Advertisement

Vijayapura: ಮೃಗಶಿರಕ್ಕೆ ಮೈದುಂಬಿದ ನದಿ-ತೊರೆಗಳು: ಅನ್ನದಾತನ ಮೊಗದಲ್ಲಿ ಹರ್ಷ

07:33 PM Jun 07, 2024 | Team Udayavani |

ವಿಜಯಪುರ : ಜಿಲ್ಲೆಯಲ್ಲಿ ಉತ್ತಮವಾಗಿಯೇ ಆರಂಭಗೊಂಡಿರುವ ಮೃಗಶಿರ ಮಳೆ ಬತ್ತಿ ಬರಿದಾಗಿದ್ದ ಹಳಹಳಿಸುತ್ತಿದ್ದ ನದಿ, ಹಳ್ಳ, ತೊರೆಗಳಿಗೆ ಜೀವಚೈನತ್ಯ ನೀಡಿದ್ದು, ಮೈದುಂಬಿ ಹರಿಯುವಂತೆ ಮಾಡಿದೆ. ಜಿಲ್ಲೆಯಲ್ಲಿ ಸುರಿದ ಒಂದೇ ಒಂದು ಅಬ್ಬರದ ಮಳೆ ಜಿಲ್ಲೆಯ ಅನ್ನದಾತನ ಮೊಗದಲ್ಲಿ ಮಂದಹಾಸದ ಮಹಾಪೂರವನ್ನೇ ತಂದಿದೆ.

Advertisement

ಗುರುವಾರ ಸಂಜೆಯಿಂದ ಮಿಂಚು, ಗುಡುಗು-ಸಿಡಿಲಿನೊಂದಿಗೆ ಅಬ್ಬರಿಸುತ್ತಲೇ ಬಂದ ಮೃಗಶಿರ ಮಳೆ ರಾತ್ರಿ ಕತ್ತಲು ಏರುತ್ತಿದ್ದಂತೆ ಅಲ್ಲಲ್ಲಿ ಜೋರಾಗಿ ಸುರಿದಿದೆ. ಪರಿಣಾಮ ಬೊಗಸೆ ನೀರು ಕೊಡಿ ಎಂದು ಮಹಾರಾಷ್ಟ್ರದ ಮುಂದೆ ಕೈಯೊಡ್ಡಿ ನಿಲ್ಲುವಂತಾಗಿದ್ದ ದುಸ್ಥಿತಿಗೆ ತೆರೆ ಎಳೆಯಲು ಮುಂದಾಗಿರುವ ಮಳೆ ಕೃಷ್ಣೆಯ ಒಡಲು ಇದೀಗ ಜೀವಚೈತನ್ಯ ಪಡೆಯುವಂತೆ ಮಾಡಿದೆ.

ಗುರುವಾರದ ವರೆಗೂ ಶೂನ್ಯ ಒಳಹರಿವಿನಿಂದ ಭಣಗುಡುತ್ತಿದ್ದ ಆಲಮಟ್ಟಿ ಬಳಿ ನಿರ್ಮಿಸಿರುವ ಲಾಲ್ ಬಹಾದ್ದೂರ ಶಾಸ್ತ್ರೀ ಜಲಾಶಯಕ್ಕೆ ಕೃಷ್ಣಾ ನದಿಯಿಂದ ಶುಕ್ರವಾರ ಸೂರ್ಯೋದಯದ ಹಂತದಿಂದಲೇ ಒಳ ಹರಿವು ಆರಂಭಗೊಂಡಿದೆ.

ಆಲಮಟ್ಟಿಯ ಶಾಸ್ತ್ರೀ 1768 ಕ್ಯೂಸೆಕ್ ಒಳ ಹರಿವಿದ್ದು, ಶಾಸ್ತ್ರೀ ಜಲಾಶಯದಿಂದ ವಿದ್ಯುತ್ ಉತ್ಪಾದನೆಗಾಗಿ ಕರ್ನಾಟಕ ವಿದ್ಯುತ್ ನಿಗಮದ ಮೂಲಕ ನಾರಾಯಣಪುರದ ಬಸವಸಾಗರ ಜಲಾಶಯ ಸೇರುವಂತಾಗಲು 50 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಮತ್ತೊಂದೆಡೆ ಜಿಲ್ಲೆಯಲ್ಲಿ ಸುರಿದ ಒಂದೇ ಒಂದು ದಿನ ದೊಡ್ಡ ಮಳೆಗೆ ಡೋಣಿ ಕೂಡ ಮೈದುಂಬಿ ಹರಿಯಲಾರಂಭಿಸಿದೆ. ಜಿಲ್ಲೆಯ ತಿಕೋಟ, ಬಬಲೇಶ್ವರ, ವಿಜಯಪುರ, ಬಸವನಾಗೇವಾಡಿ ತಾಲೂಕುಗಳ ಹಲವು ಹಳ್ಳಿಗಳ ರೈತರನ್ನು ಬಾಧಿಸುವ ಕನ್ನಡ ನಾಡಿನ ಕಣ್ಣೀರ ನದಿ ಡೋಣಿ ಕೂಡ ಅಪಾಯದ ಮಟ್ಟ ಮೀರಿಯೇ ಭೋರ್ಗರೆಯುತ್ತಿದೆ.

Advertisement

ಇದಲ್ಲದೇ ಕಳ್ಳಕವಟಗಿ ಗ್ರಾಮದ ಹೊರ ವಲಯದಲ್ಲಿ ಸಂಗಮನಾಥ ದೇವಸ್ಥಾನದ ಬಳಿ ನಿರ್ಮಿಸಿರುವ ಬಾಂದಾರು ಸಂಪೂರ್ಣ ಭರ್ತಿಯಾಗಿದ್ದು, ಸಣ್ಣ ಮಳೆಯಾದರೂ ಕಿರು ಜಲಪಾತದ ರಮ್ಯ ನೋಟವನ್ನು ಸೃಷ್ಟಿಸಲು ಸನ್ನದ್ಧವಾಗಿದೆ.

ಉತ್ತಮ ಮಳೆಯಾಗಿರುವ ಕಾರಣ ಜಿಲ್ಲೆಯಲ್ಲಿ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿದ್ದು, ನೂರಾರು ಗ್ರಾಮಗಳ ನೈಸರ್ಗಿಕ ಹರಿವಿನ ಕೆರೆಗಳು ತುಂಬಿಕೊಳ್ಳಲಾರಂಭಿಸಿವೆ. ಹಲವು ಕೆರೆಗಳು ಒಂದೇ ಮಳೆಗೆ ಬಹುತೇಕ ಭರ್ತಿಯಾಗಿವೆ.

ಮಳೆಯ ಅಬ್ಬರ ಎಷ್ಟಿತ್ತು ಎಂಬುದಕ್ಕೆ ಒಂದೇ ಮಳೆಗೆ ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಲೋಹಗಾಂವಿ ಹಳ್ಳದ ಸೇತುವೇ ಕೊಚ್ಚಿಕೊಂಡು ಹೋಗಿದೆ. ಪರಿಣಾಮ ಕೊಚ್ಚಿಹೋಗಿರುವ ರಸ್ತೆಯ ಮಾರ್ಗಕ್ಕೆ ಅಡ್ಡಲಾಗಿ ದ್ವಿಚಕ್ರ ವಾಹನಗಳು ಇಕ್ಕೆಲಗಳಲ್ಲಿ ಸಾಲುಗಟ್ಟಿದ್ದರಿಂದ ಸಂಚಾರ ಬಂದ್ ಆಗಿತ್ತು. ಸಂಚಾರ ಶುಕ್ರವಾರ ಮಧ್ಯಾಹ್ನದ ವರೆಗೂ ಸಂಚಾರ ಆರಂಭಗೊಂಡಿರಲಿಲ್ಲ.

ವಿಷಯ ತಿಳಿಯುತ್ತಲೇ ಸಚಿವ ಎಂ.ಬಿ.ಪಾಟೀಲ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆಯ ಎಇಇ ರವಿ ಪವಾರ್ ಸ್ಥಳಕ್ಕೆ ಧಾವಿಸಿ, ಕೊಚ್ಚಿಹೋಗಿರುವ ಸೇತುವೆಯನ್ನು ಪರಿಶೀಲಿಸಿ, ತುರ್ತು ದುರಸ್ಥಿಗೆ ವ್ಯವಸ್ಥೆ ಮಾಡಲು ಮುಂದಾಗಿದ್ದರು.

ಹಳೆಯದಾಗಿದ್ದ ಸೇತುವೆ ಮಳೆ ನೀರಿನ ರಭಸಕ್ಕೆ ಕುಸಿದು ಬಿದ್ದಿದ್ದು, ಕೆಳಭಾಗದಲ್ಲಿನ ಕಾಂಕ್ರಿಟ್, ಪೈಪ್‍ಗಳು ಕೊಚ್ಚಿಕೊಂಡು ಹೋಗಿದ್ದು, ಮೇಲ್ಭಾಗದಲ್ಲಿ ಡಾಂಬರ್ ಮಾತ್ರ ಉಳುದುಕೊಂಡಿದೆ. ಹೀಗಾಗಿ ಶಾಸ್ವತ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.

ಕೇವಲ ಕೆಲವೇ ದಿನಗಳ ಹಿಂದೆ ಟ್ಯಾಂಕರ್ ಮೂಲಕ ನೀರು ಹಾಕಿ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದ ರೈತರು, ಮೃತಶಿರ ಮಳೆಯ ಅಬ್ಬರಕ್ಕೆ ಕಂಗಾಲಾಗಿದ್ದಾರೆ. ತಿಕೋಟಾ ತಾಲೂಕಿಕ ಘೋಣಸಗಿ ಗ್ರಾಮದ ಮಹದೇವ ಪೂಜಾರಿ ಸೇರಿದಂತೆ ಹಲವು ರೈತರ ದ್ರಾಕ್ಷಿ ಬೆಳೆಯ ತೋಟಗಳು ಸಂಪೂರ್ಣ ಜಲಾವೃತವಾಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಅಬ್ಬರದ ಮಳೆಗೆ ತೋಟಗಾರಿಕೆ ಬೆಳೆಗಳು ನೀರಿನಲ್ಲೇ ನಿಂತಿದ್ದು, 3-4 ಅಡಿ ನೀರು ನಿಂತಿರುವ ಕಾರಣ ಹಲವು ರೈತರು ಬೆಳೆಗಳು ಹಾಳಾಗುವ ಭೀತಿ ಎದುರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next