ಉಡುಪಿ : ಜಿಲ್ಲಾದ್ಯಂತ ಬುಧವಾರ ಸಂಜೆ ಭಾರೀ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಿದ್ದು, ನಗರ ಹಾಗೂ ಗ್ರಾಮೀಣ ಭಾಗದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಗುಡುಗು ಸಿಡಿಲಿನಿಂದಾಗಿ ಮಣಿಪಾಲದ ಕೆಪಿಸಿಟಿಸಿಎಲ್ ಕೇಂದ್ರದಲ್ಲಿ ಹೈ ಟೆನ್ಶನ್ ವಿದ್ಯುತ್ ತಂತಿ ತುಂಡಾಗಿದೆ. ಜತೆಗೆ ಅಚ್ಲಾಡಿ ಮಧುವನದಲ್ಲಿ ಇನ್ಸುಲೇಟರ್‌ಗೆ ಹಾನಿಯಾಗಿದೆ.
ಇದರಿಂದಾಗಿ ಉಡುಪಿ ನಗರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಬೈಂದೂರು, ಕುಂದಾಪುರ, ಬ್ರಹ್ಮಾವರ, ಹೆಬ್ರಿ, ಕಾಪು, ಕಾರ್ಕಳದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳಿಗೆ ಹಾನಿಯಾಗಿದೆ ವಿದ್ಯುತ್ ವ್ಯತ್ಯವಾಗಿದೆ.
ಬೆೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುಡುವ ಬಿಸಿಲಿನ ವಾತಾವರಣ ಇದ್ದರೆ, ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ ವೇಳೆ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇದರಿಂದ ಹಬ್ಬದ ಖರೀದಿಗಾಗಿ ನಗರಕ್ಕೆ ಬಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ಈ ಮಧ್ಯೆ ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾವಳಿ ಹಬ್ಬದ ಖರೀದಿ ಭರಾಟೆಯಿಂದ ಟ್ರಾಫಿಕ್ ಜಾಮ್ ಆಯಿತು.
ಭಾರೀ ಮಳೆಯಿಂದ ಉಡುಪಿ ಬನ್ನಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ಹರಿಯಿತು. ತಗ್ಗು ಪ್ರದೇಶಗಳು, ತಗ್ಗು ರಸ್ತೆಗಳು ಜಲಾವೃತಗೊಂಡವು.
ಇದನ್ನೂ ಓದಿ : ತಿಕೋಟಾ ತಾಲೂಕಿನಲ್ಲಿ ಭೂಕಂಪ : ಮನೆಯಿಂದ ಹೊರಗೋಡಿ ಬಂದ ಜನ