Advertisement

ಕರಾವಳಿಯಲ್ಲಿ ಮುಂದುವರಿದ ವರ್ಷಧಾರೆ

02:09 AM Jun 17, 2020 | Hari Prasad |

ಮಂಗಳೂರು/ ಉಡುಪಿ: ಕರಾವಳಿಯಲ್ಲಿ ಮಂಗಳವಾರವೂ ಮಳೆ ಮುಂದುವರಿದಿದೆ. ಉಡುಪಿ – ಮಣಿಪಾಲ ಪರಿಸರದಲ್ಲಿ ರಾತ್ರಿ ಗುಡಗು ಸಹಿತ ಭಾರೀ ಮಳೆ ಸುರಿದಿದೆ.

Advertisement

ಆದರೆ, ಕಳೆದ ಒಂದು ವಾರಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮಳೆ ತೀವ್ರತೆ ತುಸು ಕಡಿಮೆಯಾಗಿದೆ.

ಮಂಗಳೂರು ನಗರದಲ್ಲಿ ಬೆಳಗ್ಗಿನಿಂದ ಬಿಟ್ಟು ಬಿಟ್ಟು ಮಳೆಯಾಗಿತ್ತು. ಉಳಿದಂತೆ ಮೋಡ ಕವಿದ ವಾತಾವರಣವಿತ್ತು.ಬೆಳಗ್ಗೆ ಸುರಿದ ಭಾರೀ ಮಳೆಗೆ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಮಳೆಯ ನಡುವೆಯೇ ನಗರದಲ್ಲಿ ಕೆಲವೊಂದು ಕಾಮಗಾರಿಗಳು ನಡೆಯುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ಕಷ್ಟವಾಗಿತ್ತು.

ದ.ಕ. ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಧರ್ಮಸ್ಥಳ, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಕನ್ಯಾನ, ಬಂಟ್ವಾಳ, ಮಡಂತ್ಯಾರು, ವೇಣೂರು, ಸುರತ್ಕಲ್‌, ಉಳ್ಳಾಲ ಸೇರಿದಂತೆ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿತ್ತು.
ಉಡುಪಿ ಜಿಲ್ಲೆಯ ಕುಂದಾಪುರ, ಹೆಬ್ರಿ, ಕಾರ್ಕಳ, ಉಡುಪಿ ತಾಲೂಕಿನ ವಿವಿಧ ಕಡೆ ಮಳೆಯಾಗಿದೆ. ಕೆಲವೆಡೆ ಗಾಳಿ ಜತೆ ಗುಡುಗು ಕೂಡ ಇತ್ತು.

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಪಡುಬಿದ್ರಿ: ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ನಡೆಸಿರುವುದರಿಂದ ಪಡುಬಿದ್ರಿ ನಡ್ಪಾಲು ಗ್ರಾಮದ ಕೊಂಬೆಟ್ಟು ಎಂಬಲ್ಲಿ ತಗ್ಗು ಪ್ರದೇಶದ ಎರಡು ಮನೆಗಳಿಗೆ ಕೃತಕ ನೆರೆ ನೀರು ನುಗ್ಗಿದೆ. ಹೆದ್ದಾರಿ ಬದಿಯಲ್ಲಿನ ಸುದರ್ಶನ ಆಚಾರ್ಯ ಮತ್ತು ಲಲಿತಾ ದೇವಾಡಿಗ ಎಂಬವರ ಮನೆಗಳಿಗೆ ಮಳೆ ನೀರು ನುಗ್ಗಿದೆ.

Advertisement

ಸಿದ್ದಾಪುರ: ಮರ ಬಿದ್ದು ಹಾನಿ
ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಕಾರೂರು ಪ್ರಾಥಮಿಕ ಶಾಲೆಯ ಹತ್ತಿರದ ಪರಿಶಿಷ್ಟ ಜಾತಿಯ ದಾರು ಅವರ ಮನೆಯ ದನದ ಕೊಟ್ಟಿಗೆಯ ಮೇಲೆ ಹಲಸಿನ ಮರ ತುಂಡಾಗಿ ಬಿದ್ದ ಪರಿಣಾಮ ಹಟ್ಟಿ ಭಾಗಶಃ ಜಖಂಗೊಂಡಿದೆ.

ಕಾಸರಗೋಡು: ಎಲ್ಲೋ ಅಲರ್ಟ್‌
ಕಾಸರಗೋಡು ಸಹಿತ ಕೇರಳದ ವಿವಿಧ ಜಿಲ್ಲೆಗಳಲ್ಲಿ ಜೂ.17 ಮತ್ತು ಜೂ.20ರಂದು ಬಿರುಸಿನ ಮಳೆ ಸುರಿಯುವ ಸಾಧ್ಯತೆಯಿದ್ದು, ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಕೊಲ್ಲೂರು, ಗೋಕರ್ಣ: 10 ಸೆಂ.ಮೀ. ಮಳೆ
ಮಂಗಳವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕರಾವಳಿಯ ಬಹುತೇಕ ಎಲ್ಲೆಡೆ ಮತ್ತು ಒಳನಾಡಿನ ಕೆಲವೆಡೆ ಮಳೆಯಾಯಿತು. ಉತ್ತರ ಕರ್ನಾಟಕದಲ್ಲಿ ಮುಂಗಾರು ದುರ್ಬಲವಾಗಿತ್ತು. ಉಡುಪಿ ಜಿಲ್ಲೆಯ ಕೊಲ್ಲೂರು ಮತ್ತು ಉತ್ತರ ಕನ್ನಡದ ಗೋಕರ್ಣಗಳಲ್ಲಿ ತಲಾ 10 ಸೆಂ.ಮೀ. ಮಳೆ ಸುರಿದಿದ್ದು, ರಾಜ್ಯಕ್ಕೆ ಗರಿಷ್ಠವಾಗಿತ್ತು.

ವಿವಿಧೆಡೆ ಸುರಿದ ಮಳೆ ಪ್ರಮಾಣ ಹೀಗಿದೆ (ಸೆಂ.ಮೀ.ಗಳಲ್ಲಿ):
ಕೊಟ್ಟಿಗೆಹಾರ 8, ಶಿರಾಲಿ, ಗೇರುಸೊಪ್ಪೆ ತಲಾ 7, ಕಾರ್ಕಳ, ಹೊಸನಗರ ತಲಾ 6, ಕುಂದಾಪುರ 5, ಹೊನ್ನಾವರ, ಅಂಕೋಲಾ, ಮಂಕಿ, ಕದ್ರಾ, ಸಿದ್ದಾಪುರ, ಕೋಟ, ಕಾರವಾರ, ಕಮ್ಮರಡಿ ತಲಾ 4, ಹುಂಚದಕಟ್ಟೆ, ತಾಳಗುಪ್ಪ, ಭಾಗಮಂಡಲ ತಲಾ 3, ಮಂಚಿಕೆರೆ, ಶೃಂಗೇರಿ, ವಿರಾಜಪೇಟೆ ತಲಾ 2, ಹಳಿಯಾಳ, ಯಲ್ಲಾಪುರ, ಪಣಂಬೂರು, ತ್ಯಾಗರ್ತಿ, ಮಡಿಕೇರಿ, ಜಯಪುರ ತಲಾ 1.

ಗುರುವಾರ ಮುಂಜಾನೆಯವರೆಗಿನ 48 ತಾಸು ಅವಧಿಯಲ್ಲಿ ಕರಾವಳಿಯ ಬಹುತೇಕ ಎಲ್ಲೆಡೆ ಮತ್ತು ಒಳನಾಡಿನ ಕೆಲವೆಡೆ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಕರಾವಳಿಯಲ್ಲಿ ಜೂ.17ರಂದು ಆರೆಂಜ್‌ ಮತ್ತು ಜೂ.18ರಿಂದ 21ರವರೆಗೆ ಎಲ್ಲೊ ಅಲರ್ಟ್‌ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next