ಯಳಂದೂರು: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಸುವರ್ಣವತಿ ಹೊಳೆಯು ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದ 3 ಸೇತುವೆಗಳು ಮುಳುಗಡೆಯಾಗಿದ್ದು, ಇದರಿಂದ ಈ ಗ್ರಾಮಗಳಿಗೆ ಸಂಚಾರ ದುಸ್ತರವಾಗಿದ್ದು ಇಲ್ಲಿನ ನಾಗರಿಕರು ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.
ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳು ತುಂಬಿ ಹೆಚ್ಚುವರಿ ನೀರನ್ನು ನಾಲೆಗಳ ಮೂಲಕ ಬಿಡಲಾಗಿದೆ. 5 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಬಿಟ್ಟಿರುವ ಪರಿಣಾಮ ಅಂಬಳೆ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಂಚಾರಿಸುವ ಸೇತುವೆ, ಮದ್ದೂರು ಗ್ರಾಮದಿಂದ ಅಲ್ಕೆರೆ ಅಗ್ರಹಾರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ, ಯಳಂದೂರಿನಿಂದ ಅಂಬಳೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ. ಇದರೊಂದಿಗೆ ತಾಲೂಕಿನ ಗಣಿಗನೂರು ಗ್ರಾಮದ ಬಳಿ ನೀಲಕಂಠೇಶ್ವರ ದೇಗುಲಕ್ಕೆ ಸಂಪರ್ಕ ಕಡಿತಗೊಂಡಿದೆ.
ಇದರ ಹಿಂಭಾಗದಲ್ಲಿ ರುವ ನಡುಹೊಳೆ ಮಾರಮ್ಮ ದೇಗುಲ ಮುಳುಗಿದೆ. ಯಳಂದೂರು ಪಟ್ಟಣದಿಂದ ಕಾರಾಪುರ ವಿಕ್ತಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ನೀರಿನಲ್ಲಿ ಮುಳುಗಿದೆ. ಗಣಿಗನೂರು, ಚಾಮಲಾಪುರ, ಯರಿಯೂರು, ಗ್ರಾಮಗಳಲ್ಲಿ ನಷ್ಟದ ಪ್ರಮಾಣ ಹೆಚ್ಚಾಗಿದೆ. ಕೆಲವೆಡೆ ಶಿಥಿಲ ಮನೆಗಳ ಗೋಡೆಗಳೂ ಕೂಡ ಕುಸಿದು ಬಿದ್ದಿವೆ.
ಶುಕ್ರವಾರ ಮಳೆ ಕೊಂಚಬಿಡುವು ನೀಡಿದ್ದರೂ ಸಹ ನದಿಯಲ್ಲಿನ ನೀರಿನ ಪ್ರವಾಹ ಹೆಚ್ಚಾಗಿರುವುದರಿಂದ ನದಿಪಾತ್ರದ ಗ್ರಾಮಗಳ ಮನೆಗಳು, ಜಮೀನು ಹೊಂದಿರುವ ರೈತರಿಗೆ ಅಪಾರ ನಷ್ಟವಾಗಿದೆ.
ಸುವರ್ಣಾವತಿ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಹಾಗಾಗಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಇದನ್ನು 2 ಸಾವಿರ ಕ್ಯೂಸೆಕ್‌ಗೆ ತಗ್ಗಿಸಲಾಗುವುದು. ಆಗ ಪ್ರವಾಹದ ಭೀತಿ ಕಡಿಮೆಯಾಗಲಿದೆ.
-ಆನಂದಪ್ಪ ನಾಯಕ್, ತಹಶೀಲ್ದಾರ್, ಯಳಂದೂರು