Advertisement

Heavy Rain Capital: ಒಂದೂವರೆ ದಿನ ಸುರಿದ ಮಳೆಗೆ ಬೆಂಗಳೂರು ತತ್ತರ

03:26 AM Oct 16, 2024 | Team Udayavani |

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ವ್ಯಾಪಕ ಮಳೆ ಸುರಿಯುತ್ತಿದ್ದು, ಸೋಮವಾರ ತಡ ರಾತ್ರಿಯಿಂದ ಎಡೆಬಿಡದೆ ಸುರಿದ ವರ್ಣಾರ್ಭಟಕ್ಕೆ ರಾಜಧಾನಿ ಬೆಂಗಳೂರು ಮಂಗಳವಾರ ಅಕ್ಷರಶಃ ಮಳೆಯೂರಿನಿಂತಾಗಿತ್ತು. ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನ ತನಕ ಮಳೆ ಸುರಿದ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳು ನೀರು ತುಂಬಿ ಹೊಳೆಯಂತಾಗಿದ್ದವು.

Advertisement

ಕೆ.ಆರ್‌.ಮಾರುಕಟ್ಟೆ, ಓಕಳಿಪುರಂ ಅಂಡರ್‌ ಪಾಸ್‌, ಹೆಬ್ಟಾಳ, ರಾಚೇನಹಳ್ಳಿ, ಬೆಳ್ಳಂದೂರು ಕೆರೆ ರಸ್ತೆ ಸೇರಿದಂತೆ ಹಲವು ಭಾಗದ ರಸ್ತೆಗಳಲ್ಲಿ ನೀರು ತುಂಬಿದ ಹಿನ್ನೆಲೆಯಲ್ಲಿ ವಾಹನ ಸವಾರರು ಭಯದಲ್ಲೇ ಸಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂಜಾನೆ ಕೆಲಸಕ್ಕೆ ತೆರಳುತ್ತಿದ್ದ ಜನರಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚಾರ ದಟ್ಟಣೆಯ ಕಿರಿಕಿರಿ ಅನುಭವಿಸಿದರು.

ಅಂಡರ್‌ಪಾಸ್‌ ಬಳಿ ಕೆಟ್ಟು ನಿಂತ ಆಟೋ:
ಓಕಳೀಪುರ ಅಂಡರ್‌ ಪಾಸ್‌ ಒಳಗೆ ನೀರು ತುಂಬಿದ್ದ ಹಿನ್ನೆಲೆಯಲ್ಲಿ ಆಟೋಗಳು ಕೆಟ್ಟು ನಿಂತ ದೃಶ್ಯಗಳು ಕಂಡು ಬಂದವು. ರಾಚೇನಹಳ್ಳಿ ಸಮೀಪ ರಸ್ತೆಯಲ್ಲಿ ನೀರು ಉಕ್ಕಿಹರಿದಿದ್ದರಿಂದ ಸವಾರರು ಬೈಕ್‌ ತಳ್ಳುತ್ತಾ ಸಾಗುವ ಪರಿಸ್ಥಿತಿ ಉಂಟಾಗಿತ್ತು. ಕೆಲವು ಕಡೆಗಳಲ್ಲಿ ಮರಗಳು, ಕೊಂಬೆಗಳು ಧರೆಗುರುಳಿದ್ದು, ಎಚ್‌ಎಂಟಿ ಲೇಔಟ್‌ನಲ್ಲಿ ಕಾರಿನ ಮೇಲೆ ಮರ ಉರುಳಿ ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪಾಲಿಕೆ ಅಧಿಕಾರಿಗಳು ಕೂಡಲೇ ಮರ ತೆರವುಗೊಳಿಸಿದರು. ನೀರು ನಿಂತ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹೋಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿದರು. ಸರ್ಕಾರ ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಆದರೆ, ಮಳೆ ಬಂದರೆ ಇಡೀ ನಗರ “ದಿಢೀರ್‌ ಪ್ರವಾಹ’ (ಫ್ಲಾಶ್‌ಫ್ಲಡ್‌)ಗೆ ಸಿಲುಕುತ್ತದೆ. ಪ್ರತಿಬಾರಿ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಯೋಜನೆಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಾರೆ. ಅದು ಮಂಗಳವಾರವೂ ಕಂಡು ಬಂದಿತು.

ಈ ವೇಳೆ ಮಾತನಾಡಿದ ವಾಹನ ಸವಾರರು, ಮಳೆ ಬಂದರೆ ಓಕಳೀಪುರ ಅಂಡರ್‌ ಪಾಸ್‌ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ನಿಲ್ಲಲಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಮತ್ತು ಸರ್ಕಾರ ಶಾಶ್ವತ ಪರಿಹಾರ ನೀಡುತ್ತಿಲ್ಲ ಎಂದು ದೂರಿದರು. ರಾತ್ರಿ ವೇಳೆ ಮಳೆ ಬಂದರೆ ಅಂಡರ್‌ ಪಾಸ್‌ ಒಳಗೆ ರಸ್ತೆ ಗೊತ್ತಾಗುವುದಿಲ್ಲ. ಜೀವ ಬೀಗಿಹಿಡಿದು ಓಡಾಡುವ ಪರಿಸ್ಥಿತಿ ಇದೆ. ಪಾಲಿಕೆ ಅಧಿಕಾರಿಗಳ ಇತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಕೋಡಿಗೆಹಳ್ಳಿ ಅಂಡರ್‌ ಪಾಸ್‌ನಲ್ಲಿ ಕೂಡ ಸರಾಗವಾಗಿ ಹರಿದು ಹೋಗದ ಹಿನ್ನೆಲೆಯಲ್ಲಿ ಅಂಡರ್‌ ಪಾಸ್‌ ಬಳಿ ನೀರು ನಿಂತಿತ್ತು. ಪಣತ್ತೂರು ಅಂಡರ್‌ ಪಾಸ್‌ ನೀರು ನಿಂತಿದ್ದರಿಂದ ಸವಾರರು, ಚಾಲಕರು ಸರ್ಕಸ್‌ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

Advertisement

ಕಾಮರಾಜ ರಸ್ತೆಯಲ್ಲಿ ರಾಜಕಾಲುವೆ ನೀರು:
ಶಿವಾಜಿನಗರ ಸಮೀಪದ ಕಾಮರಾಜ ರಸ್ತೆ ಬಳಿ ರಾಜಕಾಲುವೆ ಉಕ್ಕಿಹರಿಯುವ ಸ್ಥಿತಿ ನಿರ್ಮಾಣವಾಗಿದ ª ಹಿನ್ನೆಲೆಯಲ್ಲಿ ರಾಜಕಾಲುವೆ ಬಳಿ ನೆಲೆಸಿರುವ ಸ್ಥಳೀಯರು ಪ್ರಾಣ ಭಯದಲ್ಲಿ ದಿನಕಳೆಯುವ ಪರಿಸ್ಥಿತಿ ಉಂಟಾಗಿತ್ತು. ರಾಜಕಾಲುವೆ ನದಿ ನೀರಿನ ಜತೆಗೆ ಚರಂಡಿ ನೀರು ಸೇರಿ ಉಕ್ಕಿ ಹರಿದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಆತಂಕದಲ್ಲಿ ದಿನ ಕಳೆದರು. ಗುಟ್ಟಹಳ್ಳಿ ಸರ್ಕಲ್‌ನಲ್ಲಿ ಮ್ಯಾನ್‌ಹೋಲ್‌ ನೀರು ರಸ್ತೆಯಲ್ಲಿ ಉಕ್ಕಿಹರಿಯಿತು.

ಡಿಸಿ ಕಚೇರಿ ಬಳಿಯ ಹೋಟೆಲ್‌ಗೆ ನುಗ್ಗಿದ ನೀರು:
ಕೆ.ಜಿ.ರಸ್ತೆಯ ಬಳಿಯಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಬಳಿಯಲ್ಲಿರುವ ಹೋಟೆಲ್‌ಗೆ ಮಳೆ ನೀರು ನುಗ್ಗಿತ್ತು. ಮಾನ್ಯತಾ ಟೆಕ್‌ ಪಾರ್ಕ್‌ನ ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯಿತು. ಹೀಗಾಗಿ ಟೆಕ್‌ ಪಾರ್ಕ್‌ನ ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ಕಾರುಗಳು ನೀರಿನಲ್ಲಿ ಸಿಲುಕ್ಕಿದ್ದ ದೃಶ್ಯ ಕಂಡು ಬಂತು. ಬೆಳ್ಳಂದೂರು ಲೇಕ್‌ ರಸ್ತೆಯಲ್ಲಿ ಕೆಸರು ಮಯವಾಗಿತ್ತು. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿದ್ದು ಕೆಸರಿನ ರಸ್ತೆಯಲ್ಲಿ ಸಂಚಾರಿಸಲು ವಾಹನ ಸವಾರರು ಪರದಾಡಿದರು. ಸುಮಾರು 2 ಕಿ.ಮೀ. ಸಂಚಾರ ಸಾಧ್ಯ ಆಗದೆ ಸಂಚಾರದಟ್ಟಣೆ ಉಂಟಾಗಿತ್ತು. ಮಳೆ ನೀರಿನ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಹಲವು ವಾಹನಗಳು ಕೆಟ್ಟು ನಿಂತು ಫಜೀತಿ ಉಂಟಾಗಿತ್ತು. ಆಳವಾದ ಗುಂಡಿ ಭಾಗಕ್ಕೆ ಬ್ಯಾರಿಕೇಡ್‌ ಅಳವಡಿಸಲಾಗಿತ್ತು.

ಎನ್‌.ಸಿ. ಕಾಲೋನಿ ಸಂಪೂರ್ಣ ಜಲಾವೃತ
ಮಳೆಗೆ ಫ್ರೇಜರ್‌ ಟೌನ್‌ ಬಳಿ ಇರುವ ಎನ್‌.ಸಿ. ಕಾಲೋನಿ ಸಂಪೂರ್ಣ ಜಲಾವೃತಗೊಂಡಿತ್ತು. ರಾಜಕಾಲುವೆ ಉಕ್ಕಿ ಹರಿದು ಎನ್‌.ಸಿ. ಕಾಲೋನಿಗೆ ಕೊಚ್ಚೆ ನೀರು ನುಗ್ಗಿತ್ತು. ನೀರು ತೆರವು ಮಾಡಲು ಸ್ಥಳೀಯ ನಿವಾಸಿಗಳ ಪರದಾಟ ನಡೆಸಿದರು. ರಾಜಕಾಲುವೆಗೆ ಅಂಟಿಕೊಂಡೇ ಇರುವ ಎನ್‌.ಸಿ. ಕಾಲೋನಿ ಬಡಾವಣೆ ಇದಾಗಿದ್ದು ಆ ಹಿನ್ನೆಲೆಯಲ್ಲಿ ಜನರು ಸಂಕಷ್ಟ ಪಡಬೇಕಾಯಿತು.

ವಡ್ಡರ ಪಾಳ್ಯ ಬಳಿಯ ಸಾಯಿ ಲೇಔಟ್‌ನಲ್ಲಿ ರಾಜಕಾಲುವೆ ನೀರು ನುಗ್ಗಿದ್ದ ಹಿನ್ನೆಲೆಯಲ್ಲಿ ಜನರು ಪರದಾಟ ನಡೆಸಿದರು. ವಿಧಾನ ಸೌಧದ ಕೂಗಳೆತೆ ದೂರದಲ್ಲಿರುವ ಶಿವಾಜಿನಗರದ, ಬ್ರಹ್ಮಕುಮಾರಿ ವೃತ್ತ , ಸೆಪ್ಪಿಂಗ್‌ ರಸ್ತೆ ಸಂಪೂರ್ಣ ಜಲಾವೃತವಾಗಿದ್ದವು. ರಸ್ತೆಯಲ್ಲಿ ಮೊಣಕಾಲುದ್ದ ನೀರು ತುಂಬಿದ್ದು, ಅಂಗಡಿಗಳು, ದೇವಸ್ಥಾನಗಳಿಗೆ ನೀರು ನುಗ್ಗಿತು. ಪಾಟರಿ ಟೌನ್‌ ಬಳಿಯ ಗಾಂಧಿ ಗ್ರಾಮದ ರಸ್ತೆಯಿಂದ ಟ್ಯಾನಿರೋಡ್‌ಗೆ ಸಂಪರ್ಕಿಸುವ ರಸ್ತೆ ಕರೆಯಂತಾಗಿತ್ತು. ಯಲಹಂಕದಲ್ಲಿರುವ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್‌ ಮತ್ತೆ ಜಲಾವೃತಗೊಂಡಿತ್ತು.

ರಸ್ತೆ, ಅಂಡರ್‌ಪಾಸ್‌ಗಳಲ್ಲಿ ನೀರು: ಕೆಟ್ಟು ನಿಂತ 2 ವಾಹನ
ಟೆಕ್‌ ಪಾರ್ಕ್‌ನ ರಸ್ತೆಗಳೆಲ್ಲ ಜಲಾವೃತಗೊಂಡಿದ್ದವು. ಕಾರುಗಳು ನೀರಿನಲ್ಲಿ ಸಿಲುಕ್ಕಿದ್ದ ದೃಶ್ಯ ಕಂಡು ಬಂತು. ಕೆ.ಆರ್‌.ಮಾರುಕಟ್ಟೆ, ಹೆಬ್ಟಾಳ, ರಾಚೇನಹಳ್ಳಿ, ಬೆಳ್ಳಂದೂರು ಕೆರೆ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು, ಓಕಳಿಪುರಂ ಅಂಡರ್‌ ಪಾಸ್‌, ಪಣತ್ತೂರು ಅಂಡರ್‌ ಪಾಸ್‌, ಕೋಡಿಗೆಹಳಿ ಜಲಾವೃತವಾಗಿದ್ದವು. ಮೆಜೆಸ್ಟಿಕ್‌ ಬಳಿಯ ಓಕಳಿಪುರ ಅಂಡರ್‌ಪಾಸ್‌ನಲ್ಲಿ ನೀರು ನಿಂತು 2 ವಾಹನಗಳು ಕೆಟ್ಟುನಿಂತಿದ್ದವು. ಆಟೋ ಎಂಜಿನ್‌ ಒಳಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಆಟೋ ಸ್ಥಳದಲ್ಲೆ ನಿಂತಿತ್ತು.

ಬೆಂಗಳೂರಿನ ಅರ್ಧಭಾಗ ಭಾರೀ ಟ್ರಾಫಿಕ್‌ ಜಾಮ್‌
ಆಗಾಗ್ಗೆ ಸುರಿದು ಹೋಗುತ್ತಿದ್ದ ಮಳೆಯಿಂದಾಗಿ ಸಿಲಿಕಾನ್‌ ಸಿಟಿಯ ಹಲವು ರಸ್ತೆಗಳು ಹೊಳೆಯಂತಾಗಿದ್ದವು. ಹೀಗಾಗಿ ಹೆಬ್ಟಾಳ, ಕಾರ್ಪೋರೆಷನ್‌ ಸರ್ಕಲ್‌, ಶಾಂತಿನಗರ ಡಬಲ್‌ ರೋಡ್‌, ಬನ್ನೇರುಘಟ್ಟ ರಸ್ತೆ, ಹೊಸೂರು ರೋಡ್‌, ಅರಮನೆ ರಸ್ತೆ, ನೆಲಮಂಗಳ ರಸ್ತೆ ಹಾಗೂ ವಿಧಾನ ಸೌಧದ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು. ಮಳೆ ಆರ್ಭಟಕ್ಕೆ ಯಶವಂತಪುರ, ಗೊರಗುಂಟೆಪಾಳ್ಯ ಸುತ್ತ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಎಲ್ಲಿ ನೋಡಿದರಲ್ಲಿ ಸಂಚಾರ ದಟ್ಟಣೆ ಕಂಡು ಬಂತು. ನಗರ ಸಂಚಾರ ಪೋಲಿಸರು ಸಂಚಾರ ದಟ್ಟಣೆಯನ್ನು ಸರಿದಾರಿಗೆ ತರಲು ಪರಿತಪಿಸಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಗೆ ಸಾಗುವವರು ಬೆಂಗಳೂರು ಟ್ರಾಫಿಕ್‌ ಕಿರಿಕಿರಿ ಅನುಭವಿಸಿದರು.

39 ಮರ, 55 ಕೊಂಬೆಗಳು ಧರೆಗೆ; ಕಾರು ಜಖಂ
ಬಿಬಿಎಂಪಿ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಮರಗಳು, ರಂಬೆ-ಕೊಂಬೆಗಳು ನೆಲಕ್ಕುರಳಿದವು. ಎಚ್‌ಎಂಟಿ ಲೇಔಟ್‌ನಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ಬೃಹದಾಕಾರದ ಮರ ಧರೆಗುರುಳಿದ್ದು, ಮನೆ ಮುಂದಿ ನಿಲ್ಲಿಸಿದ ಕಾರು ಜಖಂ ಆಗಿದೆ.  ಆರ್‌.ವಿ.ಡೆಂಟಲ್‌ ಕಾಲೇಜು ಬಳಿ ರಸ್ತೆ ಬದಿಯಲ್ಲಿ ಶಿಥಿಲ ಆಗಿದ್ದ ದೊಡ್ಡ ಗಾತ್ರದ ಮರದ ಕೊಂಬೆ ರಸ್ತೆಗೆ ಉರುಳಿದೆ. ಬಸ್‌ ಸಂಚರಿಸುವ ಪ್ರದೇಶದಲ್ಲಿ ಮರ ಬಿದ್ದಿದ್ದು ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. ಜಯನಗರ ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಮರದ ರಂಬೆ ಕೊಂಬೆಗಳು ಬಿದ್ದಿವೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 39 ಮರಗಳು ಧರೆಗುರಳಿದ್ದ ಬಗ್ಗೆ ದೂರು ದಾಖಲಾಗಿದ್ದು, 26 ಮರಗಳನ್ನು ತೆರವು ಮಾಡಲಾಗಿದೆ. ಹಾಗೆಯೇ 55 ಕಡೆಗಳಲ್ಲಿ ಮರದ ರೆಂಬೆಕೊಂಬೆಗಳು ಧರೆಗುರುಳಿದ್ದು, ಇದರಲ್ಲಿ 28 ಮರಗಳನ್ನು ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶಾಲೆ ಬಸ್‌ ಮುಳುಗಡೆ, ನೀರಿನಲ್ಲಿ ಸಿಲುಕಿದ ಮಕ್ಕಳು!
ನಗರದ ಹೊರವರ್ತುಲ ರಸ್ತೆಯ ಪಣತೂರು ಸಮೀಪದ ಬಳಗೇರೆ ಬಳಿ ವಾಗ್ಧಾವಿ ವಿಲಾಸ ಶಾಲೆಯ ಬಸ್‌ ನೀರಿನಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ವಾಹನದೊಳಗಿಂದಲೇ ರಸ್ತೆಯಲ್ಲಿದ್ದ ಮಳೆ ನೀರು ಕಂಡು ಅಳಲು ಆರಂಭಿಸಿದರು. ಅರ್ಧ ಬಸ್‌ ಮುಳುಗಿದ್ದ ಹಿನ್ನೆಲೆಯಲ್ಲಿ ಅಪಾಯವನ್ನು ಅರಿತ ಚಾಲಕ ವಾಪಸ್‌ ಹಿಂದಕ್ಕೆ ಸ್ಕೂಲ್‌ ಬಸ್‌ ತೆಗೆದುಕೊಂಡು ಬಂದಿದ್ದಾನೆ.

ಬಳಿಕ ಪೋಷಕರು ಮಕ್ಕಳನ್ನು ಬಸ್‌ನಿಂದ ಇಳಿಸಿಕೊಳ್ಳಲು ರಸ್ತೆಗೆ ಬಂದಿದ್ದು, ಸುರಕ್ಷಿತ ಸ್ಥಳಕ್ಕೆ ಮಕ್ಕಳು ಬಂದ ಬಳಿಕ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ವಾಗ್ಧಾಳಿ ವಿಲಾಸ ಶಾಲೆಯ ಸುತ್ತಮುತ್ತ ಮೊಣಕಾಲು ತನಕ ನೀರು ನಿಂತಿರುವ ದೃಶ್ಯ ಕಂಡು ಬಂತು. ಆರೇಳು ಶಾಲಾ ವಾಹನಗಳು ಕೆಲಕಾಲ ನೀರಿನಲ್ಲಿ ಮುಳುಗಿದ್ದವು. ರಸ್ತೆಯ ತುಂಬೆಲ್ಲಾ ನೀರಿದ್ದ ಹಿನ್ನೆಲೆಯಲ್ಲಿ ಯಾವುದು ರಸ್ತೆ ಎಂಬುವುದೇ ತಿಳಿಯದಂತಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next