Advertisement

ಆಶ್ಲೇಷ ಅಬ್ಬರಕ್ಕೆ ವಾಣಿಜ್ಯ ನಗರ ತತ್ತರ

09:35 AM Aug 07, 2019 | Suhan S |
 ಹುಬ್ಬಳ್ಳಿ: ಆಶ್ಲೇಷ ಮಳೆಯಬ್ಬರಕ್ಕೆ ವಾಣಿಜ್ಯ ನಗರ ತತ್ತರಿಸುವಂತಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನಗರದ ಬಹುತೇಕ ಕೆರೆಗಳು ಹಲವು ವರ್ಷಗಳ ನಂತರ ಭರ್ತಿಯಾಗಿ ಕೋಡಿ ಹರಿದಿವೆ. ನಾಲೆಗಳಿಗೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ಹಲವು ಮನೆಗಳು ಕುಸಿತವಾಗಿವೆ. ರೈಲ್ವೆ ಆಸ್ಪತೆ ಸೇರಿದಂತೆ ಹಲವು ಕಡೆ ನೀರು ನುಗ್ಗಿದೆ. ಮಳೆ ಹೀಗೆ ಮುಂದುವರಿದರೆ ಇನ್ನಷ್ಟು ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳಿಂದ ಮಳೆ ಬಿರುಸು ಪಡೆದಿದೆ. ಮಳೆ ಕೊರತೆಯಿಂದ ಇತ್ತೀಚೆಗಿನ ವರ್ಷಗಳಲ್ಲಿ ನಗರದ ಉಣಕಲ್ಲ ಕೆರೆ, ತೋಳನಕೆರೆ, ಚನ್ನಪ್ಪನ ಕೆರೆ, ರಾಯನಾಳ ಇನ್ನಿತರ ಕೆರೆಗಳು ಭರ್ತಿಯಾಗಿವೆ. ಹಲವು ವರ್ಷಗಳ ನಂತರ ಕೆರೆಗಳ ಕೋಡಿ ಹರಿದಿದ್ದನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ.
ನಗರದ ಕೆರೆಗಳು ಭರ್ತಿ: ನಗರದಲ್ಲಿರುವ ಬಹುತೇಕ ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಉಣಕಲ್ಲ ಕೆರೆ ಮಂಗಳವಾರ ಮಧ್ಯಾಹ್ನ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದ್ದು, ಹೆಚ್ಚಿನ ನೀರು ನಾಲಾ ಮೂಲಕ ಹೊರಗಡೆ ಹರಿದು ಹೋಗುತ್ತಿದೆ. ಈ ಮನಮೋಹಕ ದೃಶ್ಯ ನೋಡಲು ಉಣಕಲ್ಲ ಗ್ರಾಮದ ಜನರು ತಂಡೋಪತಂಡವಾಗಿ ಬರುತ್ತಿರುವುದು ಕಂಡು ಬಂದಿದೆ. ತೋಳನಕೆರೆಯೂ ತುಂಬಿದ್ದರಿಂದ ಗೇಟ್ ತೆಗೆದು ನೀರು ಹೊರಬಿಡಲಾಗಿದೆ. ಶ್ರೀನಗರದಲ್ಲಿರುವ ಚನ್ನಪ್ಪನ ಕೆರೆ, ಸಂತೋಷನಗರ ಕೆರೆ ಸೇರಿದಂತೆ ಎಲ್ಲ ಕೆರೆಗಳು ಬಹುತೇಕ ತುಂಬಿವೆ.

ರೈಲ್ವೆ ಆಸ್ಪತ್ರೆಯಲ್ಲಿ ನೀರು: ಇಲ್ಲಿನ ಗದಗ ರಸ್ತೆಯಲ್ಲಿರುವ ರೈಲ್ವೆ ಆಸ್ಪತ್ರೆ ಮೇಲ್ಚಾವಣೆಯಿಂದ ನೀರು ಜಿನಗುತ್ತಿದ್ದು, ಇದರಿಂದ ಇಡೀ ಆಸ್ಪತ್ರೆಯಲ್ಲಿ ಎಲ್ಲಿ ನೋಡಿದರೂ ನೀರೇ ಎನ್ನುವಂತಾಗಿತ್ತು. ನಾಲಾ ಜಾಗದಲ್ಲಿ ಮನೆಗಳ ನಿರ್ಮಾಣ: ಇಲ್ಲಿನ ಮಂಟೂರ ರಸ್ತೆಯ ಸ್ವರಾಜ್‌ ನಗರ, ಭಾರತಿ ನಗರದಲ್ಲಿರುವ ನಾಲಾ ಜಾಗದಲ್ಲಿ ಮನೆಗಳನ್ನು ನಿರ್ಮಿಸಿದ್ದು ಇದರಿಂದ ಎಫ್‌ಸಿಐ ಗೋದಾಮು ಭಾಗದಿಂದ ಹರಿದು ಬರುತ್ತಿದೆ. ಅಪಾರ ಪ್ರಮಾಣದ ನೀರು ಹೋಗಲು ಜಾಗವಿಲ್ಲದೆ ಸಿಕ್ಕ ಸಿಕ್ಕಲ್ಲಿ ನೀರು ಹರಿಯುತ್ತಿದೆ. ಇದಲ್ಲದೇ ಸ್ವರಾಜ್‌ ನಗರದಲ್ಲಿರುವ ಶಾಲೆಯ ಕೆಳಭಾಗ ನಿರ್ಮಿಸಲಾಗಿರುವ ಗಟಾರುಗಳ ಮೂಲಕ ನೀರು ಹೊರಭಾಗಕ್ಕೆ ಹರಿಯುತ್ತಿದೆ. ಕುಸಿಯುತ್ತಿರುವ ಬಾವಿ: ಇಲ್ಲಿನ ಗೋಕುಲ ರಸ್ತೆಯ ಸೆಂಟ್ರಲ್ ಎಕ್ಸೈಜ್‌ ಕಾಲೋನಿಯಲ್ಲಿ ಉದ್ಯಾನವನದಲ್ಲಿರುವ ಗಣೇಶ ದೇವಸ್ಥಾನ ಹಿಂಭಾಗದಲ್ಲಿರುವ ಹಳೆಯ ಬಾವಿಯೊಂದು ಕುಸಿಯುತ್ತಿದೆ. ಈಗಾಗಲೇ ಬಾವಿಯ ಸುತ್ತಲೂ ಬೆಳೆದಿರುವ ಗಿಡ ಗಂಟೆಗಳು ಬಾವಿಯಲ್ಲಿ ಬಿದ್ದಿದ್ದು, ಅದರ ಸುತ್ತಲಿನ ಭಾಗ ಹಂತ ಹಂತವಾಗಿ ಕುಸಿಯುತ್ತಿದ್ದು ಜನರು ಆತಂಕಗೊಂಡಿದ್ದಾರೆ.
ನೆಲಕ್ಕುರುಳಿದ ಮನೆಗಳು: ನಗರದಲ್ಲಿನ ಹಲವು ಮನೆಗಳು ನೆಲ ಕಚ್ಚಿವೆ. ಮಂಗಳವಾರ ಮಧ್ಯಾಹ್ನದವರೆಗೆ ಸುಮಾರು 32ಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿದ್ದ ಬಗ್ಗೆ ವರದಿಯಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಮರಗೋಳದಲ್ಲಿ 3, ಕೇಶ್ವಾಪುರ 3, ತಾರಿಹಾಳ 1, ಗೋಕುಲ ಗ್ರಾಮ 5, ಉಣಕಲ್ಲ 8, ಬೆಂಗೇರಿ 2, ಗೋಪನಕೊಪ್ಪ 3, ಬಮ್ಮಾಪುರ ಓಣಿಯಲ್ಲಿ 4, ಹಳೇಹುಬ್ಬಳ್ಳಿಯಲ್ಲಿ 3 ಮನೆಗಳು, ಮಂಟೂರ ರಸ್ತೆ ಕಸ್ತೂರಿಬಾ ನಗರದಲ್ಲಿ 1 ಮನೆ ಭಾಗಶಃ ಬಿದ್ದಿರುವ ಕುರಿತು ವರದಿಯಾಗಿದೆ. ಸಿಬಿಟಿಯಲ್ಲಿ 1, ಬಮ್ಮಾಪುರ ಚಿಂದಿ ಓಣಿಯಲ್ಲಿ 1 ಮನೆ ಬಿದ್ದಿದ್ದು, 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ವಿದ್ಯಾನಗರ ಹೊಸ ನ್ಯಾಯಾಲಯ ಪಕ್ಕದಲ್ಲಿರುವ ಕಲ್ಕಿ ಅರ್ಪಾಟ್ಮೆಂಟ್‌ಗೆ ನೀರು ನುಗ್ಗಿದೆ. ನಗರದಲ್ಲಿ ಸುಮಾರು 8ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿರುವ ಕುರಿತು ವರದಿಯಾಗಿವೆ.
ನೀರು ಹರಿಯಲು ಗಟಾರಗಳೇ ಇಲ್ಲ: ನಗರದ ಬಹುತೇಕ ಮುಖ್ಯ ರಸ್ತೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಗಟಾರುಗಳೇ ಇಲ್ಲವಾಗಿವೆ. ಆನಂದ ನಗರ ಮುಖ್ಯರಸ್ತೆಗಳಲ್ಲಿ ಗಟಾರುಗಳು ಕೆಲ ಭಾಗದಲ್ಲಿ ಇಲ್ಲದೇ ಇರುವುದರಿಂದ ನೀರು ಸಿಸಿ ರಸ್ತೆ ಮೇಲೆ ಹರಿದು ಹೋಗುತ್ತಿರುವುದು ಕಂಡು ಬಂತು. ಕರ್ಕಿ ಬಸವೇಶ್ವರ ನಗರದಿಂದ ಬಿಡ್ನಾಳಕ್ಕೆ ಹೋಗುವ ಮಾರ್ಗದಲ್ಲಿ ಗಟಾರುಗಳಿಲ್ಲದೇ ನೀರು ರಸ್ತೆ ಮೇಲೆ ಹರಿಯುತ್ತಿದೆ.

ತುಂಬಿ ಹರಿದ ನಾಲಾಗಳು-ಚರಂಡಿಗಳು:

ನಗರದಲ್ಲಿ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಗೆ ಎಲ್ಲ ನಾಲಾಗಳು, ಒಳಚರಂಡಿಗಳು ತುಂಬಿ ಹರಿಯುತ್ತಿವೆ. ರಸ್ತೆಯ ಮಧ್ಯದಲ್ಲಿರುವ ಒಳಚರಂಡಿಗಳು ನೀರಿನ ಒತ್ತಡಕ್ಕೆ ಹೊರ ಬರುತ್ತಿರುವುದು ಕಂಡು ಬರುತ್ತಿದೆ. ನಗರದ ದಾಜೀಬಾನ ಪೇಟೆ, ಜನತಾ ಬಜಾರ, ಮಂಟೂರ ರಸ್ತೆ, ಹಳೇ ಹುಬ್ಬಳ್ಳಿ, ಆನಂದ ನಗರ ರಸ್ತೆ, ಸಿದ್ದಾರೂಢಮಠದ ಹತ್ತಿರ, ಬಮ್ಮಾಪುರ ಓಣಿ, ಗೋಪನಕೊಪ್ಪ ಭಾಗಗಳಲ್ಲಿ ಒಳಚರಂಡಿಗಳು ತುಂಬಿ ಹರಿದಿವೆ.
Advertisement

ರಸ್ತೆಗಳ ಸ್ಥಿತಿ ಅಧೋಗತಿ:

ನಗರದಲ್ಲಿ ಸುರಿಯುತ್ತಿರುವ ಮಳೆಗೆ ಬಹುತೇಕ ರಸ್ತೆಗಳು ಹಾಳಾಗಿ ಹೋಗಿದ್ದು, ದೊಡ್ಡ ಗುಂಡಿಗಳು ರಸ್ತೆಯ ಮಧ್ಯದಲ್ಲೇ ಬಿದ್ದಿದ್ದು, ಅಪಘಾತಕ್ಕೆ ಅಹ್ವಾನ ನೀಡುವಂತಿವೆ. ನೀಲಿಜಿನ್‌ ರಸ್ತೆಯಿಂದ ಕಿತ್ತೂರ ಚನ್ನಮ್ಮ ವೃತ್ತದ ಕಡೆ ಬರುವ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಸ್ಟೇಶನ್‌ ರಸ್ತೆ, ಲ್ಯಾಮಿಂಗ್ಟನ್‌ ರಸ್ತೆ, ಕೋರ್ಟ್‌ ವೃತ್ತ, ಆನಂದನಗರ ಮುಖ್ಯ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇದೇ ರೀತಿ ಮಳೆ ಮುಂದುವರಿದರೆ ಮುಂದೇನು ಎನ್ನುವ ಚಿಂತೆಯಲ್ಲಿ ನಗರದ ಜನತೆ ಇದ್ದಾರೆ.
ಗ್ರಾಮೀಣ ಭಾಗದಲ್ಲಿ ನೆಲಕ್ಕುರುಳಿದ ಮನೆಗಳು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹುಬ್ಬಳ್ಳಿ ಗ್ರಾಮೀಣ ವಿಭಾಗದಲ್ಲಿ ಸುಮಾರು 62ಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿದ್ದಿವೆ. ನೂಲ್ವಿ 8, ವರೂರ 8, ಅರಳಿಕಟ್ಟಿ 17, ಬೆಳಗಲಿ 5, ಬ್ಯಾಹಟ್ಟಿ 5, ಶಿರಗುಪ್ಪಿ 6 ಮನೆಗಳು ನೆಲಕ್ಕುರುಳಿದ್ದು ಸುಮಾರು 114 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಶಿರಗುಪ್ಪಿ ಬಳಿ ಹರಿಯುವ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದ್ದು ಸದ್ಯ ಯಾವುದೇ ಹಾನಿ ಸಂಭವಿಸಿಲ್ಲ. ಮಳೆ ಇದೇ ರೀತಿ ಮುಂದುವರಿದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ದಂಡೆಯ ಗ್ರಾಮಗಳಿಗೆ ತೊಂದರೆಯಾಗಲಿದೆ. ಇದಕ್ಕಾಗಿ ಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗ್ರಾಮೀಣ ತಹಶೀಲ್ದಾರ್‌ ಸಂಗಪ್ಪ ಬಾಡಗಿ ತಿಳಿಸಿದ್ದಾರೆ.
32ಕ್ಕೂ ಹೆಚ್ಚು ಮನೆ ಗೋಡೆಗಳು ನೆಲಕ್ಕೆ..
ಹುಬ್ಬಳ್ಳಿ ತಾಲೂಕು ಶಹರ ವ್ಯಾಪ್ತಿಯಲ್ಲಿ ಸುಮಾರು 32ಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿದ್ದಿರುವ ಕುರಿತು ವರದಿಯಾಗಿವೆ. ಇದಲ್ಲದೇ ಉಣಕಲ್ಲ ಕೆರೆ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ನೀರು ಹೊರ ಹರಿಯುತ್ತಿದೆ. ಇದಕ್ಕಾಗಿ ತಾಲೂಕು ಆಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಶಹರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ.
•ಬಸವರಾಜ ಹೂಗಾರ
Advertisement

Udayavani is now on Telegram. Click here to join our channel and stay updated with the latest news.

Next