ಕೆ.ಆರ್.ಪೇಟೆ: ತಾಲೂಕಿನಲ್ಲಿ ಸುರಿದ ಭಾರೀ ಮಳೆಯು ಅವಾಂತರಗಳನ್ನು ಸೃಷ್ಟಿ ಮಾಡಿದೆ. ಕೆ.ಆರ್. ಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಆಯುಧ ಪೂಜೆ ಪ್ರಯುಕ್ತ ಮಾರಾಟ ಮಾಡಲು ತಂದಿದ್ದ ಬೂದು ಗುಂಬಳ ಕಾಯಿಯು ಮಳೆಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ರೈತನಿಗೆ ಸಾವಿರಾರು ರೂ.ನಷ್ಟ ಸಂಭವಿಸಿದೆ.
ಲಕ್ಷಾಂತರ ರೂ. ನಷ್ಟ: ತಾಲೂಕಿನ ಕಸಬಾ ಹೋಬಳಿಯ ಕೊಮ್ಮೇನಹಳ್ಳಿ ಬಳಿ ನೇರಳೆ ಕಟ್ಟೆಗೆ ಪ್ರವಾಹದಂತೆ ನುಗ್ಗಿದ ನೀರು ಗ್ರಾಮದ ಹನುಮಂತೇಗೌಡ, ಬೋರೇಗೌಡ, ಹರೀಶ್, ಉದಯ್‌ಕುಮಾರ್, ಬಾಬು, ಷಣ್ಮುಖ, ದಿಲೀಪ್, ಮಹೇಂದ್ರ, ತೊಳಸಿ, ಮುಂತಾದ ರೈತರ ಜಮೀನುಗಳು ಹಾಗೂ ತೋಟಗಳಿಗೆ ನುಗ್ಗಿ ಬಾಳೆ, ಕಬ್ಬು, ತೆಂಗು, ಅಡಿಕೆ, ಅವರೆ, ಸಿಹಿಗುಂಬಳ, ಬೂದಗುಂಬಳ, ಮುಸುಕಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ಮಳೆಯ ನೀರಿನಿಂದ ಕೊಚ್ಚಿ ಹೋಗಿದ್ದು, ಲಕ್ಷಾಂತರ ರೂ.ನಷ್ಟ ಸಂಭವಿಸಿದೆ.
ಇದನ್ನೂ ಓದಿ;- ಯಾವುದೇ ನಿರ್ಬಂಧ ಇಲ್ಲ…ಅ.18ರಿಂದ ಎಲ್ಲಾ ದೇಶೀಯ ವಿಮಾನ ಸಂಚಾರಕ್ಕೆ ಕೇಂದ್ರದ ಅನುಮತಿ
ತೋಟಗಳು ಜಲಾವೃತ: ಕೊಮ್ಮೇನಹಳ್ಳಿ ಗ್ರಾಮದ ಶೇ.90ರಷ್ಟು ತೋಟಗಳು ಮಳೆಯ ನೀರಿನ ರಭಸಕ್ಕೆ ಸಿಲುಕಿ ಭಾರೀ ಪ್ರಮಾಣದ ಕೊರಕಲು ನಿರ್ಮಾಣವಾಗಿ ರೈತರಿಗೆ ಭಾರೀ ಸಂಕಷ್ಟ ಉಂಟಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮವು ಕೆಶಿಪ್ ಯೋಜನೆಯಡಿಯಲ್ಲಿ ಅವೈಜ್ಙಾನಿಕವಾಗಿ ನೇರಳೆಕಟ್ಟೆ ಯನ್ನು ದುರಸ್ತಿ ಮಾಡಿ ಕಟ್ಟೆಯ ಕೋಡಿಯನ್ನು ಎತ್ತರಿಸದ ಕಾರಣ ಭಾರೀ ಪ್ರಮಾಣದ ನೀರು ತೋಟಗಳಿಗೆ ನುಗ್ಗಿ ಅಪಾರ ನಷ್ಟವುಂಟಾಗಿದೆ ಎಂದು ಗ್ರಾಮದ ಪ್ರಗತಿಪರ ರೈತ ಹರೀಶ್ ಆರೋಪಿಸಿದ್ದಾರೆ.
ಹೂವು ನೀರುಪಾಲು: ಕೆ.ಆರ್.ಪೇಟೆ ಪಟ್ಟಣದಲ್ಲಿಯೂ ಮಳೆಯ ನೀರು ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿದ್ದು, ಬಸ್ ನಿಲ್ದಾಣಕ್ಕೆ ನುಗ್ಗಿರುವ ನೀರು ಹಂತ ಹಂತವಾಗಿ ಕಡಿಮೆಯಾಗುತ್ತಿದೆ. ರಸ್ತೆ ಬದಿಯ ವ್ಯಾಪಾರಿಗಳು ಹಾಗೂ ಆಯುಧ ಪೂಜೆ ಅಂಗವಾಗಿ ರೈತರು ತಂದಿದ್ದ ಹತ್ತಾರು ಲಾರಿ ಲೋಡ್ ಭೂದಗುಂಬಳ ಕಾಯಿಗಳು, ಸೇವಂತಿಗೆ ಹೂವಿನ ಪಿಂಡಿಗಳು ಮಳೆ ನೀರು ಪಾಲಾಗಿವೆ.
ಪರಿಹಾರ ನೀಡಲು ಆಗ್ರಹ ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ರಾಜ್ಯ ಸರ್ಕಾರವು ಕೂಡಲೇ ಪ್ರಕೃತಿ ವಿಕೋಪ ಅನುದಾನದ ಅಡಿಯಲ್ಲಿ ತಕ್ಷಣವೇ ನಷ್ಟ ಉಂಟಾಗಿರುವ ರೈತರಿಗೆ ಪರಿಹಾರ ನೀಡಿ ನೆರವಿಗೆ ಧಾವಿಸಬೇಕು ಎಂದು ಪ್ರಗತಿಪರ ರೈತರಾದ ಬೊಮ್ಮೇ ನಹಳ್ಳಿ ಬಿ.ಸಿ.ಹರ್ಷ, ಅಗ್ರಹಾರಬಾ ಚಹಳ್ಳಿ ಆರ್.ಜಗದೀಶ್ ಮತ್ತು ಕೊಮ್ಮೇನಹಳ್ಳಿ ಜಗದೀಶ್ ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.