ಕಲಬುರಗಿ: ಜಿಲ್ಲಾದ್ಯಂತ ಶುಕ್ರವಾರ ಧಾರಾಕಾರವಾಗಿ ಮಳೆ ಸುರಿದಿದೆ. ಬೆಳಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣ ಇತ್ತು. ಸಂಜೆಯಾಗುತ್ತಲೇ ಹಲವೆಡೆ ಭಾರಿ ಮಳೆ ಸುರಿಯಿತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಲಬುರಗಿ ನಗರ ಸೇರಿ ಜಿಲ್ಲೆಯ ಬಹುತೇಕ ಕಡೆಯಲ್ಲಿ ವ್ಯಾಪಕ ಮಳೆಯಾಗಿದೆ. ಮುಖ್ಯ ರಸ್ತೆಗಳು ಜಲಾವೃತಗೊಂಡಿದೆ. ರಾತ್ರಿ 9 ಗಂಟೆಯಾದರೂ ವರ್ಷಾಧಾರೆ ಸುರಿಯುತ್ತಿದೆ. ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ಜನ ಸಂಚಾರಕ್ಕೂ ಅಡ್ಡಿ ಉಂಟಾಗಿದೆ.
ಚಿತ್ತಾಪುರ ತಾಲೂಕಿನ ವಾಡಿ ಸಮೀಪದ ರಾವೂರ ಗ್ರಾಮ ಮಳೆಗೆ ತತ್ತರಿಸಿದೆ. ಊರಿನ ಕಟ್ಟಕಡೆಯ ಇಳಿಜಾರು ಪ್ರದೇಶದಲ್ಲಿರುವ ಶ್ರೀಸಿದ್ಧಲಿಂಗೇಶ್ವರ ಸಂಸ್ಥಾನ ಮಠಕ್ಕೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ.
ಗ್ರಾಮದ ವಿವಿಧ ಬಡಾವಣೆಗಳ ತಿಪ್ಪೆ ಕಸ, ಪ್ಲಾಸ್ಟಿಕ್ ತ್ಯಾಜ್ಯ, ಚರಂಡಿ ಕೊಳೆ ಮಠದ ಆವರಣಕ್ಕೆ ಹರಿದು ಲಿಂ.ಸಿದ್ಧಲಿಂಗ ಸ್ವಾಮೀಜಿಗಳ ಗದ್ದುಗೆಗಳು ಕೊಳೆ ನೀರಿನಲ್ಲಿ ಮುಳುಗಿವೆ. ಮಠದ ಮುಂದಿನ ರಥ ಬೀದಿಯೂ ಕೂಡ ಸರೋವರದಂತೆ ಗೋಚರಿಸುತ್ತಿದೆ.
ಇದನ್ನೂ ಓದಿ :40 ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದ ಐವರು ಪಾಕ್ ನಿರಾಶ್ರಿತರಿಗೆ ಭಾರತದ ಪೌರತ್ವ
ಬಯಲು ಪ್ರದೇಶಗಳಿಂದ ನೀರು ಮಠದೊಳಕ್ಕೆ ಹರಿದು ಬಂದಿದೆ. ಪ್ರತಿಸಲ ಮಳೆಯಾದಾಗಲೊಮ್ಮೆ ಕೊಳೆ ನೀರು ರಭಸವಾಗಿ ಮಠವನ್ನು ಪ್ರವೇಶ ಮಾಡುತ್ತದೆ. ಆದರೂ ಗ್ರಾಪಂ ಆಡಳಿತ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.