Advertisement

ಮಳೆಗೆ ಮಕಾಡೆ ಮಲಗಿದ ಭತ್ತ

03:09 PM Nov 21, 2021 | Team Udayavani |

ಹುಣಸಗಿ: ಈಗಾಗಲೇ ರೈತರು ಬೆವರು ಸುರಿಸಿ ಬೆಳೆದ ಭತ್ತ ಕಟಾವಿಗೆ ಬಂದಿದೆ. ಕೊಯ್ಲು ಮಾಡಿ ಸಂಕಷ್ಟದಿಂದ ದೂರವಾಗಬೇಕೆಂದುಕೊಂಡಿದ್ದ ರೈತರಿಗೆ ಅಕಾಲಿಕ ಮಳೆ ನಿದ್ದೆಗೆಡಿಸಿದೆ.

Advertisement

ಕಳೆದ ವಾರದಿಂದಲೂ ದಟ್ಟವಾದ ಮಂಜಿನ ಹನಿ ಹಾಗೂ ಮಳೆಯಿಂದಾಗಿ ತೆನೆ ಹಿರಿದು ನಿಂತ ಭತ್ತದ ಪೈರು ಇದೀಗ ನೆಲಕ್ಕುರುಳಿ ಹಾಳಾಗಿವೆ. ಹುಣಸಗಿ ವಲಯದಲ್ಲಿ ಭತ್ತ-1450 ಎಕರೆ, ತೊಗರಿ-386 ಎಕರೆ, ಹತ್ತಿ-91 ಎಕರೆ ಹಾಗೂ ಕೊಡೇಕಲ್‌ ವಲಯದಲ್ಲಿ ಭತ್ತ-659 ಎಕರೆ, ತೊಗರಿ-1080, ಹತ್ತಿ-244 ಎಕರೆ ಸೇರಿದಂತೆ ಬೆಳೆಗಳು ಹಾನಿಯಾದ ಬಗ್ಗೆ ಕಂದಾಯ ಇಲಾಖೆ ಅಂದಾಜಿಸಿದೆ.

ಸಾಲ-ಸೂಲ ಮಾಡಿ ಬೆಳೆ ಬೆಳೆದು ಜೋಪಾನ ಮಾಡಿದ್ದ ಅನ್ನದಾತರೀಗ ಮಳೆಯಿಂದ ಅಕ್ಷರಶಃ ನಲುಗಿದ್ದಾರೆ. ಭತ್ತ, ಹತ್ತಿ, ತೊಗರಿ ವರುಣನ ಅರ್ಭಟಕ್ಕೆ ಮಣ್ಣು ಪಾಲಾಗಿವೆ. ಆಗಲೇ ಕಟಾವು ಮಾಡಿದ್ದ ಭತ್ತದ ಧಾನ್ಯ ಒಣಗಿಸಲೂ ಕೂಡ ಮಳೆ ಅಡ್ಡಿಯಾಗಿದೆ. ಹಾಗಾಗಿ ಸಂಗ್ರಹಿಸಿಟ್ಟಲ್ಲಿಯೇ ಮೊಳಕೆ ಒಡೆಯುವ ಹಂತಕ್ಕೆ ಬಂದಿದ್ದರೆ, ಹತ್ತಿಯೂ ಗಿಡದಲ್ಲಿಯೇ ಕೊಳೆಯುತ್ತಿದೆ ಎಂದು ರೈತರು ನೋವು ತೋಡಿಕೊಳ್ಳುತ್ತಿದ್ದಾರೆ.

ಸುರಪುರ-ಹುಣಸಗಿ ಸೇರಿ 54 ಸಾವಿರಕ್ಕಿಂತ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಹಾನಿಗೀಡಾದ ಪ್ರದೇಶಕ್ಕೆ ಆಯಾ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ಕೈಗೊಂಡಿದ್ದಾರೆ. ಈ ಹಿಂದೆ 2019-20ರಲ್ಲಿ ಹಾನಿಯಾದ ಕೆಲ ರೈತರಿಗೆ ಇನ್ನೂ ಪರಿಹಾರ ಬಂದಿಲ್ಲ. ಇದೀಗ ಬೆಳೆ ಹಾನಿಯಾಗಿ ಮತ್ತೆ ರೈತರು ಸರ್ಕಾರದ ಪರಿಹಾರಕ್ಕಾಗಿ ಕಾಯುವಂತಾಗಿದೆ. ಆದರೆ ಹಿಂದಿನ ಪರಿಹಾರವೇ ಇನ್ನೂ ರೈತರ ಕೈ ಸೇರಿಲ್ಲ. ಅಂತಹ ಸಂದರ್ಭದಲ್ಲಿ ಮಳೆರಾಯ ಅನ್ನದಾತನ್ನು ಸಂಕಷ್ಟಕ್ಕೆ ದೂಡಿದ್ದಾನೆ.

ಇದನ್ನೂ ಓದಿ:ಶಂಕರಪುರ ಮಲ್ಲಿಗೆ ಬೆಳೆ ವೀಕ್ಷಣೆ ನಡೆಸಿದ ಬೆಂಗಳೂರಿನ ವಿಜ್ಞಾನಿಗಳ ತಂಡ

Advertisement

ಬೆಲೆ ಕುಸಿತ

ಈ ಬಾರಿಯೂ ಭತ್ತದ ಬೆಲೆ ಕುಸಿತವಾಗಿದೆ. ಗೊಬ್ಬರ-ಕ್ರಿಮಿನಾಶಕ, ಔಷಧಗಳ ಬೆಲೆ ದುಪ್ಪಟ್ಟಾದರೂ ಭತ್ತಕ್ಕೆ ಮಾತ್ರ ಬೆಲೆಯೇ ಇಲ್ಲದಂತಾಗಿದೆ. 72 ಕೆ.ಜಿಗೆ ಸದ್ಯ 1000ರಿಂದ 1100 ರೂ. ಇದೆ. ಸ್ವಾಮಿನಾಥನ್‌ ಆಯೋಗದಂತೆ ಬೆಂಬಲ ಬೆಲೆ ಸೇರಿ ಕ್ವಿಂಟಲ್‌ ಭತಕ್ಕೆ 5000 ರೂ. ದರ ನಿಗ ಪಡಿಸಬೇಕೆಂದು ರೈತರ ಆಗ್ರಹ. ಹತ್ತಿಗೆ ಬೆಲೆ ಇದ್ದರೂ ಪ್ರಕೃತಿ ವಿಕೋಪದಿಂದ ಕೈ ಸುಟ್ಟುಕೊಂಡಿದ್ದೇವೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಖರೀದಿ ಕೇಂದ್ರವೂ ಇಲ್ಲ

ಈ ಭಾಗದಲ್ಲಿ ಭತ್ತವನ್ನೇ ಹೆಚ್ಚು ಬೆಳೆಯಲಾಗುತ್ತಿದ್ದರೂ ಖರೀದಿ ಕೇಂದ್ರ ಮಾತ್ರ ತೆರೆಯಲಾಗಿದೆ. ರೈತರ ಹಿತದೃಷ್ಟಿಯಿಂದ ಆದಷ್ಟು ಶೀಘ್ರ ಭತ್ತ ಖರೀದಿ ಕೇಂದ್ರ ತೆರೆದು ಭತ್ತ ಖರೀದಿಗೆ ಮುಂದಾಗಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸುತ್ತಿವೆ.

ರೈತರ ಬೆಳೆಹಾನಿ ಸಮೀಕ್ಷೆ ಸತ್ಯಾಂಶದಿಂದ ಕೂಡಿರಲಿ. ನೈಜ ರೈತರಿಗೆ ಪರಿಹಾರ ಸಿಗಬೇಕು. ಪರಿಹಾರ ನೀಡುವಲ್ಲಿ ಲೋಪದೋಷ ಆಗದಂತೆ ನೋಡಿಕೊಳ್ಳಬೇಕು. ಈಗಾಗಲೇ ರೈತರು ಸಂಕಷ್ಟದಲ್ಲಿದ್ದಾರೆ. ಭತ್ತ ಖರೀದಿ ಕೇಂದ್ರ ಸ್ಥಾಪಿಸಬೇಕು. ಭತ್ತಕ್ಕೆ ಹೆಚ್ಚಿನ ಬೆಂಬಲ ಬೆಲೆ ಸರ್ಕಾರ ದೊರಕಿಸಲು ಮುಂದಾಗಬೇಕು. ಮೂರು ಕೃಷಿ ಮಸೂದೆ ಹಿಂಪಡೆದಿರುವುದು ಖುಷಿ ತಂದಿದೆ. -ಮಹಾದೇವಿ ಬೇವಿನಾಳಮಠ ರಾಜ್ಯ ರೈತ ಸಂಘ (ಹಸಿರುಸೇನೆ) ಮಹಿಳಾ ರಾಜ್ಯ ಉಪಾಧ್ಯಕ್ಷೆ

ಹುಣಸಗಿ ವಲಯದಲ್ಲಿ 17 ಸಾವಿರ ಹೆಕ್ಟೇರ್‌ಗೂ ಹೆಚ್ಚು ಭತ್ತ ಬೆಳೆಯಲಾಗಿದೆ. ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿದಾಗ ಹಾನಿ ವರದಿ ಹೆಚ್ಚಾಗಬಹುದು. ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಹಾನಿ ವರದಿ ತಯಾರಿಸಲಾಗುವುದು. -ಸಿದ್ದಾರ್ಥ ಪಾಟೀಲ, ಸಹಾಯಕ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಹುಣಸಗಿ

ಬಾಲಪ್ಪ.ಎಂ. ಕುಪ್ಪಿ

Advertisement

Udayavani is now on Telegram. Click here to join our channel and stay updated with the latest news.

Next