Advertisement
ರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದರೂ ಮಧ್ಯರಾತ್ರಿಯಿಂದ ಒಂದೇ ಸವನೆ ಜೋರಾಗಿ ಬರಲಾರಂಭಿಸಿದ್ದರಿಂದ ಅನೇಕ ಕಡೆಗಳಲ್ಲಿ ಮನೆಯೊಳಕ್ಕೆ ನೀರು ನುಗ್ಗಿ ಮನೆಯವರೆಲ್ಲರೂ ಆತಂಕದಿಂದ ಜಾಗರಣೆ ಮಾಡುವಂತಾಯಿತು. ನಗರದ ಚೌಥನಿಯಲ್ಲಿ ಹೊಳೆಯು ಉಕ್ಕಿ ಹರಿಯಲಾರಂಭಿಸಿದ್ದು ಸೇತುವೆ ಮುಳುಗಡೆಯಾಯಿತು. ಕುದ್ರೆಬೀರಪ್ಪ ದೇವಸ್ಥಾನ ಅರ್ಧದಷ್ಟು ಮುಳುಗಿದ್ದು ಮುಂಡಳ್ಳಿ ಸಂಪರ್ಕವೇ ಕಡಿತಗೊಂಡಿತು. ಅನೇಕ ಮನೆಗಳಿಗೆ ನೀರು ನುಗ್ಗಿದ್ದು ಹೊಳೆದಂಡೆಯಲ್ಲಿರುವ ಅಪಾಯದ ಅಂಚಿನ ಮನೆಗಳಲ್ಲಿ ಜನರನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರ ಮಾಡಲಾಯಿತು.
ನಗರದಲ್ಲಿ ಸಮಪರ್ಕವಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಹಾಗೂ ಹಲವೆಡೆ ಚರಂಡಿ ಸ್ವಚ್ಚತೆ ಮಾಡದೇ ಇರುವುದರಿಂದ ಅನೇಕ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
Related Articles
Advertisement
ಭಾರೀ ಮಳೆಯಿಂದಾಗಿ ಬೈಲೂರಿನಲ್ಲಿನ ರಸ್ತೆಯೊಂದು ಕೊಚ್ಚಿ ಹೋಗಿದ್ದು, ಹತ್ತಿರದಲ್ಲಿಯೇ ಇನ್ನೊಂದು ಸಂಪರ್ಕ ರಸ್ತೆ ಇರುವುದರಿಂದ ಜನರಿಗೆ ತೊಂದರೆಯಾಗಿಲ್ಲ. ಬೈಲೂರು, ಮಾವಳ್ಳಿ, ಕಾಯ್ಕಿಣಿ, ಬೇಂಗ್ರೆ, ಶಿರಾಲಿ, ಹಾಡುವಳ್ಳಿ, ಕೋಣಾರ, ಮಾರುಕೇರಿ, ಬೆಳಕೆ, ಗೊರ್ಟೆ ಇತ್ಯಾದಿ ಭಾಗಗಳಲ್ಲಿ ಮಳೆಯಿಂದಾಗಿ ನೂರಾರು ಎಕರೆ ಕೃಷಿ ಭೂಮಿ, ತೋಟಗಳು, ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಸಾರದ ಹೊಳೆ ಭಾಗದಲ್ಲಿ ಕೂಡಾ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ.
ಗುರುವಾರ ರಾತ್ರಿ ಬಿದ್ದ ಭಾರೀ ಮಳೆಗೆ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಚೌಥನಿಯಲ್ಲಿ ರಾತ್ರಿ 3 ಗಂಟೆಯ ಸುಮಾರಿಗೆ ನೀರು ಉಕ್ಕಿ ಹರಿದಿರುವುದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಭೇಟಿ ಕೊಟ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು ನೋಡಲ್ ಅಧಿಕಾರಿ ದೇವಿದಾಸ ಮೊಗೇರ ಸ್ಥಳದಲ್ಲಿಯೇ ಯವುದೇ ಅನಾಹುತವಾಗದಂತೆ ಜಾಗೃತೆ ವಹಿಸಿದ್ದಾರೆ. ತಾಲೂಕಿನಲ್ಲಿ ಯಾವುದೇ ಸಂದರ್ಭದಲ್ಲಿ ಜನರ ರಕ್ಷಣೆಗೆ ತಂಡ ಸಿದ್ದವಿದ್ದು ಕಾಳಜಿ ಕೇಂದ್ರಗಳನ್ನು ತೆರೆಯಲು ಕೂಡಾ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಡಾ. ಸುಮಂತ್ ಬಿ.ಇ., ತಹಶೀಲ್ದಾರ್, ಭಟ್ಕಳ