Advertisement

Heavy Rain; ಆಲಡ್ಕ ಭಾಗದಲ್ಲಿ ಮತ್ತೆ ಮನೆಗಳು ಮುಳುಗಡೆ

12:11 AM Jul 25, 2023 | Team Udayavani |

ಬಂಟ್ವಾಳ: ವ್ಯಾಪಕ ಮಳೆಯ ಪರಿಣಾಮ ಬಂಟ್ವಾಳ ಭಾಗದಲ್ಲಿ ಅಪಾಯದ ಸನಿಹ ತಲುಪಿ ಸೋಮವಾರ ಬೆಳಗ್ಗೆ ಇಳಿಕೆಯಾಗಿದ್ದ ನೇತ್ರಾವತಿ ನದಿ ನೀರು ಸೋಮವಾರ ಸಂಜೆ ಮತ್ತೆ 8.3 ಮೀ. ದಾಟಿದ ಪರಿಣಾಮ ಪಾಣೆಮಂಗಳೂರು ಆಲಡ್ಕ ಭಾಗದಲ್ಲಿ ಜು. 23ಕ್ಕಿಂತಲೂ ಹೆಚ್ಚಾಗಿ ಸಾಕಷ್ಟು ಮನೆಗಳಿಗೆ ನುಗ್ಗಿತ್ತು.

Advertisement

ಪ್ರವಾಹದ ಸ್ಥಿತಿಯನ್ನು ಅರಿತಿದ್ದ ಸ್ಥಳೀಯ ಜು. 23ರಂದೇ ಮನೆ ತೊರೆದಿದ್ದು, ನೀರು ಇನ್ನೂ ಹೆಚ್ಚಾದರೆ ಬಂಟ್ವಾಳ ತಾಲೂಕಿನ ಮತ್ತಷ್ಟು ಭಾಗದಲ್ಲಿ ರಸ್ತೆಗಳಿಗೆ ನೀರು ಬಿದ್ದು ಸಂಪರ್ಕ ಕಡಿಯುವ ಜತೆಗೆ ಮನೆಗಳಿಗೆ ನುಗ್ಗುವ ಆತಂಕ ಎದುರಾಗಿದೆ. ಸೋಮವಾರ ಮಧ್ಯಾಹ್ನದವರೆಗೂ 7.8 ಮೀ.ನಲ್ಲೇ ಇದ್ದ ನದಿ ನೀರು ಸಂಜೆ 5ರ ಬಳಿಕ ಏರಿಕೆಯಾಗಿ 8 ಮೀ. ಕೂಡ ದಾಟಿ ರಾತ್ರಿಯಾಗುತ್ತಲೇ 8.3 ಮೀ.ಗೆ ತಲುಪಿತ್ತು.

ಬಂಟ್ವಾಳ ತಾಲೂಕಿನ ನದಿ ಅಂಚಿನ ಗ್ರಾಮಗಳಲ್ಲಿ ಬಹುತೇಕ ಕಡೆ ನೀರು ನದಿ ಅಂಚಿನವರೆಗೂ ತಲುಪಿದ್ದು, ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಮಸೀದಿಯ ಆವರಣಕ್ಕೂ ನೀರು ನುಗ್ಗಿತ್ತು.
ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಸ್ಥಾನದ ಕೆಳ ಭಾಗಕ್ಕೆ ಪ್ರವಾಹದ ನೀರು ನುಗ್ಗಿದ್ದು, ಬಡ್ಡಕಟ್ಟೆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣಗಳ ಸನಿಹಕ್ಕೆ ನೀರು ಆಗಮಿಸಿದ್ದು, ಇನ್ನಷ್ಟು ಹೆಚ್ಚಾದರೆ ಸುತ್ತಮುತ್ತಲ ಭಾಗದಲ್ಲಿ ಮುಳುಗಡೆಯಾಗುವ ಸಾಧ್ಯತೆ ಇದೆ.

ಪಾಣೆಮಂಗಳೂರು ಶ್ರೀ ಶಾರದಾ ಹೈಸ್ಕೂಲಿನ ಮೈದಾನದ ಜತೆಗೆ ಮುಂಭಾ ಗದ ಅಡಿಕೆ ತೋಟಕ್ಕೆ ನೀರು ನುಗ್ಗಿತ್ತು. ಮೆಲ್ಕಾರ್‌-ಪಾಣೆಮಂಗಳೂರು ರಸ್ತೆಯ ಆಲಡ್ಕ ಸೇತುವೆಯ ಬಳಿ ಸೋಮವಾರ ರಾತ್ರಿಯ ವೇಳೆ ರಸ್ತೆಗೂ ನೀರು ಬಿದ್ದಿತ್ತು. ಉಳಿದಂತೆ ಹೆಚ್ಚಿನ ಕಡೆಗಳಲ್ಲಿ ನದಿ ನೀರು ಅಪಾಯದ ಅಂಚಿಗೆ ತಲುಪಿದ್ದು, ಯಾವುದೇ ಸಂದರ್ಭದಲ್ಲಿ ಪ್ರವಾಹದ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ.

ತಾಲೂಕಿನಲ್ಲಿ 11ಕ್ಕೂ ಅಧಿಕ ಗ್ರಾಮಗಳಲ್ಲಿ ನೆರೆ ಸ್ಥಿತಿ ಇರುವ ಹಿನ್ನೆಲೆಯಲ್ಲಿ ಆಯ್ದ ಶಾಲೆಗಳಿಗೆ ಸೋಮವಾರ ರಜೆ ಸಾರಲಾಗಿತ್ತು. ಮಣಿಹಳ್ಳ-ವಾಮದಪದವು ರಸ್ತೆಯಲ್ಲಿ ಗುಡ್ಡವೊಂದು ಬಹುತೇಕ ರಸ್ತೆಗೆ ಕುಸಿದು ಆತಂಕ ಸೃಷ್ಟಿಯಾಗಿದೆ.

Advertisement

ಹೆದ್ದಾರಿಯಲ್ಲಿ ಕೃತಕ ನೆರೆ
ನೇತ್ರಾವತಿ ಅಂಚಿನ ಪ್ರದೇಶಗಳಲ್ಲಿ ನದಿಯ ನೀರು ಉಕ್ಕಿ ನೆರೆಯ ಆತಂಕ ಎದುರಾದರೆ ರಾ.ಹೆ.75ರ ಕಲ್ಲಡ್ಕ, ಮಾಣಿ, ಮೆಲ್ಕಾರ್‌ ಭಾಗ ಸೇರಿದಂತೆ ಬಹುತೇಕ ಕಡೆ ಹೆದ್ದಾರಿ ಕಾಮಗಾರಿ ಪ್ರಾಯೋಜಿತ ಕೃತಕ ನೆರೆಯ ಸ್ಥಿತಿ ಉಂಟಾಗಿದೆ. ಹೆದ್ದಾರಿಯುದ್ದಕ್ಕೂ ನೀರು ಹರಿಯಲು ಚರಂಡಿ ಇಲ್ಲದೆ ನೀರು ನಿಲ್ಲುತ್ತಿದ್ದು, ವಾಹನಗಳು ಸಾಗಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷವೂ ಇದೇ ಸ್ಥಿತಿ ಉಂಟಾಗಿದ್ದರೂ ಈ ಬಾರಿಯೂ ರಾ.ಹೆ. ಕಾಮಗಾರಿ ಗುತ್ತಿಗೆ ನಿರ್ವಹಿಸುವ ಸಂಸ್ಥೆ ಅದನ್ನು ಗಂಭೀರ ವಾಗಿ ಪರಿಗಣಿಸದ ಪರಿಣಾಮ ಈ ಸ್ಥಿತಿ ಉಂಟಾಗಿದೆ ಎಂದು ಹೆದ್ದಾರಿ ಅಂಚಿನ ಭಾಗಗಳಲ್ಲಿ ವಾಸಿಸುವ ನಾಗರಿಕರು ಆರೋಪಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next