Advertisement
ಪಾಣೆಮಂಗಳೂರಲ್ಲಿ ಆಲಡ್ಕಪಡ್ಪು ಪ್ರದೇಶದಲ್ಲಿ ಸುಮಾರು 16 ಮನೆಗಳು ನೆರೆ ನೀರಿನಿಂದ ಆವೃತವಾಗಿದ್ದು, ಜನರ ತೆರವು ಮಾಡುವ ಕಾರ್ಯಾಚರಣೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ನಡೆಯಿತು. ಬಂಟ್ವಾಳ ಬಸ್ತಿಪಡ್ಪು ತಗ್ಗು ಪ್ರದೇಶದಲ್ಲಿ ನೆರೆ ನೀರು ರಸ್ತೆಗೆ ಹರಿದು ಬಂದುದರಿಂದ ಬಂಟ್ವಾಳ-ಬಿ.ಸಿ. ರೋಡ್ ಸಂಚಾರ ನಿಲುಗಡೆ ಮಾಡಿ ಜನ ಮತ್ತು ವಾಹನ ಸಂಚಾರಕ್ಕೆ ಪೊಲೀಸರು ತಡೆಯೊಡ್ಡಿದರು. ಅಪರಾಹ್ನ 3ಗಂಟೆ ಸುಮಾರಿಗೆ ನೆರೆ ನೀರು 8.7 ಮೀಟರ್‌ಗೆ ಬರುತ್ತಿದ್ದಂತೆ ಅಪಾಯದ ಮುನ್ಸೂಚನೆ ನೀಡಲಾಗಿದೆ. ಇಲ್ಲಿ ಅಪಾಯಮಟ್ಟ 9 ಮೀಟರ್ ಆಗಿದೆ.
ನೀರು ರಭಸವಾಗಿ ಹರಿಯುತ್ತಿದ್ದು ನದಿ ಸನಿಹದ ಮನೆಮಂದಿ ಯಾರೂ ಕೂಡ ನೀರಿಗೆ ಇಳಿಯದಂತೆ ತಾಲೂಕು ದಂಡಾಧಿಕಾರಿಗಳು ಆದೇಶಿಸಿದ್ದಾರೆ. ಅಗ್ನಿಶಾಮಕ ಸಿಬಂದಿಯನ್ನು ನೆರೆ ಭೀತಿಯ ಪ್ರದೇಶದಲ್ಲಿ ನಿಯೋಜಿಸಿದ್ದು, ಹೆಚ್ಚುವರಿ ಪೊಲೀಸ್, ಗೃಹರಕ್ಷಕ ಸಿಬಂದಿಯನ್ನು, ಬೋಟ್ ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದ್ದಾಗಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ತಿಳಿಸಿದ್ದಾರೆ. ಬಿಳಿಯೂರು, ಪೆರ್ನೆ, ಕಡೇಶ್ವಾಲ್ಯ, ಬರಿಮಾರು, ಶಂಭೂರು, ನರಿಕೊಂಬು, ಪಾಣೆಮಂಗಳೂರು, ಬಂಟ್ವಾಳ, ನಾವೂರು, ಸರಪಾಡಿ, ಮಣಿನಾಲ್ಕೂರು, ಅಜಿಲಮೊಗರು, ತೆಕ್ಕಾರು, ನಡುಮೊಗರು, ಸಜೀಪಮುನ್ನೂರು, ಗೂಡಿನಬಳಿ ಪ್ರದೇಶಗಳ ನದಿ ದಂಡೆಯ ಪ್ರದೇಶದ ಜನರು ಮುನ್ನೆಚ್ಚರಿಕೆಯಲ್ಲಿ ಇರುವಂತೆ ಸೂಚಿಸಿದ್ದು, ಜನ-ಜಾನುವಾರುಗಳು ನದಿ ನೀರಿಗೆ ಇಳಿಯದಂತೆ ಸ್ಥಳೀಯ ಆಡಳಿತವು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಪ್ರಕಟಿಸಿದ್ದಾರೆ.
Related Articles
ಡ್ಯಾಂ ಸೈರನ್
ಶಂಭೂರು ಎಎಂಆರ್ ಡ್ಯಾಂನಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಾಯ ಸೂಚಕ ಸೈರನ್ ಮೊಳಗಿಸುವ ಮೂಲಕ ನೀರು ಹೊರಕ್ಕೆ ಹರಿಯ ಬಿಡುತ್ತಿರುವ ತುರ್ತು ಸಂದೇಶ ನೀಡಲಾಗಿದೆ. ಡ್ಯಾಂನ ಎಲ್ಲ ಬಾಗಿಲುಗಳನ್ನು ತೆರೆದು ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement
ಮುಂಜಾಗ್ರತ ಕ್ರಮ
ಜನರ ಪ್ರಾಣರಕ್ಷಣೆ, ಸೊತ್ತು ನಷ್ಟ ಆಗದಂತೆ ಎಲ್ಲ ಮುಂಜಾಗ್ರತ ಕ್ರಮ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪರಿಸ್ಥಿತಿಗೆ ತಕ್ಕಂತೆ ಹಿರಿಯ ಅಧಿಕಾರಿಗಳು ತಾಲೂಕು ಕೇಂದ್ರದಲ್ಲಿ ಇರುವುದು. ತುರ್ತು ಸಂದರ್ಭದಲ್ಲಿ ಪೊಲೀಸ್, ಗೃಹರಕ್ಷಕ, ಅಗ್ನಿಶಾಮಕ ದಳ ಸಹಿತ, ಮುಳುಗು ತಜ್ಞರ ಸಂಪರ್ಕದಲ್ಲಿದ್ದು, ಸಕಾಲಿಕವಾಗಿ ಬಳಸುವಂತೆ ತಾಲೂಕು ದಂಡಾಧಿಕಾರಿಗೆ ಸೂಚಿಸಲಾಗಿದೆ.
– ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಶಾಸಕರು, ಬಂಟ್ವಾಳ