Advertisement

ಹಲವೆಡೆ ಭಾರೀ ಗಾಳಿ ಮಳೆ, ಸಿಡಿಲಿಗೆ ನಾಲ್ವರು ಬಲಿ,ಜನಜೀವನ ಅಸ್ತವ್ಯಸ್ತ

12:43 PM May 15, 2017 | Team Udayavani |

ವಿಜಯಪುರ/ಗದಗ: ರಾಜ್ಯದ ಬಾಗಲಕೋಟೆ, ಬಳ್ಳಾರಿ, ಗದಗ, ವಿಜಯಪುರ ಜಿಲ್ಲೆಗಳಲ್ಲಿ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಿಡಿಲು, ಗುಡುಗಿಗೆ ಹಾಗೂ ಬಂಡೆಕಲ್ಲು ಉರುಳಿ ಬಿದ್ದು ಸಾವು, ನೋವು ಸಂಭವಿಸಿರುವ ಘಟನೆ ನಡೆದಿದೆ.

Advertisement

ಬರದಿಂದಾಗಿ ಕಂಗೆಟ್ಟಿದ್ದ ವಿಜಯಪುರ ಜಿಲ್ಲೆಯ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಗದಗದಲ್ಲಿ ನೀರಿನ ರಭಸಕ್ಕೆ ಕೆಎಸ್ ಆರ್ ಟಿಸಿ ಬಸ್ ಕೊಚ್ಚಿ ಹೋದ ಘಟನೆ ಸಂಭವಿಸಿದೆ. ತಾಳಿಕೋಟೆ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಮೈಲೇಶ್ವರದಲ್ಲಿ ಭಾರೀ ಮಳೆಗೆ ನಿರ್ಮಾಣ ಹಂತದಲ್ಲಿದ್ದ ರಸ್ತೆ ಕೊಚ್ಚಿ ಹೋಗಿ, ಗ್ರಾಮದೊಳಕ್ಕೆ ನೀರು ನುಗ್ಗಿದೆ. ಇದರಿಂದಾಗಿ ಗ್ರಾಮದ ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ವಿಜಯಪುರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಆಲ್ಟೋ ಕಾರೊಂದು ನೀರಿನಲ್ಲಿ ಕೊಚ್ಚಿ ಹೋಗಿದೆ. ಗೋನಾಳ ಗ್ರಾಮದಲ್ಲಿ ಮರಗಳು ಧರೆಗುರುಳಿ ಬಿದ್ದಿರುವುದಾಗಿ ವರದಿ ತಿಳಿಸಿದೆ.

ಬಳ್ಳಾರಿಯಲ್ಲಿ ಬಂಡೆ ಕುಸಿದು ಬಾಲಕ ಸಾವು:
ಭಾರೀ ಮಳೆಗೆ ಮನೆ ಮೇಲೆ ಗುಡ್ಡದ ಮೇಲಿದ್ದ ಬಂಡೆ ಕುಸಿದು ಬಿದ್ದು 12 ವರ್ಷದ ಭೀಮ ಎಂಬ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಳ್ಳಾರಿಯ  ನಾಗಲಕೆರೆ ಎಂಬಲ್ಲಿ ನಡೆದಿದೆ.  

ಭಟ್ಕಳದಲ್ಲಿ ಸಿಡಿಲು ಬಡಿದು ಗರ್ಭಿಣಿ ಬಲಿ:
ಸಿಡಿಲು ಬಡಿದು 22 ವರ್ಷದ ಸೂಫಿಯಾ ಎಂಬ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಭಟ್ಕಳ ತಾಲೂಕಿನ ಪಿರ್ದೋಸ್ ನಗರದಲ್ಲಿ ನಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಬಾಗಲಕೋಟೆಯಲ್ಲಿ 9 ವರ್ಷದ ಬಾಲಕಿ ಸಾವು:
ಬಾಗಲಕೋಟೆಯಲ್ಲಿ ಭಾರೀ ಗಾಳಿ ಮಳೆಗೆ ಮನೆಯ ಮೇಲಿನ ತಗಡು ಹಾಗೂ ಕಲ್ಲು ಮೈಮೇಲೆ ಬಿದ್ದು ದೀಪಾ ಕಡೆಮನೆ ಎಂಬ 9 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.

ಮನೆ ಮೇಲೆ ಮರ ಬಿದ್ದು ಮನೆಯ ಗೋಡೆ ಕುಸಿದ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ನಡೆದಿದೆ. ಶಿರಾದ ನ್ಯಾಯಗೆರೆಯಲ್ಲಿ 30 ಮನೆಗಳಿಗೆ ಹಾನಿಯುಂಟಾಗಿದೆ. ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದಿದೆ. 

ರಾಜ್ಯಾದ್ಯಂತ ಇನ್ನೂ ಐದು ದಿನ ಮಳೆ: ಹವಾಮಾನ ಇಲಾಖೆ
ರಾಜ್ಯಾದ್ಯಂತ ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಮಾಹಿತಿ ನೀಡಿದ್ದು, ಇದು ಮುಂಗಾರು ಮಳೆಯಲ್ಲ. ಬೇಸಿಗೆಯ ಮಳೆಯಾಗಿದೆ. ಮುಂಗಾರು ಜೂನ್ 1 ಅಥವಾ 2ರ ಬಳಿಕ ಪ್ರವೇಶಿಸಲಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next