Advertisement

ಭಾರೀ ಮಳೆ: ಮುಳುಗಿದ ಮಹಾನಗರಿ

06:25 AM Aug 30, 2017 | Team Udayavani |

ಮುಂಬಯಿ: ಮುಂಗಾರಿನ ರೌದ್ರಾವತಾರಕ್ಕೆ ಮಹಾನಗರಿ ಮುಂಬಯಿ ನಲುಗಿಹೋಗಿದ್ದು, ನಿರಂತರ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

Advertisement

ಸೋಮವಾರ ರಾತ್ರಿಯಿಂದ ಎಡೆಬಿಡದೇ ಮಳೆ ಸುರಿಯುತ್ತಿದ್ದ ಪರಿಣಾಮ ಇಡೀ ನಗರದಲ್ಲಿ ರೈಲು, ರಸ್ತೆ, ವಾಯು ಸಂಚಾರ ಸ್ಥಗಿತ ಗೊಂಡಿದೆ. ಮುಂಬಯಿ ಉಪನಗರ ಗಳಲ್ಲೂ ಮಳೆ ತೀವ್ರ ಬಿರುಸಾಗಿದ್ದು, ನೀರು ಎಲ್ಲೆಡೆ ಆವರಿಸಿದೆ. 2005ರ ಮುಂಬಯಿ ಇತಿಹಾಸದಲ್ಲೇ ಅತಿ ಭೀಕರ ಮಹಾಮಳೆಯ ಬಳಿಕ ಅತಿ ಹೆಚ್ಚು ಮಳೆ ಬಿದ್ದ ಘಟನೆ ಇದಾಗಿದೆ.

ಹೆದ್ದಾರಿಯಲ್ಲಿ  ನೀರು: ನವಿ ಮುಂಬಯಿ, ಥಾಣೆ ಪ್ರದೇಶಗಳೂ ನೀರಿನಲ್ಲಿ ಮುಳುಗಿದ್ದು, ಸಂಪರ್ಕ ತಪ್ಪಿಹೋಗಿದೆ. ಅಲ್ಲಲ್ಲಿ ವಾಹನಗಳು ನೀರಿನಲ್ಲಿ  ತೇಲುತ್ತಿರುವ ದೃಶ್ಯ ಸಾಮಾನ್ಯವಾಗಿವೆ. ಕೇವಲ 3 ಗಂಟೆ ಗಳಲ್ಲಿ 65 ಮಿ.ಮೀ. ಮಳೆ ಸುರಿ
ದಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. 

ಮುಂಬಯಿಯ ಬಹುತೇಕ ಪ್ರಮುಖ ರಸ್ತೆಗಳಲ್ಲಿ  ಟ್ರಾಫಿಕ್‌ ಅಸ್ತವ್ಯಸ್ತ ಗೊಂಡಿದೆ. ಪೂರ್ವ,  ಪಶ್ಚಿಮ ಎಕ್ಸ್‌ ಪ್ರಸ್‌ ಹೈವೇ, ಸಿಯೋನ್‌-ಪನ್ವೇಲ್‌ ಹೈವೇ, ಎಲ್‌ಬಿಎಸ್‌ ಮಾರ್ಗಗಳು ಮಳೆ ನೀರಿನಿಂದಾವೃತವಾಗಿವೆ. ತಗ್ಗು ಪ್ರದೇಶ
ಗಳ ನಿವಾಸಿಗಳ ಪರಿಸ್ಥಿತಿ ಹೇಳತೀರ ದಾಗಿದ್ದು, ಭಾರೀ ನೆರೆಯ ಪರಿಸ್ಥಿತಿ ಉಂಟಾಗಿದೆ.

ಉಪನಗರಗಳಿಗೆ ಸಂಪರ್ಕವೇ ಇಲ್ಲ!: ಕೇಂದ್ರ ಮುಂಬಯಿಯಿಂದ ಉಪ ನಗರಗಳಿಗೆ ಎಲ್ಲ ರೀತಿಯ ಸಂಪರ್ಕ ಕಡಿತಗೊಂಡಿದೆ. ಬಾಂದ್ರಾ, ಅಂಧೇರಿ, ಪಶ್ಚಿಮ, ಪೂರ್ವ ಪ್ರದೇಶಗಳು, ಹಾರ್ಬರ್‌ ಪ್ರದೇಶಗಳಲ್ಲಿ ರೈಲು ಮಾರ್ಗಗಳ ತುಂಬ ನೀರು ತುಂಬಿದ್ದು, ಸಂಚಾರ ಸ್ಥಗಿತಗೊಂಡಿದೆ.

Advertisement

ವಿಮಾನ ಯಾನ ಸ್ಥಗಿತ: ಮಂಗಳ ವಾರ ಬೆಳಗ್ಗೆಯಿಂದ ವಿಮಾನ ನಿಲ್ದಾಣ ಕಾರ್ಯಾಚರಣೆ ಸ್ಥಗಿತವಾಗಿದೆ. ಒಂದು ರನ್‌ವೇ ಮಾತ್ರ ತೆರೆದುಕೊಂಡಿದೆ. ಹಲವು ವಿಮಾನಗಳನ್ನು ಅಹಮದಾ ಬಾದ್‌ಗೆ ಕಳಿಸಲಾಗಿದೆ. ಭಾರೀ ಗಾಳಿ, ಗೋಚರತೆ ಇಲ್ಲದ್ದರಿಂದ ವಿಮಾನಗಳ ಲ್ಯಾಂಡಿಂಗ್‌, ಟೇಕಾಫ್ಗೆ ಸಮಸ್ಯೆ ಯಾಗಿದೆ.

ಹಳಿತಪ್ಪಿದ ತುರಂತೋ: ನಾಗ್ಪುರ, ಮುಂಬಯಿ ತುರಂತೋ ಎಕ್ಸ್‌ಪ್ರೆಸ್‌ ಮಳೆಯಿಂದಾಗಿ ವಸಿಂದ್‌ ಮತ್ತು ಅಸಂಗಾಂವ್‌ ಮಧ್ಯೆ ಹಳಿತಪ್ಪಿದೆ. ಇದರಿಂದ ಎಂಜಿನ್‌ ಹಾಗೂ 9 ಬೋಗಿಗಳು ಮಗುಚಿವೆ. ಪ್ರಯಾಣಿಕರು ಅದೃಷ್ಟವಶಾತ್‌ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ರೈಲ್ವೇ ಹಳಿಯ ಮೇಲೆ ಭೂಕುಸಿತ ಆದ್ದರಿಂದ ಹಳಿ ತಪ್ಪಿದೆ. ಘಟನೆ ವೇಳೆ ಚಾಲಕ ತುರ್ತು ಬ್ರೇಕ್‌ ಅನ್ನು ಹಾಕಿದ್ದು, ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ ಎಂದು ಕೇಂದ್ರೀಯ ರೈಲ್ವೇ ವಕ್ತಾರರು ಹೇಳಿದ್ದಾರೆ.

ಮೊಣಕಾಲುವರೆಗೆ ನೀರು: ಸಾವಿರಾರು ವಾಹನಗಳು ರಸ್ತೆಯಲ್ಲೇ ನಿಂತಿವೆ. ಲೋವರ್‌ ಪರೇಲ್‌ ದಾದರ್‌, ಕುರ್ಲಾ, ಅಂಧೇರಿ, ಖಾರ್‌ ವೆಸ್ಟ್‌, ಘಾಟ್‌ಕೋಪರ್‌, ಸಿಯೋನ್‌, ಹಿಂದ್‌ಮಾತಾ ಪ್ರದೇಶದಲ್ಲಿ ಸಾವಿರಾರು ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿವೆ. ಮಹಾಮಳೆಯ ಪರಿಣಾಮ ಎಲ್ಲೂ ನಡೆಯಲೂ ಸಾಧ್ಯವಾಗುತ್ತಿಲ್ಲ. ಎಲ್ಲೆಡೆ ಮೊಣಕಾಲವರೆಗೆ ನೀರು ನಿಂತುಕೊಂಡಿದೆ.

ನಿವಾಸಿಗಳಿಗೆ ಎಚ್ಚರಿಕೆ: ಭಾರೀ ಮಳೆಯ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ, ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದು, ಮನೆಯಿಂದ ಹೊರಗೆ ಬರದಂತೆ ಸೂಚನೆ ನೀಡಲಾಗಿದೆ.  ಪಾಲಿಕೆಯ ವಿಕೋಪ ದಳದ ಪ್ರಕಾರ, ಮುಂಬಯಿನ ವಿವಿಧ ಪ್ರದೇಶಗಳಲ್ಲಿ ನೀರು ನಿಂತ ಬಗ್ಗೆ, ಸಹಾಯ ಯಾಚನೆ ಸಾಮಾನ್ಯವಾಗಿದೆ. ರಸ್ತೆಗಳಿಗೆ ಮರಗಳು ಬಿದ್ದಿವೆ ಎಂದು ಮೂಲಗಳು ಹೇಳಿವೆ.

2005ರ ಕರಾಳ ನೆನಪು
2005ರಲ್ಲಿ ಮುಂಬಯಿಯಲ್ಲಿ ಸುರಿದ ಮಳೆ, ಇತಿಹಾಸದಲ್ಲೇ ಸುರಿದಿರಲಿಲ್ಲ. 24 ತಾಸುಗಳಲ್ಲಿ ಬರೋಬ್ಬರಿ 944 ಮಿ.ಮೀ. ಸುರಿದಿತ್ತು. 12 ಗಂಟೆ ಅವಧಿಯಲ್ಲಿ 644 ಮಿ.ಮೀ. ಮಳೆ ಸುರಿದ ದಾಖಲೆಯಾಗಿತ್ತು. ಈ ಮಳೆಯಿಂದಾಗಿ 1094 ಮಂದಿ ಮೃತಪಟ್ಟಿದ್ದು, ಮುಂಬಯಿ ಇತಿಹಾಸದಲ್ಲೇ ಕರಾಳ ನೆನಪಾಗಿದೆ. 

ಇಂದು ಸಾರ್ವಜನಿಕ ರಜೆ: ಭಾರೀ ಮಳೆ ಮತ್ತು ಇನ್ನಷ್ಟು ಮಳೆ ಸುರಿವ ಮುನ್ಸೂಚನೆ ಇರುವುದರಿಂದ ಮುಂಬಯಿನಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿದ್ದಾರೆ. 

ಟೋಲ್‌ ಇಲ್ಲ: ಮಳೆ ಪರಿಸ್ಥಿತಿ ಸುಧಾರಿಸುವಲ್ಲಿವರೆಗೆ ಮುಂಬಯಿ ಪ್ರವೇಶದ ಟೋಲ್‌ಗ‌ಳು, ಸೀಲಿಂಕ್‌ ಸೇತುವೆಯಲ್ಲಿ ಯಾವುದೇ ರಸ್ತೆ ಸುಂಕಗಳನ್ನು ವಸೂಲಿ ಮಾಡುವುದಿಲ್ಲ ಎಂದು ಹೈವೇ ಪ್ರಾಧಿಕಾರ ಹೇಳಿದೆ. 

ಭಾರೀ ಮಳೆ ಸಾಧ್ಯತೆ
ಮುಂಬಯಿಯಲ್ಲಿ  ಮತ್ತಷ್ಟು ಮಳೆ ಬೀಳುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ 24ರಿಂದ 48 ಗಂಟೆ ಗಳಲ್ಲಿ  ಮಹಾರಾಷ್ಟ್ರದ ಪಶ್ಚಿಮ ಕರಾವಳಿ, ಮುಂಬಯಿ, ಗುಜರಾತ್‌ನ ಭಾಗ, ಗೋವಾ ಗಳಲ್ಲಿ  ಭಾರೀ ಮಳೆ ಸುರಿಯಲಿದೆ ಎಂದು ಎಚ್ಚರಿಸಿದೆ. ಮುಂಬಯಿ ಕಡಲ ತೀರದಲ್ಲಿ  ವಾಯುಭಾರ ತೀವ್ರ ಮಟ್ಟಿಗೆ ಕುಸಿತವಾಗಿದ್ದು, ಈ ಭಾರೀ ಮಳೆಗೆ ಕಾರಣವಾಗಿದೆ ಎನ್ನಲಾಗಿದೆ. ಜತೆಗೆ ಭಾರೀ ಗಾಳಿ ಬೀಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next