Advertisement

Heavy Rain: ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ… ಬಡಾವಣೆಗಳಿಗೆ ನುಗ್ಗಿದ ನೀರು

09:36 PM Oct 09, 2024 | Team Udayavani |

ಧಾರವಾಡ: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಆಗುತ್ತಿದ್ದು, ಅದರಲ್ಲೂ ಧಾರವಾಡ ಶಹರ ಹಾಗೂ ಗ್ರಾಮೀಣ ಭಾಗದಲ್ಲಿ ಬುಧವಾರವೂ ಮಳೆಯ ಅಬ್ಬರ ಮುಂದುವರೆದಿದೆ.

Advertisement

ಮಂಗಳವಾರ ಇಡೀ ದಿನ ಮೋಡ ಕವಿದ ವಾತಾವರಣದ ಜತೆಗೆ ಅಲ್ಪ-ಸ್ವಲ್ಪ ಮಳೆಯಾಗಿತ್ತು. ಇದಾದ ಬಳಿಕ ಸಂಜೆಯಿಂದ ರಾತ್ರಿಯಿಡೀ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೂ ವಿರಾಮ ನೀಡಿದ್ದ ಮಳೆರಾಯನ ಅಬ್ಬರ ಮತ್ತೆ ಸಂಜೆ ಹೊತ್ತಿಗೆ ಮುಂದುವರೆಯಿತು.

ಧಾರವಾಡ ಶಹರ ವ್ಯಾಪ್ತಿಯಲ್ಲಿ ಸಂಜೆ 5 ಗಂಟೆಯಿಂದ 7.30 ರ ವರೆಗೆ ರಭಸದಿಂದ ಸುರಿದ ಮಳೆಯಿಂದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

ಗ್ರಾಮಾಂತರ ಪ್ರದೇಶದಲ್ಲಿಯೂ ಮಳೆ ಆರ್ಭಟ ಮುಂದುವರೆದಿದೆ. ತಾಲೂಕಿನ ದೇವರಹುಬ್ಬಳ್ಳಿ, ನಿಗದಿ, ಲಕಮಾಪೂರ, ಯಾದವಾಡ, ಉಪ್ಪಿನಬೆಟಗೇರಿ, ಲೋಕೂರು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಭಾಗಗಳಲ್ಲಿ ಮಳೆಯಾಗಿದೆ. ಮಿಂಚು-ಗುಡುಗು ಸಹಿತ ಭಾರಿ ಪ್ರಮಾಣದಲ್ಲಿ ಮಳೆ ಆಗಿದ್ದು, ತುಪ್ಪರಿ ಹಳ್ಳಕ್ಕೆ ನೀರಿನ ಹರಿವು ಹೆಚ್ಚಿದೆ. ಇನ್ನು ಜಿಲ್ಲೆಯ ವಿವಿಧ ಕಡೆ ತೋಟಗಾರಿಕೆಯ ಟೊಮ್ಯಾಟೋ, ಹಾಗಲಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳಿಗೆ ಮಳೆಯಿಂದ ಹಾನಿ ಆಗಿರುವ ಬಗ್ಗೆ ವರದಿಯಾಗಿದ್ದು, ನಿಖರ ಮಾಹಿತಿ ಲಭ್ಯವಾಗಿಲ್ಲ.

ಜಿಲ್ಲಾಡಳಿತದ ಸೂಚನೆ : ವಾಯುಭಾರ ಕುಸಿತದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸಿಡಿಲು-ಗುಡುಗು ಸಹಿತ ಮಳೆ ಆಗುತ್ತಿದ್ದು, ಮುನ್ನೆಚ್ಚರಿಕೆ ಕೈಗೊಳ್ಳಲು ಜಿಲ್ಲಾಡಳಿತ ಸೂಚಿಸಿದೆ. ಭಾರತೀಯ ಹವಾಮಾನ ಇಲಾಖೆ ವರದಿಯಂತೆ ಜಿಲ್ಲೆಯಲ್ಲಿ ಹಾಗೂ ತುಪ್ಪರಿ ಹಳ್ಳ ಮತ್ತು ಬೆಣ್ಣಿ ಹಳ್ಳದ ಹಳ್ಳ ಅಚ್ಚು ಕಟ್ಟು ಪ್ರದೇಶದಲ್ಲಿ ವಾಯುಭಾರ ಕುಸಿತದಿಂದ ನಿರಂತರ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಭಾರಿ ಮಳೆ/ಪ್ರವಾಹ ಕುರಿತಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರಾದ ಜಿಲ್ಲಾಽಕಾರಿ ದಿವ್ಯ ಪ್ರಭು ಅವರು ಪ್ರಾಽಕಾರದ ಸಭೆಯಲ್ಲಿ ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.

Advertisement

ಜಿಲ್ಲಾ, ತಾಲೂಕು, ಗ್ರಾಮ ಮಟ್ಟದ ಅಽಕಾರಿ, ಸಿಬ್ಬಂದಿಗಳು ಪ್ರವಾಹ ಮತ್ತು ಭಾರಿ ಮಳೆಯಿಂದ ಯಾವುದೇ ಜನ-ಜಾನುವಾರು ಜೀವಹಾನಿಯಾಗದಂತೆ ಮುಂಜಾಗೃತೆ ವಹಿಸಬೇಕು. ಗುಡುಗು-ಸಿಡಿಲಿನಿಂದಾಗುವ ಅನಾಹುತಗಳ ಕುರಿತು ಸಾರ್ವಜನಿಕರಿಗೆ ಹಾಗೂ ರೈತರಿಗೆ ವ್ಯಾಪಕವಾಗಿ ಪ್ರಚಾರ ಮಾಡಬೇಕು. ನದಿ, ಹಳ್ಳದ, ಕೆರೆ ದಡದಲ್ಲಿ ಬಟ್ಟೆ ತೊಳಿಯುವುದು, ಈಜಾಡುವುದು, ದನ-ಕರುಗಳನ್ನು ವಹಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸುವುದು ಮತ್ತು ಇತರೆ ಚಟುವಟಿಕೆ ನಡೆಸದಂತೆ ಕ್ರಮವಹಿಸಲು, ನದಿ, ಹಳ್ಳದ, ಕೆರೆ ದಡಗಳಲ್ಲಿ ಅಪಾಯವಿರುವ ಸೇತುವೆಗಳಲ್ಲಿ ಪೋಟ/ಸೆಲಿಗಳನ್ನು ತೆಗೆಯದಂತೆ ಯುವಕರಿಗೆ – ಸಾರ್ವಜನಿಕರಿಗೆ ತಿಳಿ ಹೇಳಲು ಸೂಚಿಸಿದ್ದು, ಭಾರಿ ಮಳೆ-ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರುವುದು/ ಮೈಕ್ ಮೂಲಕ ಜಾಗೃತಿ ಮೂಡಿಸುವಂತೆ ಸೂಚಿಸಿದ್ದಾರೆ.

ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿಯುವ ಸಂದರ್ಭವಿರುತ್ತದೆ. ಇದರಿಂದ ಸಾವು-ನೋವುಗಳು ಸಂಭವಿಸುವ ಸಂದರ್ಭವಿರುವುದಿಂದ ಸಾರ್ವಜನಿಕರಿಗೆ ಸುರಕ್ಷತೆಯ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲು ತೆಗೆದುಕೊಳ್ಳಲು ಸೂಚಿಸಿರುವ ಡಿಸಿ,ಅವಶ್ಯಕತೆ ಇರುವ ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳುವುದು. ಪ್ರತಿ ಗ್ರಾಮ ಪಂಚಾಯತ್ ವಿಪತ್ತು ನಿರ್ವಹಣಾ ಸಮಿತಿಗಳು ಪ್ರತಿ ಗ್ರಾಮಗಳಲ್ಲಿ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಕಳೆದ 24 ಗಂಟೆಯೊಳಗೆ ಬುಧವಾರ ಬೆಳಿಗ್ಗೆ 8.30 ಗಂಟೆಯವರೆಗೆ ಬರೋಬ್ಬರಿ 26.8 ಮಿ.ಮೀಯಷ್ಟು ಮಳೆಯಾಗಿದೆ. ಈ ಅವಧಿಯೊಳಗೆ 4.4 ಮಿ.ಮೀಯಷ್ಟು ವಾಡಿಕೆ ಮಳೆಯ ಪೈಕಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಧಾರವಾಡ ಭಾಗದಲ್ಲಿ 28.0 ಮಿ.ಮೀ, ಹುಬ್ಬಳ್ಳಿಯಲ್ಲಿ 23.7 ಮಿ.ಮೀ., ಕಲಘಟಗಿ ಭಾಗದಲ್ಲಿ ಅತಿ ಹೆಚ್ಚು 55.1 ಮಿ.ಮೀ., ಕುಂದಗೋಳದಲ್ಲಿ 31.5 ಮಿ.ಮೀ, ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿ 32.9 ಮಿ.ಮೀ, ಅಳ್ನಾವರ ಭಾಗದಲ್ಲಿ 31.4 ಮಿ.ಮೀ ಮಳೆಯಾಗಿದ್ದರೆ ನವಲಗುಂದದಲ್ಲಿ 6.8 ಮಿ.ಮೀ, ಅಣ್ಣಿಗೇರಿಯಲ್ಲಿ 4.9 ಮಿ.ಮೀಯಷ್ಟು ಮಳೆಯಾಗಿದೆ. ಇನ್ನು ಅ.1 ರಿಂದ ಅ.9 ರವರೆಗೆ 45.3 ಮಿ.ಮೀ ವಾಡಿಕೆ ಮಳೆಯ ಪೈಕಿ 45.7 ರಷ್ಟು ಮಳೆ ಸುರಿದಿದ್ದು, ಬುಧವಾರವೂ ಮಳೆಯ ಅಬ್ಬರ ಮುಂದುವರೆಯುವ ಮೂಲಕ ಮಳೆಯ ಪ್ರಮಾಣ ಹೆಚ್ಚಿಸಿದೆ.

ಇದನ್ನೂ ಓದಿ: BJP vs AAP: ಸಿಎಂ ಅಧಿಕೃತ ನಿವಾಸ ಅಕ್ರಮ ಬಳಕೆ ಆರೋಪ; ಮನೆ ಖಾಲಿ ಮಾಡಿದ ಅತಿಶಿ?

Advertisement

Udayavani is now on Telegram. Click here to join our channel and stay updated with the latest news.

Next