Advertisement
ಗುಡ್ಡ ಕುಸಿತ
ತೋಟತ್ತಾಡಿ ಹಳೆ ಕಕ್ಕಿಂಜೆ ಬಳಿ ಗುಡ್ಡ ಕುಸಿತ ಉಂಟಾದ ಪರಿಣಾಮ ನೆರಿಯ – ಕಕ್ಕಿಂಜೆ ರಸ್ತೆ ಬ್ಲಾಕ್ ಆಗಿತ್ತು. ಜತೆಗೆ ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲೂ ಕುಸಿತ ಉಂಟಾಗಿದೆ. ನೆರಿಯ ಸೇತುವೆ ಮೇಲೆ ನೀರು ಹರಿದು ಸಂಚಾರ ಕಡಿತಗೊಂಡಿತು. ತೋಟತ್ತಾಡಿ ಬೆಂದ್ರಾಳ ಬಳಿ ರಸ್ತೆ ಮೇಲೆ ಪ್ರವಾಹದ ನೀರು ಹರಿದು ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಜತೆಗೆ ಇಲ್ಲಿ ಕೃಷಿ ತೋಟಗಳಿಗೂ ನೀರು ನುಗ್ಗಿದ್ದು, ತೋಟತ್ತಾಡಿ ಶ್ರೀ ಉಳ್ಳಾಲ್ತಿ ಭಜನ ಮಂದಿರ ಪ್ರವಾಹದ ನೀರಿನಲ್ಲಿ ಮುಳುಗಡೆಯಾಯಿತು. ತೋಟತ್ತಾಡಿಯ ಅರಂತಬೈಲುವಿನ ತಿಮ್ಮಪ್ಪ ಪೂಜಾರಿ ಅವರ ಮನೆವರೆಗೂ ನೀರು ಆವರಿಸಿತು.
ತೋಟಗಳಿಗೆ ನೀರು
ಮುಂಡಾಜೆ ಕಾಯರ್ತೋಡಿ ಪ್ರದೇಶದಲ್ಲಿ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ನಿಡಿಗಲ್ ನದಿ ಪಾತ್ರಗಳಲ್ಲಿ, ಪುದುವೆಟ್ಟು ಪ್ರದೇಶದಲ್ಲಿ ನೀರು ತೋಟಕ್ಕೆ ನುಗ್ಗಿದೆ. ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟ ಬಳಿಯೂ ರಸ್ತೆಯ ಕೆಳಗಿನ ಪ್ರದೇಶ ಜಲಾವೃತಗೊಂಡಿತು. ಕಲ್ಮಂಜ ಗ್ರಾಮದ ಬನದಬೈಲುವಿನ ಮೂಡಾಯಿಬೆಟ್ಟು ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿ ಕೃಷಿಗೆ ಹಾನಿಯಾಗಿದೆ.
ಉಕ್ಕಿ ಹರಿದ ನದಿಗಳು
ಧರ್ಮಸ್ಥಳ ಹಾಗೂ ನಿಡಿಗಲ್ ಭಾಗದಲ್ಲಿ ನೇತ್ರಾವತಿ ನದಿ, ಮುಂಡಾಜೆಯಲ್ಲಿ ಮೃತ್ಯುಂಜಯ ನದಿ, ಬೆಳ್ತಂಗಡಿಯ ಸೋಮಾವತಿ ನದಿ ಸಹಿತ ನೆರಿಯ ಹೊಳೆ, ಬೆಂದ್ರಾಳ ಹೊಳೆಯಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿ ಮಧ್ಯಾಹ್ನದ ವೇಳೆಗೆ ಪ್ರವಾಹ ಸ್ಥಿತಿ ಇಳಿಮುಖವಾಯಿತು.
Related Articles
ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕೈಕೊಟ್ಟಿತು. ವೇಣೂರು, ಬಳೆಂಜ, ಮುಂಡೂರು, ಮೇಲಂತಬೆಟ್ಟು, ಕೊಯ್ಯೂರು, ಪುದುವೆಟ್ಟು, ಪಟ್ರಮೆ ಮೊದಲಾದೆಡೆ ಸುಮಾರು 30ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದು ಮೆಸ್ಕಾಂ ಎಂಜಿನಿಯರ್ ಗಳು ತಿಳಿಸಿದ್ದಾರೆ.
Advertisement