ಹುಬ್ಬಳ್ಳಿ: ಮಳೆ ತಗ್ಗಿದ್ದರೂ ಕೃಷ್ಣಾ, ದೂಧಗಂಗಾ, ವೇದಗಂಗಾ, ಮಲಪ್ರಭಾ, ಘಟಪ್ರಭಾ ನದಿಗಳ ರೌದ್ರಾವತಾರ ನಿಂತಿಲ್ಲ. ಹಲವು ಸೇತುವೆಗಳು ಮುಳುಗಡೆಯಾಗಿ 45ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ. 9 ಸಾವಿರಕ್ಕೂ ಅಧಿಕ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಕೃಷ್ಣಾ ನದಿಗೆ 2.96 ಲಕ್ಷ, ದೂಧಗಂಗಾ, ವೇದಗಂಗಾ ನದಿಗಳಿಗೆ ತಲಾ 48 ಸಾವಿರ ಕ್ಯುಸೆಕ್ ನೀರು ಬರುತ್ತಿದೆ. ಬೆಳಗಾವಿ ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮಗಳ ಸುಮಾರು 9 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗೋಕಾಕ ತಾಲೂಕು ಮೆಳವಂಕಿ ಗ್ರಾಮದ 500ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳಿಂದ 23 ಗ್ರಾಮಗಳು ಜಲಾವೃತವಾಗಿವೆ. 13 ಕಾಳಜಿ ಕೇಂದ್ರಗಳಲ್ಲಿ 1258 ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಘಟಪ್ರಭಾ ಪ್ರವಾಹದಿಂದ ಮುಧೋಳ ತಾಲೂಕು ಚಿಚಖಂಡಿ ಬಳಿ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿ ವಿಜಯಪುರ-ಧಾರವಾಡ ಸಂಪರ್ಕ ಕಡಿತಗೊಂಡಿದೆ.
ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 5,000 ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಮಾಚಕನೂರು ಗ್ರಾಮ ಜಲಾವೃತವಾಗಿದೆ.ಹೊಳೆಆಲೂರು-ಬಾದಾಮಿ ಸಂಪರ್ಕ ಕಡಿತಗೊಂಡಿದೆ. ಆಲಮಟ್ಟಿ ಡ್ಯಾಂನಿಂದ 3 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದೆ.
ನಾರಾಯಣಪುರ ಡ್ಯಾಂನಿಂದಲೂ 3.25 ಲಕ್ಷ ಕ್ಯುಸೆಕ್ ನೀರು ಬಿಡುತ್ತಿರುವುದರಿಂದ ತೀರ ಪ್ರದೇಶದಲ್ಲಿ ನೆರೆ ಆವರಿಸಿದೆ.