ರಾಯಚೂರು: ಜಿಲ್ಲೆಯಲ್ಲಿ ವರುಣಾರ್ಭಟ ಶುಕ್ರವಾರ ರಾತ್ರಿಯೂ ಮುಂದುವರಿದಿದ್ದು ನಗರ ಮತ್ತು ಗ್ರಾಮೀಣ ಭಾಗದ ಜನರ ಬದುಕು ಅಸ್ತವ್ಯಸ್ತಗೊಂಡಿದೆ.
ಶುಕ್ರವಾರ ರಾತ್ರಿಯೂ ಗುಡುಗು ಸಹಿತ ಭಾರೀ ಪ್ರಮಾಣದ ಮಳೆ ಸುರಿದಿದೆ. ಇದರಿಂದ ನಗರದ ಕೆಲ ವಾರ್ಡ್ ಗಳಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಜಲಾಲ್ ನಗರ, ಸಿಯಾತಲಾಬ್, ಜಹಿರಾಬಾದ್ ಹೊಸೂರು ಸೇರಿದಂತೆ ವಿವಿಧ ಬಡಾವಣೆಗಳಿಗೆ ನೀರು ನುಗ್ಗಿದೆ. ಇನ್ನೂ ಬೆಳಗಿನ ಜವಾದವರೆಗೂ ನೀರು ಎತ್ತಿ ಹಾಕುವುದೇ ಜನರ ಕಾಯಕವಾಗಿದ್ದು ಜಾಗರಣೆ ಮಾಡುವಂತಾಗಿತ್ತು.
ತಗ್ಗು ಪ್ರದೇಶಗಳಿಗೆ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಶನಿವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಕೂಡಲೇ ಗಂಜಿ ಕೇಂದ್ರಗಳನ್ನು ತೆರಯುವಂತೆ ಸೂಚಿಸಿದರು.
ಇದನ್ನೂ ಓದಿ: ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ
ಇನ್ನೂ ಗ್ರಾಮೀಣ ಭಾಗದಲ್ಲೂ ಮಳೆ ಅವಾಂತರ ಜೋರಾಗಿದೆ. ಎಲ್ಲೆಡೆ ಜೋರು ಮಳೆಯಾಗಿದ್ದರಿಂದ ಜಮೀನುಗಳಿಗೆ ನೀರು ನುಗ್ಗಿದೆ. ಹಳ್ಳ ಕೊಳ್ಳಗಳು ತುಂಬಿ ಹರಿದು ಸಂಚಾರ ಕಡಿತಗೊಂಡಿದೆ.ತೊಗರಿ ಹತ್ತಿ ಬೆಳೆಯೆಲ್ಲ ಜಲಾವ್ರತಗೊಂಡಿದ್ದು, ರೈತರನ್ನು ಕಂಗೆಡಿಸಿದೆ. ಸತತ ಮಳೆಗೆ ಹತ್ತಿ ಕಾಯಿ ಹೂ ಉದುರುತ್ತಿದ್ದರೆ, ತೊಗರಿ ಬೆಳೆ ಹಣ್ಣರೆಯುತ್ತಿದೆ.
ಇನ್ನೂ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಕಾಲುವೆ ಹೊಡೆದಿರುವ ಘಟನೆ ರಾಯಚೂರು ತಾಲೂಕಿನ ಯರಗುಂಟದಲ್ಲಿ ನಡೆದಿದೆ. ಈಗಾಗಲೇ ಎನ್‌ಆರ್‌ಬಿಸಿ ಕಾಲುವೆ ನೀರು ಹರಿಸಲಾಗುತ್ತಿದೆ. ಇದರ ಜತೆಗೆ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕಾಲುವೆ ಹೊಡೆದು ನಾಲೆಯ ನೀರು ಪೋಲು ಆಗುತ್ತಿವೆ. ನಾಲೆಯ ಸುತ್ತಮುತ್ತಲು ರೈತರ ಹೊಲಗಳಿಗೆ ನೀರು ನುಗ್ಗಿ ಬೆಳಯ ನೀರಿನ ಕೊಚ್ಚಿ ಹೋಗುತ್ತಿದೆ. ಭತ್ತ ಮೆಣಸಿನಕಾಯಿ, ಹತ್ತಿ, ತೊಗರಿ ಹಾಳಾಗಿದೆ.
ರಾಯಚೂರು ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ರಾಯಚೂರು ಹೋಬಳಿಯಲ್ಲಿ 83.6 ಮಿಮೀ, ಯರಮರಸ್ ನಲ್ಲಿ 59.5 ಮಿಮೀ, ಯರಗೇರಾ ಹೋಬಳಿಯಲ್ಲಿ 56 ಮಿಮೀ, ಕಲಮಲ ಹೋಬಳಿಯಲ್ಲಿ 84 ಮಿಮೀ, ಜೇಗರಕಲ್ ಹೋಬಳಿಯಲ್ಲಿ 112 ಮಿಮೀ ಮಳೆಯಾದರೆ ದೇವಸೂಗುರು ಹೋಬಳಿಯಲ್ಲಿ 50 ಮಿಮೀ ಮಳೆಯಾಗಿದೆ.