Advertisement

ಆಶ್ಲೇಷಾ ರೌದ್ರಾವತಾರ

08:21 AM Aug 12, 2019 | Team Udayavani |

ಈ ಬಾರಿ ಆಶ್ಲೇಷಾ ನಕ್ಷತ್ರ ಭಾರೀ ಮಳೆಯನ್ನೇ ಸುರಿಸಿದೆ. ಇದರ ಪರಿಣಾಮವಾಗಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಪ್ರವಾಹವನ್ನು ಉಂಟುಮಾಡಿವೆ.ಕರಾವಳಿಯ ಜೀವನದಿ ನೇತ್ರಾವತಿ 45 ವರ್ಷಗಳ ಬಳಿಕ ಮತ್ತೂಮ್ಮೆ ಉಗ್ರ ರೂಪ ತೋರಿದ್ದಾಳೆ. ನೇತ್ರಾವತಿಯ ಈ ಮಹಾನೆರೆಗೆ ಬಂಟ್ವಾಳದ ಜನತೆ ತತ್ತರಿಸಿದೆ. ನೂರಾರು ಮನೆಗಳು ಜಲಾವೃತವಾಗಿದ್ದು, ಸಾವಿರಾರು ಎಕರೆ ಭೂಮಿಯ ಕೃಷಿ ಹಾನಿಗೊಂಡಿದೆ. ನೆರೆ ಪೀಡಿತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ರಾಜ್ಯದ ಕೆಲವು ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದ್ದು, ರಕ್ಷಣಾ ಕಾರ್ಯಕ್ಕೆ ಸರಕಾರದ ಜತೆ ಸ್ಥಳೀಯರು ಕೈಜೋಡಿಸಿದ್ದಾರೆ. ಮನೆ-ಮಠ ಕಳೆದುಕೊಂಡಿರುವ ಜನರು ನಿರಾಶ್ರಿತರ ಕೇಂದ್ರಗಳ‌ಲ್ಲಿ ಆಶ್ರಯ ಪಡೆದಿದ್ದಾರೆ.

Advertisement

ಮಣಿಪಾಲ: ಅರಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವಣ ನೂರು -ನೂರೈವತ್ತು ಕಿಲೋ ಮೀಟರ್‌ ಅಗಲದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭೂಭಾಗ ಕಂಡುಕೇಳರಿಯದ ಮಳೆ- ನೆರೆಯಿಂದ ಅಕ್ಷರಶಃ ಬಸವಳಿದಿದೆ. ನಾಲ್ಕೈದು ದಿನಗಳಿಂದ ಮಲೆನಾಡು, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳ ಜತೆಗೆ ಕರಾವಳಿಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಘಟ್ಟದಲ್ಲಿ ಹುಟ್ಟಿ ಅರಬೀ ಸಮುದ್ರ ಸೇರುವ ಎಲ್ಲ ನದಿ, ಹೊಳೆ, ಹಳ್ಳ, ತೊರೆಗಳು ಉಕ್ಕಿಹರಿಯು ತ್ತಿವೆ. ತಮ್ಮ ಸಹಜ ಪಾತ್ರ ಸಾಲದೆ ಎಲ್ಲ ಜಲ ಮೂಲಗಳು ಕೂಡ ಮನಸೋಇಚ್ಛೆ ಮುನ್ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿವೆ.

ಅತಿ ಹೆಚ್ಚು ಹಾನಿ, ನಾಶ ನಷ್ಟವನ್ನು ಅನುಭವಿಸಿ ರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳು. ಬೆಳ್ತಂಗಡಿ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳು ನೇತ್ರಾವತಿ ನದಿ ಮತ್ತದರ ಉಪನದಿಗಳಲ್ಲಿ ಹರಿದುಬಂದ ನೀರಿನ ರಾಶಿಯಿಂದ ನಲುಗಿ ಹೋಗಿವೆ. ದಿಡುಪೆ, ಮಲವಂತಿಗೆ, ನೆರಿಯ, ಆನಡ್ಕ, ಎರ್ಮಾಯಿ, ಬಡಾಜೆಗಳಲ್ಲಿ ಅಕ್ಷರಶಃ ನೆರೆನೀರಿನ ರೌದ್ರ ನರ್ತನವೇ ಕಂಡುಬಂದಿದೆ. ಜನಜೀವನ ಸ್ತಬ್ಧವಾಗಿದ್ದು, 125 ಕೋಟಿ ರೂ.ಗಳಷ್ಟು ನಷ್ಟವಾಗಿವೆ ಎಂದು ಅಂದಾಜಿಸಲಾಗಿದೆ. ನದಿ ತೊರೆಗಳಲ್ಲಿ ಪ್ರವಾಹದ ಜತೆಗೆ ಹರಿದು ಬಂದ ಮಣ್ಣು ನೂರಾರು ಎಕರೆ ಕೃಷಿ ಭೂಮಿಯನ್ನು ಮಟ್ಟಸವಾಗಿಸಿದೆ. ಹಳ್ಳಿಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ, ವಿದ್ಯುತ್‌ ಸಂಪರ್ಕ ಕಡಿದು ಕಗ್ಗತ್ತಲು ಆವರಿಸಿದೆ.

ಕರಾವಳಿಯಿಂದ ಹೊರಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ, ಶಿರಾಡಿ ಘಾಟಿಗಳಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದೆ. ಸಂಪಾಜೆ ರಸ್ತೆ ಕೂಡ ಅಪಾಯದಿಂದ ಮುಕ್ತವಾಗಿಲ್ಲ. ಸುಳ್ಯ ತಾಲೂಕಿನಲ್ಲಿಯೂ ಕೆಲವೆಡೆ ನೆರೆ ಪರಿಸ್ಥಿತಿ ಇತ್ತು. ಸುಬ್ರಹ್ಮಣ್ಯ ಭಾಗದಲ್ಲಿ ಕೆಲವೆಡೆ ಭೂಕುಸಿತ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಉಕ್ಕಿಹರಿದು ಆತಂಕ ಸ್ಥಿತಿ ನಿರ್ಮಾಣವಾಗಿತ್ತು.

ನೇತ್ರಾವತಿ ನದಿ ಉಪನದಿಗಳನ್ನು ಕೂಡಿಕೊಂಡು ಮುಂದುವರಿಯುವ ಎಲ್ಲ ತಾಲೂಕುಗಳಲ್ಲಿಯೂ ಸದ್ಯ ಇದೇ ಪರಿಸ್ಥಿತಿ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಶುಕ್ರವಾರ ರಾತ್ರಿ ಸಂಗಮಿಸಿದ ಬಳಿಕ ನೇತ್ರಾವತಿಯ ಪಾತ್ರದ ಆಸುಪಾಸಿನಲ್ಲಿ ಬಂಟ್ವಾಳ, ಮಂಗಳೂರು ತಾಲೂಕಿನ ಬಹುತೇಕ ಗ್ರಾಮಾಂತರ ಭಾಗಗಳು ಶನಿವಾರ ದಿನವಿಡೀ ಮತ್ತು ರಾತ್ರಿಯ ತನಕವೂ ನೆರೆನೀರಿನಲ್ಲಿ ಮುಳುಗಿದವು. ಶನಿವಾರ ಬೆಳಿಗ್ಗಿನ ವೇಳೆ ಕಡಲುಬ್ಬರವೂ ಇದ್ದುದರಿಂದ ಹರಿದುಬಂದ ನೀರು ಸಮುದ್ರಕ್ಕೆ ಸೇರಲು ತಡೆಯಾಗಿ ಮಂಗಳೂರು ನಗರ ಮತ್ತು ಹೊರವಲಯ ಸ್ವಲ್ಪ ಕಾಲ ಆತಂಕವನ್ನು ಎದುರಿಸಿತು.

Advertisement

ಉಡುಪಿ ಜಿಲ್ಲೆಯ ಕೊಲ್ಲೂರು, ಕುಂದಾಪುರ, ಕಾಪು, ಬೈಂದೂರು ಸಹಿತ ವಿವಿಧೆಡೆಯ ಗ್ರಾಮೀಣ ಭಾಗಗಳಲ್ಲಿ ಕೂಡ ಆತಂಕಕಾರಿ ನೆರೆ ಪರಿಸ್ಥಿತಿ ನಿರ್ಮಾಣವಾಗಿ ಜನತೆ ಕಣ್ಣೀರುಗರೆಯುವಂತೆ ಮಾಡಿದೆ. ಕುಂದಾಪುರದಿಂದ ಮಲೆನಾಡು, ಬಯಲು ಸೀಮೆಯನ್ನು ಸಂಪರ್ಕಿಸುವ ರಸ್ತೆಗಳು ಸಂಪರ್ಕ ಕಳೆದುಕೊಂಡಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿ ಕಣ್ಣು ಹಾಯಿಸಿದಲ್ಲೆಲ್ಲ ಕಾಣಿಸುವುದು ನೂರಾರು ಎಕರೆ ಕೃಷಿ ಜಮೀನು ಕೆನ್ನೀರಿನ ಬಯಲಾಗಿರುವುದೇ.

ಇನ್ನೊಂದೆಡೆ ಅರಬೀ ಸಮುದ್ರವೂ ಸುಮ್ಮನಿಲ್ಲ; ಸಂಕಷ್ಟ ಹೆಚ್ಚುವಂತೆ ಮಾಡಿದೆ. ಬೈಂದೂರಿನಿಂದಾರಂಭಿಸಿ ಮಲ್ಪೆ, ಕಟಪಾಡಿ, ಪಡುಬಿದ್ರಿ, ಸಸಿಹಿತ್ಲು, ಸೋಮೇಶ್ವರದ ವರೆಗೆ ಅಬ್ಬರಿಸುತ್ತಿರುವ ಕಡಲು ತೀರದ ಹಲವು ಮೀಟರ್‌ಗಳಷ್ಟು ಕೊರೆದು ಮುನ್ನುಗ್ಗಿ ಬಂದಿದೆ.

ಕೊಡಗಿನಲ್ಲಿ ಮತ್ತೆ ಸಂಕಷ್ಟ
ಕೊಡಗಿನಲ್ಲಿ ಕಳೆದ ವರ್ಷ ಜನತೆ ಕಣ್ಣೀರ್ಗರೆಯುವಂತೆ ಮಾಡಿದ್ದ ಮಳೆ ಈ ಬಾರಿಯೂ ಅನಾಹುತಗಳನ್ನು ಸೃಷ್ಟಿಸಲಾರಂಭಿಸಿದೆ. ಶುಕ್ರವಾರ ಗುಡ್ಡ ಕುಸಿತಕ್ಕೆ ಏಳು ಮಂದಿ ಬಲಿಯಾಗಿದ್ದರು. ಶುಕ್ರವಾರ ಮತ್ತೆ ಹಲವು ಗುಡ್ಡಗಳು ಕುಸಿದಿವೆ. ಪ್ರಮುಖ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ.

45 ವರ್ಷಗಳ ಬಳಿಕ ಭೀಕರ ನೆರೆ
ಬಂಟ್ವಾಳ: ಮತ್ತೆಂದೂ ಅಂತಹ ನೆರೆ ಬರಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಬರೋಬ್ಬರಿ 45 ವರ್ಷಗಳ ಬಳಿಕ ಮತ್ತೂಂದು ಮಹಾನೆರೆಗೆ ಬಂಟ್ವಾಳದ ಜನತೆ ಶನಿವಾರ ಸಾಕ್ಷಿಯಾಯಿತು. 1974ರಲ್ಲಿ ಬಂಟ್ವಾಳವನ್ನು ಮಹಾನೆರೆ ತಲ್ಲಣಿಸಿತ್ತು. ಎಷ್ಟೋ ಜನರು ಇನ್ನೂ ಅಂದಿನ ಆತಂಕದ ದಿನಗಳನ್ನು ಜ್ಞಾಪಿಸಿಕೊಂಡರೆ ಈಗಲೂ ಬೆಚ್ಚಿ ಬೀಳುತ್ತಿದ್ದಾರೆ. ಅಂದು ನೇತ್ರಾವತಿ ನೀರಿನ ಮಟ್ಟ 13 ಮೀಟರ್‌ ದಾಟಿತ್ತು. ಸಾವಿರಾರು ಜನರ ಬದುಕು ಕೊಚ್ಚಿ ಹೋಗಿತ್ತು. ಶನಿವಾರ ಮತ್ತೆ ಅದೇ ಆತಂಕ ಸೃಷ್ಟಿಯಾಗಿತ್ತು. ಶುಕ್ರವಾರ ಸಂಜೆ ಬಳಿಕ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ಜೀವನದಿ ನೇತ್ರಾವತಿ ರಾತ್ರಿ ಇಡೀ ಪರಿಸರದ ಜನತೆಯ ನಿದ್ದೆಗೆಡಿಸಿತ್ತು. ನೀರು ಹಂತ ಹಂತವಾಗಿ ಏರುತ್ತಲೇ ಇತ್ತು. ಬೆಳಗ್ಗೆ 11.6 ಮೀಟರ್‌ ವರೆಗೆ ಏರಿದ ಬಳಿಕ ನೇತ್ರಾವತಿ ದಯೆ ತೋರಿದಳು. ಕೊನೆಗೂ ಜನರು ನಿಟ್ಟುಸಿರುಬಿಟ್ಟರು. 1974ರ ಬಳಿಕ ಉಂಟಾದ ಮಹಾ ನೆರೆ ಇದಾಗಿದೆ. ಕಳೆದ ವರ್ಷ 10.6 ಮೀಟರ್‌ ಎತ್ತರ ನೆರೆ ಏರಿತ್ತು.

ಕೊಟ್ಟಿಗೆಹಾರ: ದೇಶದಲ್ಲಿಯೇ ಗರಿಷ್ಠ ಮಳೆ
ಶನಿವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿಯೇ ಗರಿಷ್ಠ ಮಳೆ ಸುರಿದಿರುವುದು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ. ಒಂದೇ ದಿನದಲ್ಲಿ 57 ಸೆಂ.ಮೀ. ದಾಖಲೆಯ ಮಳೆಯಾಗಿದೆ. ಈ ಹಿಂದಿನ ಎರಡೂ ದಿನಗಳಲ್ಲಿ ತಮಿಳುನಾಡಿನ ನೀಲಗಿರಿ ಅಂಚಿನಲ್ಲಿರುವ ಅವಲಾಂಚಿಯಲ್ಲಿ ಅನುಕ್ರಮವಾಗಿ 91 ಮತ್ತು 82 ಸೆಂ.ಮೀ. ಮಳೆಯಾಗಿತ್ತು. ಕಳೆದ 24 ತಾಸುಗಳಲ್ಲಿ ಅವಲಾಂಚಿಯಲ್ಲಿ 35 ಸೆಂ.ಮೀ. ಮಳೆಯಾಗಿತ್ತು.

ಬಸ್‌ ದಾಟುತ್ತಿದ್ದಂತೆ ಕುಸಿದ ಸೇತುವೆ: ಪ್ರಯಾಣಿಕರು ಪಾರು
ಹೆಬ್ರಿ: ಶಿವಮೊಗ್ಗದಿಂದ ಆಯನೂರು ಹಣಗೇರಿ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಸೇತುವೆ ದಾಟುತ್ತಿದ್ದಂತೆ ಸೇತುವೆ ಮುರಿದು ಬಿದ್ದಿದ್ದು, ಭಾರೀ ಅಪಾಯದಿಂದ ಪಾರಾಗಿದೆ.
ಶುಕ್ರವಾರ ರಾತ್ರಿ 1 ಗಂಟೆಗೆ ಮಂಗಳೂರಿಗೆ ಹೊರಟ ಬಸ್‌ ಮಂಡಗದ್ದೆ ತಲುಪಿದಾಗ ರಸ್ತೆ ಜಲಾವೃತವಾಗಿತ್ತು. ಪರ್ಯಾಯ ಮಾರ್ಗವಾಗಿರುವ ಆಯನೂರು ಹಣಗೇರಿ ಮೂಲಕ ಮುಂದುವರಿದಿದ್ದು, ಕನ್ನಂಗಿ ಸೇತುವೆ ದಾಟುತ್ತಿದ್ದಂತೆ ಅಲ್ಲಿಯೂ ರಸ್ತೆ ಮೇಲೆ ನೀರು ತುಂಬಿಕೊಂಡಿದ್ದರಿಂದ ಎಂಜಿನ್‌ಗೆ ನೀರು ನುಗ್ಗಿ ಬಸ್‌ ಸ್ಥಗಿತವಾಯಿತು. ಆಗ ಶಬ್ದವಾಗಿದ್ದು, ಹಿಂದಿರುಗಿ ನೋಡಿದರೆ ಸೇತುವೆ ಕುಸಿದದ್ದು ಗೊತ್ತಾಯಿತು
ಎಂದು ಉಜಿರೆಯ ವೈದ್ಯಕೀಯ ವಿದ್ಯಾರ್ಥಿನಿ ಪ್ರಜ್ಞಾ ಉದಯವಾಣಿಗೆ ತಿಳಿಸಿದ್ದಾರೆ.

ಬಸ್‌ನಲ್ಲಿ 20 ಮಂದಿ ಪ್ರಯಾಣಿಕರಿದ್ದು ಸುತ್ತಲೂ ನೀರು ತುಂಬಿಕೊಂಡಿದ್ದರಿಂದ ಕೆಳಗಿಳಿಯಲು ಅವಕಾಶವಿರಲಿಲ್ಲ. ಅನ್ಯದಾರಿ ಕಾಣದೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ನೆರವು ಯಾಚಿಸಿದೆವು. ಸುಮಾರು 3 ಗಂಟೆಗಳ ಬಳಿಕ ಆಗಮಿಸಿದ ಪೊಲೀಸರು ಹಾಗೂ ರಕ್ಷಕ ಪಡೆಯವರು ರೋಪ್‌ ಚೈನ್‌ ಬಳಸಿ ಒಬ್ಬೊಬ್ಬರನ್ನೇ ಇನ್ನೊಂದು ಬಸ್‌ಗೆ ವರ್ಗಾಯಿಸಿ ಮಂಗಳೂರಿನತ್ತ ಕಳುಹಿಸಿದರು ಎಂದು ವಿವರಿಸಿದ್ದಾರೆ.

ನೀರಕಟ್ಟೆ ಪವರ್‌ ಪ್ರಾಜೆಕ್ಟ್ ಮುಳುಗಡೆ
ಉಪ್ಪಿನಂಗಡಿ: ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಜಲ ವಿದ್ಯುತ್‌ ಉತ್ಪಾದನ ಘಟಕ ಸಾಗರ್‌ ಪವರ್‌ ಪ್ರಾಜೆಕ್ಟ್ ಅಣೆಕಟ್ಟು ಪ್ರದೇಶ ಶುಕ್ರವಾರ ತಡ ರಾತ್ರಿ ಸಂಪೂರ್ಣ ಜಲಾವೃತ ಆಗಿದ್ದು, ಘಟಕದ ಒಳಗಡೆ ಇರುವ ವಿದ್ಯುತ್‌ ಉತ್ಪಾದನೆಯ 3 ಜನರೇಟರ್‌ ಮತ್ತು ಇತರ ಯಂತ್ರಗಳು ಮುಳುಗಿವೆ.
ಸುಮಾರು 1 ಕೋಟಿ ರೂಪಾಯಿ ನಷ್ಟವಾಗಿದೆ. ಕನಿಷ್ಠ 3 ತಿಂಗಳುಗಳ ಕಾಲ ವಿದ್ಯುತ್‌ ಉತ್ಪಾದನೆ ಸ್ಥಗಿತ ಆಗಲಿದ್ದು, ಒಟ್ಟಾರೆ 6 ಕೋಟಿ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next