Advertisement

ಅತಿವೃಷ್ಟಿ: ಕೊಳೆರೋಗ ತಗುಲಿ ತೋಟ ಬರಿದು!

10:16 AM Aug 24, 2018 | Team Udayavani |

ಸುಳ್ಯ : ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಸುಳ್ಯವೀಗ ಜೀವನ ನಿರ್ವಹಣೆಗೆ ದಾರಿಯಾಗಿದ್ದ ಅಡಿಕೆ ತೋಟಕ್ಕೆ ಬಾಧಿಸಿರುವ ಕೊಳೆರೋಗದಿಂದ ತತ್ತರಿಸಿದೆ..! ತಾಲೂಕಿನ ಶೇ. 90 ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡಿದೆ. ನಿಯಂತ್ರಣ ಸಾಧ್ಯವಾಗದೆ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ. ತೋಟದಿಂದ ಹೆಕ್ಕಿ ತಂದ ಬಳಿತ ಹಂತಕ್ಕೆ ತಲುಪಿ ಹಣ್ಣಾಗಬೇಕಿದ್ದ ಕಾಯಿ ಅಡಿಕೆ ರಾಶಿ ಮನೆ ಅಂಗಳವಿಡೀ ವ್ಯಾಪಿಸಿದೆ. ಈಗಾಗಲೇ ಶೇ. 40ರಷ್ಟು ಎಳೆ ಅಡಿಕೆ ಬುಡಕ್ಕೆ ಉದುರಿದೆ. ಮಳೆ ನಿಯಂತ್ರಣಕ್ಕೆ ಬಾರದಿರುವ ಕಾರಣ, ಆ ಪ್ರಮಾಣ ಶೇ. 60 ದಾಟುವ ಸಾಧ್ಯತೆ ಇದೆ.

Advertisement

ಈ ಬಾರಿ ಹೆಚ್ಚು
ನಾಲ್ಕು ವರ್ಷದ ಹಿಂದೊಮ್ಮೆ ಬಾಧಿಸಿದ ಕೊಳೆರೋಗ ಈಗ ಮತ್ತೆ ವಕ್ಕರಿಸಿದೆ. ತೋಟಗಾರಿಕೆ ಇಲಾಖೆಯ ಬೋರ್ಡೋ ದ್ರಾವಣಕ್ಕೂ ಕ್ಯಾರೆ ಅನ್ನುತ್ತಿಲ್ಲ. ಮುಖ್ಯವಾಗಿ ಅಡಿಕೆ ಹಿಂಗಾರ ಎಳೆ ಅಡಿಕೆ ಆಗಿ ಪರಿವರ್ತನೆಗೊಳ್ಳುವ ಸಂದರ್ಭದಲ್ಲಿ ಆರಂಭಗೊಂಡ ಜಡಿ ಮಳೆ ಈ ತನಕ ಬಿಟ್ಟಿಲ್ಲ. ಹಾಗಾಗಿ ಶೇ. 70ಕ್ಕಿಂತ ಅಧಿಕ ಬೆಳೆಗಾರರಿಗೆ ಔಷಧ ಸಿಂಪಡಿಸಲು ಅವಕಾಶ ಸಿಕ್ಕಿಲ್ಲ. ಎರಡು, ಮೂರು ಬಾರಿ ಮದ್ದು ಬಿಟ್ಟವರ ತೋಟದಲ್ಲಿಯೂ ರೋಗ ಕಾಣಿಸಿಕೊಂಡಿದೆ. ಅತಿವೃಷ್ಟಿಯ ಪರಿಣಾಮವಿದು ಎಂದು ಕೃಷಿಕರು ಅಭಿಪ್ರಾಯಿಸುತ್ತಾರೆ.

ಬೆಳೆಗಾರರಿಗೆ ಸಂಕಟ
ಪ್ರತಿ ವರ್ಷ ಒಂದಲ್ಲ ಒಂದು ರೋಗದಿಂದ ಅಡಿಕೆ ಬೆಳೆಗಾರರು ತತ್ತರಿಸುತ್ತಿದ್ದಾರೆ. ಸುಳ್ಯವಂತೂ ಹಳದಿ ರೋಗ, ಬೇರು ಹುಳ ರೋಗ ಇತ್ಯಾದಿ ಹಲವು ಸಂಕಟಗಳನ್ನು ಎದುರಿಸಿದೆ. ಇನ್ನೊಂದು ಮುಖ್ಯ ಬೆಳೆ ರಬ್ಬರ್‌ ಧಾರಣೆ ಪಾತಾಳಕ್ಕೆ ಬಿದ್ದಿರುವುದರಿಂದ ಅಡಿಕೆಯೇ ಆಧಾರ ಆಗಿತ್ತು. ಈಗ ಫಸಲು ಬರುವ ಹೊತ್ತಲ್ಲೇ ಅದು ಕೈ ಕೊಟ್ಟಿದೆ. ಎರಡು ಮೂರು ದಿನದಿಂದ ತುಸು ಬಿಸಿಲಿನ ವಾತಾವರಣ ಇದ್ದು, ಔಷಧ ಸಿಂಪಡಣೆಗೆ ಬೆಳೆಗಾರರು ಮುಗಿಬಿದ್ದಿದ್ದಾರೆ. ಉಳಿದಷ್ಟದಾದರೂ ಉಳಿಯಲಿ ಎಂಬ ಕಾರಣ. ಆದರೆ ಮುಂದೆ ಮಳೆ ಮತ್ತೆ ಸುರಿದರೆ ಕೊಳೆರೋಗ ನಿಯಂತ್ರಿಸುವುದು ಅಸಾಧ್ಯ.

ಪರಿಹಾರ ಇಲ್ಲ
ಹಿಂದೊಮ್ಮೆ ರಾಜ್ಯಸರಕಾರ ಕೊಳೆ ರೋಗಕ್ಕೆ ಪರಿಹಾರ ಒದಗಿಸಿತ್ತು. ಅದು ಎಲ್ಲ ಬೆಳೆಗಾರರಿಗೆ ನ್ಯಾಯಯುತವಾಗಿ ಸಿಕ್ಕಿಲ್ಲ. ಕೇಂದ್ರ ಸರಕಾರ 180 ಕೋಟಿ ರೂ. ಬೆಂಬಲ ಬೆಲೆ ಘೋಷಿಸಿ ಎರಡು ವರ್ಷವಾಗಿದೆ. ಅದು ಏನಾಗಿದೆ ಅನ್ನುವ ಮಾಹಿತಿ ಯಾರಿಗೂ ಇಲ್ಲ. ಇಲ್ಲಿ ಸರಕಾರಗಳ ಪರಿಹಾರ ನಂಬಿದರೆ ಅದು ಬೆಳೆಗಾರನ ಅರ್ಜಿ ಖರ್ಚಿಗೂ ಸಾಲದು. ಹೀಗಾಗಿ ಈ ಬಾರಿ ಬದುಕು ಹೇಗೆ ಎಂಬ ಚಿಂತೆ ಬೆಳೆಗಾರನ ಮುಂದಿದೆ. 

ಸುಳ್ಯದ ಅರಂತೋಡು, ಮರ್ಕಂಜ, ಕಲ್ಮಡ್ಕ, ಬಾಳಿಲ, ಮಂಡೆಕೋಲು, ಬೆಳ್ಳಾರೆ, ಪೆರುವಾಜೆ, ಜಾಲ್ಸೂರು ನಾನಾ ಭಾಗದಲ್ಲಿ ಇದು ವ್ಯಾಪಿಸಿದೆ. ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸಹಿತ ದ.ಕ. ಜಿಲ್ಲೆಯಲ್ಲಿ 17 ಸಾವಿರಕ್ಕೂ ಅಧಿಕ ಹೆಕ್ಟೇರ್‌ ತೋಟ ಕೊಳೆರೋಗಕ್ಕೆ ಒಳಗಾಗಿದೆ ಎಂಬ ವರದಿ ಇದೆ. ಇದು ಇಲಾಖೆ ಸಮೀಕ್ಷೆ ತಯಾರಿಸಿದ ಮಾಹಿತಿ. ಕ್ಷೇತ್ರ ಅಧ್ಯಯನದ ಬಳಿಕ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Advertisement

12ಕ್ವಿಂಟಲ್‌ ಹೆಕ್ಕಿ ಆಗಿದೆ
ಕೊಳೆರೋಗದಿಂದ ಅಡಿಕೆ ಮರದ ಬುಡದಲ್ಲಿ ಕಾಯಿ ಅಡಿಕೆ ತುಂಬಿದೆ. ದಿನ ಬೆಳೆಗಾದರೆ ರಾಶಿಗಟ್ಟಲೇ ಇರುತ್ತದೆ. ಈಗಾಗಲೇ 12 ಕ್ವಿಂಟಲ್‌ ಗೂ ಮಿಕ್ಕಿ ಅಡಿಕೆ ಹೆಕ್ಕಿ ಆಗಿದೆ. ತೋಟ ಸಂಪೂರ್ಣ ನಾಶವಾಗಲಷ್ಟೇ ಬಾಕಿ ಇದೆ. ಈ ಬಾರಿ ಜೀವನ ನಿರ್ವಹಣೆ ಸವಾಲಿನದ್ದು.
 - ಶುಭಕುಮಾರ್‌ ಬಾಳೆಗುಡ್ಡೆ
    ಅಡಿಕೆ ಬೆಳೆಗಾರ

 ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next