Advertisement

ಕುಂಭದ್ರೋಣ ಮಳೆಗೆ ತತ್ತರಿಸಿದ ಬೆಂಗಳೂರು,ಮೈಸೂರು; 2 ಬಲಿ

10:26 AM Sep 27, 2017 | |

 ಬೆಂಗಳೂರು : ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಗ್ಗಿನವರೆಗೆ ಸುರಿದ ಕುಂಭದ್ರೋಣ  ಮಳೆಗೆ ಸಿಲಿಕಾನ್‌ ಸಿಟಿ ಬೆಂಗಳೂರು,ದಸರಾ ಸಂಭ್ರಮದಲ್ಲಿದ್ದ ಮೈಸೂರು ತತ್ತರಿಸಿ ಹೋಗಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿ ಜನರು ಪರದಾಡುತ್ತಿದ್ದಾರೆ. 

Advertisement

ವಿದ್ಯುತ್‌ ಶಾಕ್‌ಗೆ ಮಹಿಳೆ ಬಲಿ 

ಕೆ.ಆರ್‌.ಪುರಂನ ಆರ್‌ಎಂಎಸ್‌ ಬಡಾವಣೆಯಲ್ಲಿ ಮನೆಗೆ ನೀರು ನುಗ್ಗಿ ವಿದ್ಯುತ್‌ ಶಾಕ್‌ಗೀಡಾಗಿ ಮೀನಮ್ಮ ಎಂಬ ವೃದ್ಧೆ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಕರೆಂಟ್‌ ಹೋಗಿದ್ದ ವೇಳೆ ಯುಪಿಎಸ್‌ ಏಕಾಏಕಿ ಆನ್‌ ಆಗಿ ಶಾಕ್‌ ಹೊಡೆದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 

ಗೋಡೆ  ಕುಸಿದು ವ್ಯಕ್ತಿ ಸಾವು 

ಬೆಂಗಳೂರು ಉತ್ತರ ತಾಲೂಕಿನ ಆಲೂರು ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಅವಶೇಷಗಳಡಿ  ಸಿಲುಕಿ ನಾರಾಯಣಪ್ಪ(48 ) ಎನ್ನುವವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಾದನಾಯಕನ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

ದಸರಾ ಸಂಭ್ರಮಕ್ಕೆ ವರುಣನ ಅವಕೃಪೆ 

ಬೆಂಗಳೂರು ಮಾತ್ರವಲ್ಲದೆ ಮೈಸೂರಿನಲ್ಲೂ ಭಾರಿ ಮಳೆಯಾಗಿದ್ದು, ನಗರದ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ದಸರಾ ಸಂಭ್ರಮದಲ್ಲಿದ್ದ ಅರಮನೆ ನಗರಿಯಲ್ಲಿ ಪ್ರವಾಸಿಗರ ಸಂಭ್ರಮಕ್ಕೆ ಭಾರಿ ಮಳೆ ತಡೆಯೊಡ್ಡಿದೆ. ಇನ್ನೆರಡು ದಿನ ಭಾರಿ ಮಳೆಯಾಗುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದ್ದು , ಆಗಮಿಸಲು ಸಿದ್ದರಾಗಿದ್ದ ಪ್ರವಾಸಗರು ಮತ್ತು ವಿವಿಧ ಕಾರ್ಯಕ್ರಮಗಳಿಗೆ ತೀವ್ರ ಅಡಚಣೆಯಾಗಲಿದೆ. ಅನೇಕ ವೇದಿಕೆಗಳು ಜಲಾವೃತವಾಗಿದ್ದು, ಸ್ಟಾಲ್‌ಗ‌ಳಿಗೂ ಹಾನಿಯಾಗಿದೆ. 

ಶ್ರೀರಾಂಪುರ ಬಡಾವಣೆ ಸಂಪೂರ್ಣ ಜಲಾವೃತವಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ಅಗ್ನಿಶಾಮಕ ದಳದ ಸಿಬಂದಿಗಳು ಬೋಟ್‌ ಮೂಲಕ ರಕ್ಷಣೆ ಮಾಡಿದ್ದಾರೆ. ನರಗದ ವಿವಿಧೆಡೆ ರಸ್ತೆಗಳು ಕೆರೆಯಂತಾಗಿವೆ. ಹಲವು ತಗ್ಗು ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗ್ಗಿದೆ.

ಬೆಂಗಳೂರಿನ ಕೋರಮಂಗಲ,ನೆಲಮಂಗಲ, ಜೆ.ಪಿ.ನಗರ, ವೈಟ್‌ಫೀಲ್ಡ್‌ , ಯವವತಪುರ ಸೇರಿದಂತೆ ಉತ್ತರ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು ತಗ್ಗು ಪ್ರದೇಶಗಳು ಜಲಾವೃತ್ತವಾಗಿ ಜನ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿವಿಧೆಡೆ ಕೆರೆಗಳ ಕೊಡಿ ಒಡೆದಿದ್ದು ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ. ರಸ್ತೆಗಳಲ್ಲಿ ಮೊಣಕಾಲಿನವರೆಗೆ ನೀರು ನಿಂತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಹಲವು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. 

ವಿಜಯನಗರದ ಅತ್ತಿಗುಪ್ಪೆಯಲ್ಲಿ ಕಾಲೇಜೊಂದರ ಕಂಪೌಂಡ್‌ ಕುಸಿದು ಬಿದ್ದು 9 ಕಾರು, 2 ಬೈಕ್‌ಗಳು ಸಂಪೂರ್ಣ ಜಖಂ ಗೊಂಡಿವೆ. 

ನೆಲಮಂಗಲ ಭಾಗದಲ್ಲಿ ಭಾರಿ ಮಳೆ ಸುರಿದ್ದಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ಗಿಡ್ಡೇನ ಹಳ್ಳಿಯಲ್ಲಿ ಕೋಳಿ ಫಾರ್ಮ್ ಒಂದಕ್ಕೆ ನೀರು ನುಗ್ಗಿ 10 ಸಾವಿರ ಕೋಳಿಗಳು ಸಾವನ್ನಪ್ಪಿವೆ. ಮಾಲೀಕ ಅಣ್ಣಪ್ಪಯ್ಯಗೆ 15 ಲಕ್ಷ ನಷ್ಟ ಸಂಭವಿಸಿದ್ದು ಕಂಗಾಲಾಗಿದ್ದಾರೆ. 

ಕೊಪ್ಪಳ, ಕೊಳ್ಳೆಗಾಲದಲ್ಲೂ ಮಳೆ 

ಕೊಪ್ಪಳದಲ್ಲೂ ಭಾರಿ ಮಳೆಯಾಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಚಾಮರಾಜನಗರ, ಕೊಳ್ಳೆಗಾಲದಲ್ಲೂ ಮಳೆ ಸುರಿದು ಅಪಾರ ಬೆಳೆ ಹಾನಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next