ತಾಳಿಕೋಟೆ: ಪಟ್ಟಣಕ್ಕೆ ಹೊಂದಿಕೊಂಡು ಹರಿಯುತ್ತಿರುವ ಡೋಣಿ ನದಿ ಪ್ರವಾಹ ನಾಲ್ಕನೇ ದಿನವು ಮುಂದುವರಿದಿದ್ದು ಹಡಗಿನಾಳ ಗ್ರಾಮದ ಮೂಲಕ ಸಂಪರ್ಕ ಕಲ್ಪಿಸುವ ಕೆಳಮಟ್ಟದ ಸೇತುವೆ ಜಲಾವೃತಗೊಂಡಿದೆ.
ಇದರಿಂದ ಹಡಗಿನಾಳ, ಹರನಾಳ, ಕಲ್ಲದೇವನಹಳ್ಳಿ ಗ್ರಾಮಸ್ಥರು ಮತ್ತು ಪಿಯುಸಿ ಪರೀಕ್ಷಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಸೋಗಲಿ ಹಳ್ಳಕ್ಕೆ ಕೆನಾಲ್ ಮೂಲಕ ನೀರು ಹರಿಬಿಟ್ಟಿದ್ದರಿಂದ ಸೇತುವೆ ಜಲಾವೃತಗೊಂಡಿದೆ. ಹಳ್ಳದ ನೀರು ಬಹಳಷ್ಟು ಸೆಳವು ಕಾಣಿಸಿಕೊಳ್ಳುವುದರಿಂದ ಡೋಣಿ ನದಿ ಪ್ರವಾಹದಲ್ಲಿಯೇ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ದಡ ಸೇರಿ ಮತ್ತೇ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ತೆರಳಿದ್ದು ಕಂಡು ಬಂತು. ನದಿಯ ಆಚೆಗೆ ಇರುವ ಜಮೀನಿನ ರೈತರು ಕಸ ಕೀಳುವ ಕೆಲಸಕ್ಕೆ ಟ್ರ್ಯಾಕ್ಟರ್ ಇನ್ನಿತರ ವಾಹನಗಳಲ್ಲಿ ಆತಂಕದ ನಡುವೆಯೇ ಸಂಚರಿಸಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಮರಳಿ ಬಂದಿದ್ದು ಕಂಡು ಬಂತು. ಶುಕ್ರವಾರ ಸಾಯಂಕಾಲ ಬೈಕ್ ಸವಾರನೊಬ್ಬ ಮದ್ಯದ ಅಮಲಿನಲ್ಲಿ ಸೇತುವೆ ದಾಟಲು ಪ್ರಯತ್ನಿಸುತ್ತಿರುವಾಗಲೇ ನದಿ ದಡದಲ್ಲಿಯೇ ಬೈಕ್ ಸಮೇತ ಬಿದ್ದು ಮರಳಿ ಬೈಕ್‌ನೊಂದಿಗೆ ವಾಪಸ್ ಬಂದ ಘಟನೆ ಜರುಗಿತು.
ಈ ಸನ್ನಿವೇಶವನ್ನು ನೋಡಿದ ಜನರಲ್ಲಿ ಕೆಲವೊತ್ತು ಆತಂಕ ಮೂಡಿಸಿತ್ತು. ಜಿಲ್ಲೆಯ ವಿವಿದ ಭಾಗಗಳಲ್ಲಿ ಸ್ವಲ್ಪ ಮಳೆಯಾದರೂ ವಾರಗಟ್ಟಲೇ ಹರಿಯುವ ಈ ನೀರಿನಿಂದ ಸುಮಾರು 5, 6 ಗ್ರಾಮಗಳ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಕೂಡಲೇ ಮೇಲ್ಮಟ್ಟದ ಸೇತುವೆ ನಿರ್ಮಾಣ ಕಾರ್ಯ ಮುಗಿಸಿ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.
4 ಹೋಬಳಿ ವ್ಯಾಪ್ತಿಯಲ್ಲಿ 124.7 ಮಿ.ಮೀ. ಮಳೆ
ಮುದ್ದೇಬಿಹಾಳ: ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ ಸೆ. 10ರಂದು ಒಂದೇ ದಿನ 124.7 ಮಿ.ಮೀ. ದಾಖಲೆ ಮಳೆ ಸುರಿದಿದೆ. ಈ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಚ್. ಯರಝರಿ ಹಾಗೂ ತಾಲೂಕು ತಾಂತ್ರಿಕ ಸಹಾಯಕಿ ರಾಜೇಶ್ವರಿ ನಾಡಗೌಡ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ಅಂದು ಮುದ್ದೇಬಿಹಾಳ ಹೋಬಳಿಯಲ್ಲಿ 48.5 ಮಿ.ಮೀ. ಮಳೆ ಆಗಿದ್ದರೆ ನಾಲತವಾಡ ಹೋಬಳಿಯಲ್ಲಿ 20.08, ತಾಳಿಕೋಟೆ ಹೋಬಳಿಯಲ್ಲಿ 45, ಢವಳಗಿ ಹೋಬಳಿಯಲ್ಲಿ 10.4 ಮಿ.ಮೀ. ಮಳೆ ಸುರಿದಿದೆ. ಸೆ. 3ರಂದು ಮುದ್ದೇಬಿಹಾಳ ಹೋಬಳಿಯಲ್ಲಿ 33.5, ನಾಲತವಾಡ ಹೋಬಳಿಯಲ್ಲಿ 18.2, ತಾಳಿಕೋಟೆ ಹೋಬಳಿಯಲ್ಲಿ 20, ಢವಳಗಿ ಹೋಬಳಿಯಲ್ಲಿ 20.6 ಸೇರಿ ಒಟ್ಟು 92.3 ಮಿ.ಮೀ. ಮಳೆ ಸುರಿದಿತ್ತು. ಇದಾದ ಮೇಲೆ ಸೆ. 7ರಂದು ತಾಳಿಕೋಟೆ ಹೋಬಳಿಯಲ್ಲಿ 1.4, ಢವಳಗಿ ಹೋಬಳಿಯಲ್ಲಿ 15 ಸೇರಿ 16.4, ಸೆ. 9ರಂದು ಮುದ್ದೇಬಿಹಾಳ ಹೋಬಳಿಯಲ್ಲಿ 4, ನಾಲತವಾಡ ಹೋಬಳಿಯಲ್ಲಿ 8.4, ತಾಳಿಕೋಟೆ ಹೋಬಳಿಯಲ್ಲಿ 3.3 ಸೇರಿ ಒಟ್ಟು 15.7 ಮಿ.ಮೀ. ಮಳೆ ಸುರಿದಿದೆ. ಒಟ್ಟಾರೆ ಸೆ.1ರಿಂದ ಸೆ. 11ರವರೆಗೆ ಮುದ್ದೇಬಿಹಾಳ, ತಾಳಿಕೋಟೆ ವ್ಯಾಪ್ತಿಯ ನಾಲ್ಕು ಹೋಬಳಿಗಳಲ್ಲಿ ಒಟ್ಟಾರೆ 249.1 ಮಿ.ಮೀ. ಮಳೆ ಸುರಿದಿದೆ ಎಂದು ತಿಳಿಸಿದ್ದಾರೆ.