Advertisement

Vijayapura: ಮುಂದುವರೆದ ಮಳೆಯ ಆರ್ಭಟ ಸಿಡಿಲಿಗೆ ಎಮ್ಮೆ-ಕುರಿ ಸಾವು; ಹತ್ತಾರು ಮನೆಗಳು ಕುಸಿತ

07:28 PM Jun 08, 2024 | Team Udayavani |

ವಿಜಯಪುರ: ಭಾರಿ ಆರ್ಭಟದೊಂದಿಗೆ ಜಿಲ್ಲೆಯನ್ನು ಪ್ರವೇಶಿಸಿರುವ ಮೃಗಶಿರ ಮಳೆ ಶನಿವಾರವೂ ಮುಂದುವರೆದಿದೆ. ನಿನ್ನೆ 32.7 ಮಿ.ಮೀ. ಮಳೆಯಾಗಿದ್ದರೆ, ಇಂದು 12.16 ಮಿ.ಮೀ. ಮಳೆಯಾಗಿದೆ. ಸಿಡಿಲಿಗೆ ಎಮ್ಮೆಗಳು ಬಲಿಯಾಗಿದ್ದರೆ, ಭಾರಿ ಮಳೆಗೆ ಹತ್ತಾರು ಮನೆಗಳು ನೆಲಕ್ಕೆ ಉರುಳಿವೆ. ಡೋಣಿ ನದಿ ಸೇರಿದಂತೆ ಹಳ್ಳಗಳು ಮೈದುಂಬಿ ಹರಿಯುತ್ತಿವೆ.

Advertisement

ಅಬ್ಬರದ ಮಳೆಗೆ ಚಡಚಣದಲ್ಲಿ ಶನಿವಾರ ಸಂಜೆ ಬಡಿದ ಸಿಡಿಲಿಗೆ ದುಂಡಪ್ಪ ನಿರಾಳೆ ಎಂಬವರಿಗೆ ಸೇರಿದ ಎಮ್ಮೆ ಸಾವಿಗೀಡಾಗಿದ್ದು, ಪಕ್ಕದಲ್ಲಿದ್ದ ಮೇವಿನ ಬಣವೆಗೂ ಬಂಎಕಿ ಹೊತ್ತಿಕೊಂಡಿದೆ. ಚಡಚಣ ಭಾಗದಲ್ಲೇವಿಠ್ಠಲ ಅಗಸರ ಎಂಬವರಿಗೆ ಸೇರಿದ ಎಮ್ಮೆ ಸಿಡಿಲು ಬಡಿದು ಸಾವಿಗೀಡಾಗಿದೆ.

ಆಲಮೇಲ ತಾಲೂಕಿನ ಕುಮಸಗಿ ಗ್ರಾಮದಲ್ಲಿ ಶರಣಪ್ಪ ಯಂಕಂಚಿ ಎಂಬವರಿಗೆ ಸೇರಿದ ಕುರಿ ಬಲಿಯಾಗಿದೆ. ಜಿಲ್ಲೆ ಗ್ರಾಮೀಣ ಭಾಗದಲ್ಲಿ ಮಳೆಯಿಂದಾಗಿ ಜನ ವಸತಿಯ ಮಣ್ಣಿನ ಕಟ್ಟಡಗಳು ಬೀಳು ಆರಂಭಿಸಿವೆ.

ವಿಜಯಪುರ ಒಂದೇ ಭಾಗದಲ್ಲಿ 8 ಕ್ಕೂ ಹೆಚ್ಚು ಮನೆಗಳು ಮಳೆಯಿಂದಾಗಿ ನೆಲಕ್ಕುರುಳಿವೆ. ಬಸವನಬಾಗೇವಡಿ ತಾಲೂಕಿನ ಯರನಾಳ ಗ್ರಾಮದಲ್ಲಿ ಸಿದ್ದವ್ವ ವಾಲೀಕಾರ ಹಾಗೂ ತಂಗೆವ್ವ ಒಂಟಗುಡಿ ಎಂಬವ ಮನೆಗಳು ಮೇಲ್ಛಾವಣಿ, ಗೋಡೆಗಳು ಬಿದ್ದು ಮನೆಗಳು ಹಾನಿಯಾಗಿವೆ.

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ವರೆಗೆ ಜಿಲ್ಲೆಯಾದ್ಯಂತ 32.7 ಮಿ.ಮೀ. ಮಳೆಯಾಗಿದ್ದರೆ, ಶನಿವಾರ ಬೆಳಗಿನ ವರೆಗೆ ಕಳೆದ 24 ಗಂಟೆಯಲ್ಲಿ ಮತ್ತೆ 12.6 ಮಿ.ಮೀ. ಮಳೆಯಾಗಿದ್ದು, ಸಂಜೆಯ ವರೆಗೂ ಜಿಲ್ಲೆಯ ಹಲವು ಕಡೆಗಳಲ್ಲಿ ಅಲ್ಲಲ್ಲಿ ಮತ್ತೆ ಮಳೆ ಸುರಿದಿದೆ.

Advertisement

ಶನಿವಾರ ಬೆಳಗಿನ ವರೆಗಿನ 24 ಗಂಟೆ ಅವಧಿಯಲ್ಲಿ  ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ 85 ಮಿ.ಮೀ. ಮಳೆಯಾಗಿದ್ದರೆ,  ಕೊಲ್ಹಾರ ತಾಲೂಕಿಕ ಕೂಡಗಿ ಭಾಗದಲ್ಲಿ 70.5 ಮಿ.ಮೀ. ಮಳೆಯಾಗಿದೆ. ಬಬಲೇಶ್ವರ ತಾಲೂಕಿನ ಅರ್ಜುಣಗಿ ಭಾಗದಲ್ಲಿ 61.5 ಮಿ.ಮೀ. ಮಳೆಯಾಗಿದ್ದರೆ, ಸಿಂದಗಿ ತಾಲೂಕಿನ ಗುಬ್ಬೇವಾಡ ಪರಿಸರದಲ್ಲಿ 56.5 ಮಿ.ಮೀ. ಮಳೆ ಸುರಿದಿದೆ.

ಬಸವನಬಾಗೇವಾಡಿ ತಾಲೂಕಿನ ಮಾರ್ಕಬ್ಬನಳ್ಳಿ ಭಾಗದಲ್ಲಿ 53.5 ಮಿ.ಮೀ. ಮಳೆಯಾಗಿದ್ದು, ಯರನಾಳ ಭಾಗದಲ್ಲಿ 48 ಮಿ.ಮೀ. ಮಳೆ ದಾಖಲಾಗಿದೆ. ಇಂಡಿ ತಾಲೂಕಿನ ಲಾಳಸಂಗಿ ಭಾಗದಲ್ಲಿ 44 ಮಿ.ಮೀ. ಮಳೆ ಆಗಿದ್ದು, ಆಲಮೇಲ ತಾಲೂಕಿನ ಮೋರಟಗಿ ಭಾಗದಲ್ಲಿ 36 ಮಿ.ಮೀ. ಹಾಗೂ ಚಡಚಣ ತಾಲೂಕ ಕೇಂದ್ರದ ಸುತ್ತಲೂ 35 ಮಿ.ಮೀ. ಮಳೆಯಾಗಿದೆ.

ಶನಿವಾರವೂ ಮತ್ತೆ ಮಳೆ ಮುಂದುವರೆದಿದ್ದು, ಹಳ್ಳಗಳು ಭರ್ತಿಯಾಗಿ ಮೈದುಂಬಿ ಹರಿಯುತ್ತಿವೆ, ಜಿಲ್ಲೆಯ ಕಣ್ಣೀರ ನದಿ ಡೋಣಿ ಕೂಡ ಕಳೆದ ಎರಡು ದಿನಗಳಿಂದ ತುಂಬಿ ಹರಿಯುತ್ತಿದ್ದು, ಹಲವು ಕಡೆಗಳಲ್ಲಿ ನದಿ ತೀರದ ರೈತರ ಜಮೀನಗೂ ನುಗ್ಗಿದೆ.

Advertisement

Udayavani is now on Telegram. Click here to join our channel and stay updated with the latest news.

Next