ಬೆಂಗಳೂರು : ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಮಂಗಳವಾರ ಧಾರಾಕಾರ ಮಳೆಯಾಗಿದೆ. ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 12 ಸೆಂ.ಮೀ. ಮಳೆಯಾಗಿದೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ವಾಗಣಗೇರಿ ಗ್ರಾಮದಲ್ಲಿ ಕುರಿಗಾಹಿಯೊಬ್ಬ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಮೈಸೂರಿನಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಮರಗಳು ಧರೆಗುರುಳಿದ್ದರೆ, ಸೇತುವೆಯೊಂದು ಕುಸಿದು ಕೆಲ ಬಡಾವಣೆಗಳಿಗೆ ನೀರು ನುಗ್ಗಿದೆ. ಬೋಗಾದಿಯ ಮರಿಯಪ್ಪನ ಕೆರೆ ತುಂಬಿ ಹರಿದ ಕಾರಣ ರಾಜಕಾಲುವೆಯಲ್ಲಿ ಅಧಿಕ ಪ್ರಮಾಣದ ನೀರು ಹರಿದಿದ್ದರಿಂದ ಬೋಗಾದಿಯ ನಾಗಲಿಂಗೇಶ್ವರ ದೇಗುಲದ ಹಿಂಭಾಗದ ಸೇತುವೆ ಕೊಚ್ಚಿ ಹೋಗಿದೆ. ಪರಿಣಾಮ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಲ್ಲಿ ನೀರಿನ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಮತ್ತು ಇಳಿಕೆ ಕಂಡು ಬರುತ್ತಿದೆ. ಕಳೆದ ಐದಾರು ದಿನಗಳಿಂದ ಕೇರಳದಲ್ಲಿ ಕೊಂಚ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವಿನಲ್ಲಿ ಗಣನೀಯವಾಗಿ ಏರಿಕೆ ಕಂಡು ಬರುತ್ತಿದೆ.
ದ್ರಾಕ್ಷಿ ಬೆಳೆ ನಾಶ: ಚಿಕ್ಕಬಳ್ಳಾಪುರ ನಗರ ಸೇರಿ ಜಿಲ್ಲೆಯಾದ್ಯಂತ ಮಂಗಳವಾರ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆಯ ಆರ್ಭಟಕ್ಕೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಹಲವೆಡೆ ಚರಂಡಿಯ ನೀರು ರಸ್ತೆಗೆ ಹರಿದುಬಂದಿತ್ತು. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದ್ರಾಕ್ಷಿ ಸೇರಿ ಇನ್ನಿತರ ಬೆಳೆಗಳು ನಾಶವಾಗಿದ್ದು ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಸಿಡಿಲಿಗೆ ಓರ್ವ ಬಲಿ: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಮಂಗ್ಯಾಳ ಗ್ರಾಮದಲ್ಲಿ ಕುರಿ ಮೇಯಿಸುತ್ತಿದ್ದ ನಿಂಗಪ್ಪ ಬೀಮಣ್ಣ ಹಿರೇಕುರುಬರ (36) ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಮೃತನ ಜತೆಯಲ್ಲಿದ್ದ ಕುರಿಗಾಯಿ ಪರಶುರಾಮ ಹಣಮಂತ ಕಟ್ಟಿಮನಿ ಮತ್ತು ಚಿನ್ನಯ್ಯ ದೇವಿಂದ್ರಪ್ಪ ಕೆಂಗೂರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿ ತಾಲೂಕಿನಾದ್ಯಂತ ಸೋಮವಾರ ತಡರಾತ್ರಿ ನಿರಂತರ ಮಳೆಯಾಗಿದ್ದು, ಮಂಗಳವಾರವೂ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಮಳೆಯಾಗಿದೆ. ಜಿಲ್ಲೆಯಾದ್ಯಂತ ಸುರಿದ ಗಾಳಿ ಮಳೆಗೆ 10ಕ್ಕೂ ಅಧಿಕ ಮನೆಗಳಿಗೆ, ಕುಂದಾಪುರ ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ಕೆಲವು ಮನೆಗಳಿಗೆ ಸಿಡಿಲು ಬಡಿದು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಗುರುವಾರ ಬೆಳಗ್ಗೆವರೆಗಿನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಹಾಗೂ ಉತ್ತರ ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ : ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವ ಗುರಿ : ಯಾರಿಗೂ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ : HDK