ರಾಮನಗರ: ಜಿಲ್ಲಾದ್ಯಂತ ಭೀಕರ ಮಳೆ ಸುರಿಯಲಾರಂಭಿಸಿದ್ದು, ಲೆಕ್ಕಕ್ಕಿಲ್ಲದಷ್ಟು ರಸ್ತೆ, ಸೇತುವೆ ಕೊಚ್ಚಿ ಹೋಗಿವೆ. ಅವುಗಳ ಸಾಲಿಗೆ ಅರ್ಧ ಶತಮಾನದ ಇತಿಹಾಸ ಹೊಂದಿದ್ದ ಸುಗ್ಗನಹಳ್ಳಿ ಸೇತುವೆ ಕೂಡ ಕೊಚ್ಚಿ ಹೋಗುವ ಮೂಲಕ ಸೇರ್ಪಡೆಯಾದಂತಾಗಿದೆ.
ತಾಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿ ಸೇತುವೆ ನಲವತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸೇತುವೆ ಕೊಚ್ಚಿ ಹೋಗಿದೆ. ಈ ವೇಳೆ ಓರ್ವ ಬೈಕ್ ಸವಾರ ಕೂಡ ಕೊಚ್ಚಿ ಹೋಗಬೇಕಿತ್ತು. ಸ್ಥಳೀಯರ ಸಮಯ ಪ್ರಜ್ಞೆಯಿಂದ ಅವರನ್ನು ರಕ್ಷಿಸಲಾಗಿದೆ. ರಕ್ಷಣೆಗೊಳಗಾದ ವ್ಯಕ್ತಿಯನ್ನು ತಿಮ್ಮಸಂದ್ರ ಗ್ರಾಮದ ಕಂಡಾದಯ್ಯ ಎನ್ನಲಾಗಿದೆ.
ಅವರು ಸೇತುವೆ ಕೊಚ್ಚಿ ಹೋಗುವುದು ಗಮನಕ್ಕಿಲ್ಲದೆ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಬ್ರಿಡ್ಜ್ ಕುಸಿತ ಕಂಡಿದ್ದು, ನೀರಿನಲ್ಲಿದ್ದ ಅವರನ್ನು ಸ್ಥಳೀಯರು ಹಗ್ಗ ಕೊಟ್ಟು ಮೇಲಕ್ಕೆತ್ತಿದ್ದಾರೆ. ಮಳೆ ಹೆಚ್ಚಾದ ಹಿನ್ನೆಲೆ ತಿಪ್ಪಗೊಂಡನಹಳ್ಳಿ ಕೆರೆ ತುಂಬಿದ್ದು ಯಾವುದೇ ಸಂದರ್ಭದಲ್ಲಾದರೂ ಕ್ರಿಸ್ಟ್ ಗೇಟ್ ಮೂಲಕ ನೀರು ಹೊರ ಬಿಡಲಾಗುವುದು ಎಂದು ಸೂಚಿಸಲಾಗಿತ್ತು. ಅಲ್ಲದೆ, ಮಂಚನಬೆಲೆ ಜಲಾಶಯ ಕೂಡ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ನದಿಗೆ ಹರಿಯಬಿಡಲಾಗಿತ್ತು. ಇದರ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ ಎನ್ನಲಾಗಿದೆ.
ಶಿಥಿಲವಾಗಿದ್ದ ಸೇತುವೆ: ಅಕ್ರಮ ಮರಳು ಮಾಫಿಯಾ ದಂಧೆಗೆ ಬಲಿಯಾಗಿದ್ದ ಸೇತುವೆಗಳಲ್ಲಿ ಇದು ಒಂದಾಗಿತ್ತು. ಇತ್ತೀಚಿಗೆ ಸೇತುವೆ ಬಿರುಕು ಬಿಟ್ಟಿತ್ತು. ಇದಷ್ಟೇ ಅಲ್ಲದೆ ಇನ್ನೂ ಹಲವು ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಸಾಧ್ಯತೆ ಇದ್ದು, ನದಿ ಪಾತ್ರದ ಜನತೆ ಸೇತುವೆ ಬಳಸುವಾಗ ಎಚ್ಚರದಿಂದಿರಬೇಕಾಗಿದೆ.
ಸಂಪರ್ಕ ಸೇತುವೆ ಕುಸಿತ: ಹತ್ತಾರು ಗ್ರಾಮಗಳಿಗೆ ಕೇಂದ್ರ ಬಿಂದುವಾಗಿದ್ದ ಸುಗ್ಗನಹಳ್ಳಿಗೆ ಕಟ್ಟಲಾಗಿದ್ದ ಸೇತುವೆ ಹಲವು ಗ್ರಾಮಗಳಿಗೆ ಸಂಪರ್ಕ ಸೇತುವೆಯಾಗಿತ್ತು. ಸುತ್ತಮುತ್ತಲ ಜನತೆ ಸುಗ್ಗನಹಳ್ಳಿಯಲ್ಲಿ ವ್ಯವಹಾರಿಕ ವಹಿವಾಟು ನಡೆಸುತ್ತಿದ್ದರು. ಬ್ಯಾಂಕ್ ಆಸ್ಪತ್ರೆ ಸೊಸೈಟಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಸೇತುವೆ ಕೂಡ ಇದಾಗಿತ್ತು. ಇದೀಗ ಕುಸಿದು ಹೋಗಿದ್ದು, ಹಲವು ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಕೂಡಲೇ ತಾತ್ಕಾಲಿಕವಾಗಿ ವ್ಯವಸ್ಥೆ ಕಲ್ಪಸಬೇಕು. ಅಲ್ಲದೆ, ಶಾಶ್ವತ ಸೇತುವೆ ನಿರ್ಮಾಣಕ್ಕೆ ಕೂಡಲೇ ಚಾಲನೆ ಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಾವು ಮಳೆ ಬರುತ್ತಿದ್ದರಿಂದ ಎಲ್ಲೂ ಹೋಗಿಲ್ಲ. ಅಲ್ಲದೆ ಮಂಚನಬೆಲೆ ಡ್ಯಾಂನಿಂದ ನೀರು ಹರಿಯ ಬಿಟ್ಟಿದ್ದರು. ಇನ್ನೂ ಹೆಚ್ಚಿನ ನೀರು ಬಿಡುವ ಸಾಧ್ಯತೆ ಇದೆ ಎಂದು ಮಾಹಿತಿ ಕೂಡ ನೀಡಿದ್ದರಿಂದ ಸ್ಥಳೀಯವಾಗಿ ಯಾರು ಅತ್ತ ಸುಳಿದಿರಲಿಲ್ಲ. ನಾವು ನೊಡ ನೋಡುತ್ತಿದ್ದಂತೆಯೇ ಸೇತುವೆ ಕುಸಿಯಲಾರಂಭಿಸಿತ್ತು. ಅದೇ ವೇಳೆ ಗಾಡಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೋಬ್ಬರು ಸಿಲುಕಿಕೊಂಡಿದ್ದರು. ನಂತರ ಎಲ್ಲರೂ ಹಗ್ಗ ಕೊಟ್ಟು ಮೇಲೆತ್ತಿದರು. ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಸುಗ್ಗನಹಳ್ಳಿ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಕೆ.ಎಂ. ಶಿವರಾಮ್ ತಿಳಿಸಿದರು.