ನರಗುಂದ: ಜಿಲ್ಲಾಡಳಿತ ಹರಸಾಹಸ ಪಟ್ಟರೂ ತಾಲೂಕಿನ ಗಡಿಗ್ರಾಮ ಲಖಮಾಪೂರ ಗ್ರಾಮಸ್ಥರು ಸ್ಥಳಾಂತರಗೊಳ್ಳಲು ಒಪ್ಪಲಿಲ್ಲ. ಕೊನೆಗೆ ಸಂತ್ರಸ್ತರು ರಾಮದುರ್ಗ ರಸ್ತೆ ಕ್ರಾಸ್ ನಲ್ಲೇ ತಂಗುವುದಾಗಿ ಪಟ್ಟು ಹಿಡಿದರು. ಲಖಮಾಪೂರ ಗ್ರಾಮಸ್ಥರು ತಂಗಿದ್ದ ಸ್ಥಳಕ್ಕೆ ಜಿಲ್ಲಾಧಿ ಕಾರಿ ಎಂ.ಸುಂದರೇಶಬಾಬು ನೇತೃತ್ವದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಕಸರತ್ತು ನಡೆಸಿದರು.
ಬೆಳ್ಳೇರಿ ಫಾರ್ಮ್ಗೆ: ರಾಮದುರ್ಗ ರಸ್ತೆ ಕ್ರಾಸ್‌ನಲ್ಲಿ ವಾಸ್ತವ್ಯ ಕಲ್ಪಿಸುವುದು ಕಷ್ಟದ ಕೆಲಸ. ಮಹಿಳೆಯರು, ವೃದ್ಧರು, ಮಕ್ಕಳಿಗೆ ತೊಂದರೆಯಾಗುತ್ತದೆ.ನಿಮಗೆ ಎಲ್ಲ ಸೌಲಭ್ಯ ಸಿಗುವುದು ಕಷ್ಟಕರ. ಆದ್ದರಿಂದ ಬೆಳ್ಳೇರಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಸ್ಥಳಾಂತರವಾಗಿ ನಿಮಗೂ ಸುರಕ್ಷಿತ ಸ್ಥಳವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಇದಕ್ಕೊಪ್ಪದ ಸಂತ್ರಸ್ತರು, ಅಷ್ಟು ದೂರ ಹೋಗಿ ವಾಸಿಸಲು ನಮ್ಮಿಂದಾಗದು.ಇಲ್ಲಿಯೇ ಇರುತ್ತೇವೆ, ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಿ. ಹೇಗೋ ಇಲ್ಲಿಯೇ ರಕ್ಷಣೆ ಮಾಡಿಕೊಂಡು ಬದುಕುತ್ತೇವೆ ಎಂದು ಬಿಗಿಪಟ್ಟು ಹಿಡಿದರು. ಗ್ರಾಮಸ್ಥರಿಗೆ ತಿಳಿಹೇಳಿದ ಅಧಿಕಾರಿಗಳು ಸಾಧ್ಯವಾದಷ್ಟು ಸುರಕ್ಷಿತ ಸ್ಥಳಕ್ಕೆ ತೆರಳುವ ನಿರ್ಧಾರ ಕೈಗೊಳ್ಳಿ ಎಂದು ಮನವಿ ಮಾಡಿ ನಿರ್ಗಮಿಸಿದರು.
ಎಸ್‌ಪಿ ಎನ್.ಯತೀಶ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಜಿಲ್ಲಾ ಉಪವಿಭಾಗಾಕಾರಿ ರಾಯಪ್ಪ ಹುಣಸಗಿ, ಡಿವೈಎಸ್‌ಪಿ ಶಿವಾನಂದ ಕಟಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ತಹಶೀಲ್ದಾರ್ ಎ.ಎಚ್. ಮಹೇಂದ್ರ, ಸಿಪಿಐ ಡಿ.ಬಿ. ಪಾಟೀಲ ಇತರರಿದ್ದರು.
ಹಿಂದಿನಿಂದಲೂ ಗ್ರಾಮ ಸ್ಥಳಾಂತರಕ್ಕೆ ಮನವಿ ಮಾಡುತ್ತಿದ್ದೇವೆ, ಇದುವರೆಗೂ ಈಡೇರಿಲ್ಲ. ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ ನವಗ್ರಾಮ ನಿರ್ಮಿಸಬೇಡಿ. ನಾವು ಗದಗ ಜಿಲ್ಲೆಯಲ್ಲೆ ಉಳಿಯಲು ನಿರ್ಧರಿಸಿದ್ದೇವೆ. ಗದಗ ಜಿಲ್ಲಾ ವ್ಯಾಪ್ತಿಯಲ್ಲೇ ಗ್ರಾಮ ಸ್ಥಳಾಂತರಿಸಿ.
-ಲಖಮಾಪೂರ ಗ್ರಾಮಸ್ಥರು
ಗ್ರಾಮದ ಸುತ್ತಮುತ್ತ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಜಮೀನು ಇರುವುದರಿಂದ ಈ ಭಾಗದಲ್ಲಿ ನವಗ್ರಾಮ ನಿರ್ಮಾಣಕ್ಕೆ ಸಾಕಷ್ಟು ಅಡೆತಡೆ ಎದುರಾಗುತ್ತದೆ. ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ನೀವೇ ಜಮೀನು ಗುರುತಿಸಿ, ಈ ಬಗ್ಗೆ ಇಡೀ ಗ್ರಾಮಸ್ಥರು ಏಕ ನಿರ್ಧಾರ ಕೈಗೊಂಡು ನಮಗೆ ತಿಳಿಸಿ.
-ಎಂ. ಸುಂದರೇಶಬಾಬು, ಜಿಲ್ಲಾಧಿಕಾರಿ