಬರಲಿಲ್ಲ. ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠ 41.1ಡಿ.ಸೆ. ತಾಪಮಾನ ದಾಖಲಾಯಿತು. ರವಿವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಕಚೇರಿಯ ಪ್ರಕಟನೆ ತಿಳಿಸಿದೆ.