Advertisement
ಸುಳ್ಯ, ಕಡಬ ಭಾಗದಲ್ಲಿ ಅಪರಾಹ್ನ 3ರ ಬಳಿಕ ಮಳೆ ಆರಂಭವಾಗಿದ್ದು, ಸುಮಾರು ಒಂದು ತಾಸು ಸುರಿದಿದೆ. ಭಾರೀ ಗಾಳಿಯೂ ಇತ್ತು. ಹರಿಹರ ಪಲ್ಲತ್ತಡ್ಕ, ಸುಬ್ರಹ್ಮಣ್ಯ, ಕೋಟೆ ಮುಂಡುಗಾರು, ಎಣ್ಮೂರು, ಕಲ್ಮಡ್ಕ, ಬೆಳ್ಳಾರೆ, ಕಾವಿನಮೂಲೆ, ಪಂಜ, ಪೆಲತ್ತಡ್ಕ, ಪಂಜಿಕಲ್ಲು ಸಹಿತ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.ಮಂಗಳವಾರ ರಾತ್ರಿಯೂ ಗುಡುಗು ಸಹಿತ ಮಳೆಯಾಗಿತ್ತು. ಬುಧವಾರ ಮದ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇದ್ದು, ಬಳಿಕ ಮಳೆಯಾಗಿದೆ. ಕೆಲವು ದಿನಗಳಿಂದ ಭಾರೀ ಸೆಕೆ ಇತ್ತು. ಈಗ ಉತ್ತಮ ಮಳೆಯಾಗಿ ಭೂಮಿ ತಂಪಾಗಿದ್ದು, ಕೃಷಿಗೆ ಲಾಭವಾಗಿದೆ.
ಪುತ್ತೂರು: ತಾಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ಗಾಳಿ, ಸಿಡಿಲಿನ ಅಬ್ಬರ ಬಿರುಸಾಗಿತ್ತು. ಬುಧವಾರ ಅಪರಾಹ್ನ 3ರಿಂದ ಮಳೆ ಆರಂಭ ವಾಗಿತ್ತು. ಸಂಪ್ಯ ಸಮೀಪ ಶರೀಫ್ ಅವರ ಮನೆ ಎದುರಿನ ತೆಂಗಿನಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದ್ದು, ಸಾಕಷ್ಟು ಹೊತ್ತು ಉರಿಯುತ್ತಲೇ ಇತ್ತು. ಸಿಡಿಲಿನಿಂದ ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ ಆಗಿದೆ.
Related Articles
Advertisement
ಕೊಡಗಿನ ವಿವಿಧೆಡೆ ಮಳೆ ಅನಾಹುತಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಕೆಲವು ದಿನಗಳಿಂದ ಅಕಾಲಿಕ ಗಾಳಿ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಮಂಗಳವಾರ ರಾತ್ರಿ ಕುಶಾಲನಗರ ಬಳಿಯ ಹಾರಂಗಿ ವ್ಯಾಪ್ತಿಯಲ್ಲಿ ಭಾರೀ ಗಾತ್ರದ ಆಲಿಕಲ್ಲು ಮಳೆ ಸುರಿದಿದ್ದು, ಕೆಲವು ಮನೆಗಳು ಜಖಂಗೊಂಡಿವೆ. ಹಾರಂಗಿ ಆಸುಪಾಸಿನಲ್ಲಿ ರಾತ್ರಿ ಏಕಾಏಕಿ ಭಾರೀ ಗಾಳಿಯೊಂದಿಗೆ ಮಳೆ ಸುರಿದಿರುವುದಲ್ಲದೆ, ಸುಮಾರು 6 ಕೆ.ಜಿ.ಯಷ್ಟು ತೂಕದ ಬೃಹದ್ಗಾತ್ರದ ಆಲಿಕಲ್ಲುಗಳು ಬಿದ್ದಿವೆ. ಬಡ ಕುಟುಂಬಗಳ ಹಲವು ಮನೆಗಳು ಜಖಂಗೊಂಡಿವೆ. ಕೂಡು ಮಂಗಳೂರು ಗ್ರಾ.ಪಂ ಉಪಾಧ್ಯಕ್ಷ ಭಾಸ್ಕರ್ ನಾಯ್ಕ ಅವರು ಸ್ಥಳ ಪರಿಶೀಲನೆ ನಡೆಸಿದರು. ವಿದ್ಯುತ್ ವ್ಯತ್ಯಯ
ದಕ್ಷಿಣ ಕೊಡಗಿನ ವಿರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟ ಭಾಗದಲ್ಲಿ ಗಾಳಿ ಮಳೆಯಾದ ಕಾರಣ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಎರಡು ದಿನಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಗ್ರಾಮಗಳು ಕಾರ್ಗತ್ತಲಿನಲ್ಲಿವೆ. ಮಡಿಕೇರಿ ತಾಲ್ಲೂಕಿನ ವಿವಿಧೆಡೆ ಬುಧವಾರ ಸಂಜೆಯೂ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ನಗರದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ತುಂಬಾ ಮಳೆ ನೀರು ಹರಿದು ವಾಹನಗಳು ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪಣಪಿಲದಲ್ಲಿ ರೊಟ್ಟಿ ಕಾರ್ಖಾನೆ ಮೇಲೆ ಉರುಳಿದ ತೆಂಗಿನ ಮರ
ಮೂಡುಬಿದಿರೆ: ಬುಧವಾರ ಮೂಡು ಬಿದಿರೆಯಾದ್ಯಂತ ಗುಡುಗು, ಮಿಂಚು, ಗಾಳಿ ಸಹಿತ ಭಾರೀ ಮಳೆ ಸುರಿದಿದೆ. ದರೆಗುಡ್ಡೆ ಪಂ. ವ್ಯಾಪ್ತಿಯ ಪಣಪಿಲದ ಉಮಿಲುಕ್ಕು ಎಂಬಲ್ಲಿ ಗಾಳಿ ಜೋರಾಗಿ ಬೀಸಿದ್ದು, ಸದಾನಂದ ಪೂಜಾರಿ ಅವರ ಮನೆಗೆ ಹೊಂದಿಕೊಂಡಂತಿರುವ ಅವರ ರೊಟ್ಟಿ ಕಾರ್ಖಾನೆಯ ಮೇಲೆ ಬೃಹತ್ ತೆಂಗಿನ ಮರ ಬಿದ್ದು ಭಾರೀ ಹಾನಿ ಉಂಟಾಗಿದೆ. ಕಾರ್ಖಾನೆಯಲ್ಲಿ ಮಾಲಕ ಸದಾನಂದ ಪೂಜಾರಿ ಮತ್ತು ಅವರ ಪತ್ನಿ ಕೆಲಸ ಮಾಡುತ್ತಿದ್ದು, ಇವರಿಬ್ಬರಿಗೂ ಗಾಯಗಳಾಗಿವೆ. ಹತ್ತಿರವೇ ಇರುವ ಅವರು ವಾಸ್ತವ್ಯವಿರುವ ಮನೆಗೂ ಹಾನಿಯಾಗಿದೆ.
ಸ್ಥಳಕ್ಕೆ ದರೆಗುಡ್ಡೆ ಗ್ರಾಮ ಪಂ. ಅಧ್ಯಕ್ಷೆ ತುಳಸಿ ಮೂಲ್ಯ, ಗ್ರಾಮಲೆಕ್ಕಿಗರಾದ ಉಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಡುಪಿ: ಮುಂಜಾನೆ, ರಾತ್ರಿ ಲಘು ಮಳೆ
ಉಡುಪಿ: ನಗರದಲ್ಲಿ ಬುಧವಾರ ಮುಂಜಾನೆ ತುಂತುರು ಮಳೆ ಸುರಿದಿದೆ. ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಗಾಳಿ ಸಹಿತ ಸ್ವಲ್ಪ ಕಾಲ ಮಳೆಯಾಗಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಬುಧವಾರ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ಬುಧವಾರ ರಾತ್ರಿಯ ಹೊತ್ತು ಮಣಿಪಾಲ, ಉಡುಪಿ ಆಸುಪಾಸಿನಲ್ಲಿ ಲಘು ಮಳೆಯಾಗಿದೆ. ಕುಂದಾಪುರ ತಾಲೂಕಿನ ಕೋಟೇಶ್ವರ, ಬೀಜಾಡಿ, ಗೋಪಾಡಿ ಪರಿಸರದಲ್ಲಿಯೂ ಮಳೆಯಾಗಿದೆ. ಎರಡು ದಿನ ಮಳೆ ಸಾಧ್ಯತೆ
ಮಂಗಳೂರು: ಪೂರ್ವ ಮುಂಗಾರು ಮಳೆ ಚುರುಕುಗೊಂಡಿದ್ದು, ಕರಾವಳಿ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ಎ. 5-6ರಂದು ಕರಾವಳಿಯ ವಿವಿಧೆಡೆ ಸಿಡಿಲು, ಗಾಳಿ ಸಹಿತ ಮಳೆಯಾಗಲಿದೆ. ಮಂಗಳೂರು ನಗರದಲ್ಲಿ ಮಂಗಳವಾರ ತಡ ರಾತ್ರಿ ಉತ್ತಮ ಮಳೆಯಾಗಿದೆ. ಬುಧವಾರ 33.3 ಡಿ.ಸೆ. ಗರಿಷ್ಠ ಮತ್ತು 23.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ಬಂಟ್ವಾಳ: ಸಿಡಿಲಿನಿಂದ ಹಾನಿ
ಬುಧವಾರ ಸಂಜೆ ಮಳೆ ಸುರಿದ ವೇಳೆ ಬಂಟ್ವಾಳ ಕಸಬಾ ಗ್ರಾಮದ ಆದಂ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಪರಿಕರಗಳಿಗೆ ಹಾನಿಯಾಗಿದೆ.