ಉಡುಪಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯ ಹಲವೆಡೆ ಮನೆಗಳು ಜಲಾವೃತಗೊಂಡಿದೆ.
ರವಿವಾರ ಹಾಗೂ ಸೋಮವಾಯ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಸೋಮವಾರ ಮುಂಜಾನೆ ಭಾರೀ ಮಳೆಯ ನಡುವೆಯೇ ಮಕ್ಕಳು ಶಾಲೆಗೆ ತೆರಳಿದ ದೃಶ್ಯಕಂಡು ಬಂತು.
ನಗರದ ಗುಂಡಿಬೈಲು, ದೊಡ್ಡಣಗುಡ್ಡೆ, ಮಠದಬೆಟ್ಟು, ಕರಂಬಳ್ಳಿ ಮೊದಲಾದ ಕಡೆಗಳಲ್ಲಿ ಮಕ್ಕಳು ಶಾಲೆಗೆ ವಿಪರೀತ ತೊಂದರೆ ಅನುಭವಿಸಿದರು.
ಮಳೆಯ ನೆರೆಯಲ್ಲೇ ಕಷ್ಟದಿಂದ ಮಕ್ಕಳು ಶಾಲೆಗೆ ತೆರಳಿದ್ದು, ಪೋಷಕರು ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋದರು. ಮಕ್ಕಳು ನೆರೆಯಲ್ಲಿ ಆತಂಕದಿಂದ ಶಾಲೆಗೆ ತೆರಳಿದ್ದು ಉಡುಪಿ ಸ್ಥಳೀಯಾಡಳಿತ ರಜೆ ಘೋಷಣೆ ಮಾಡದೆ ಇರುವುದರಿಂದ ಕೆಲ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶಾಲಾ ಬಸ್ಸೊಂದು ಮಳೆಯ ನೀರಿನಲ್ಲಿ ಸಿಲುಕಿಕೊಂಡು ಕೆಲ ನಿಮಿಷ ಟ್ರಾಫಿಕ್ ಜಾಮ್ ಉಂಟಾಯಿತು. ಮಳೆಯ ನಡುವೆಯೇ ಪೋಷಕರು ಮಕ್ಕಳನ್ನು ಕಷ್ಟದಿಂದ ಶಾಲೆಗೆ ಕಳುಹಿಸಿದ್ದು, ಕೆಲಕಡೆ ಬಸ್ ಗಳು ಸರಿಯಾದ ಸಮಯಕ್ಕೆ ಬಾರದೆ ತೊಂದರೆ ಉಂಟಾಯಿತು.