ಚಿಂತಾಮಣಿ: ರಾಜ್ಯದ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರ, ಪವಿತ್ರ ಯಾತ್ರಾಸ್ಥಳ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾ ಮಳೆಯಿಂದ ನೀರು ಸೋರಿಕೆ ಆಗಿ ಭಕ್ತರು ಪರದಾಡುವಂತಾಗಿದೆ.
ದರ್ಗಾಗೆ ಬಂದ ನೂರಾರು ಭಕ್ತರು ಒಂದು ರಾತ್ರಿ ಅಲ್ಲೇ ವಾಸ್ತವ್ಯ ಹೂಡಿ ಮರುದಿನ ಮನೆಗೆ ಹೋಗುವುದು ವಾಡಿಕೆ. ಆದರೆ, ಮಹಾಲಯ ಅಮಾವಾಸ್ಯೆ ಪ್ರಯುಕ್ತ ದರ್ಗಾಗೆ ನೂರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ದರ್ಗಾದ ಆವರಣ ನೀರಿನಿಂದ ಆವೃತವಾಗಿದೆ.
ಇದನ್ನೂ ಓದಿ:- ಎಲ್ಲಾ ವಾಹನಗಳಿಗೆ ವಿಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಿ
ಚಾವಣಿ ಸೋರಿಕೆ ಆಗುತ್ತಿದೆ. ದರ್ಗಾಗೆ ಬಂದಿದ್ದ ನೂರಾರು ಭಕ್ತರು ಮಳೆ ನೀರಿನಲ್ಲೆ ಮಲಗುವಂತ ದುಸ್ಥಿತಿ ಎದುರಾಗಿದೆ. ಇನ್ನು ಮುರಗಮಲ್ಲಾ ಅಮ್ಮಾಜಾನ್ ಬಾವಾಜಾನ್ ದರ್ಗಾಗೆ ತಿಂಗಳಿಗೆ ಲಕ್ಷಾಂತರ ಮಂದಿ ಭಕ್ತರು ಬರುವುದರಿಂದ ದರ್ಗಾ ಹುಂಡಿಗಳಲ್ಲಿ ಲಕ್ಷಾಂತರ ರೂ. ಹಣ ರಾಜ್ಯ ವಕ್ಫ್ ಮಂಡಳಿ ಬೊಕ್ಕಸಕ್ಕೆ ಸಂದಾಯವಾಗುತ್ತದೆ.
ಅದರಲ್ಲಿ ದರ್ಗಾ ಅಭಿವೃದ್ಧಿ ಮಾಡಬಹುದು ಎಂದು ಭಕ್ತರು ಹೇಳುತ್ತಾರೆ. ಇನ್ನು ಹುಂಡಿಯಲ್ಲಿ ಸಂಗ್ರಹ ಆಗುವ ಹಣದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡುತ್ತೇವೆಂದು ಹೇಳುವ ವಕ್ಫ್ ಮಂಡಳಿ, ದರ್ಗಾ ಅಭಿವೃದ್ಧಿಯು ಕೇವಲ ಲೆಕ್ಕಪತ್ರಗಳಿಗೆ ಮಾತ್ರ ಸೀಮಿತವಾಗಿದೆ. ದರ್ಗಾದಲ್ಲಿ ಹಲವು ಅಭಿವೃದ್ಧಿ ಕಾರ್ಯ ನಡೆಯಬೇಕಾಗಿದೆ. ಈಗಾಗಲೇ ನಡೆದಿರುವ ಕೆಲವು ಕಾಮಗಾರಿಗಳು ಕಳಪೆ ಆಗಿವೆ. ಮಳೆಗಾಲದಲ್ಲಂತೂ ಭಕ್ತರು ಅನುಭವಿಸುತ್ತಿರುವ ಸಂಕಷ್ಟ ಹೇಳತ್ತಿರದಾಗಿದೆ ಎನ್ನುತ್ತಾರೆ.